ಸಾರಾಂಶ
ಶಿರಸಿ:
ಉಪಕಾರ ಮಾಡಿದವರಿಗೆ ಪ್ರತ್ಯುಪಕಾರ ಮಾಡುವುದು ದೊಡ್ಡದಲ್ಲ. ಅದು ಸಹಜಗುಣ. ಅಪಕಾರ ಮಾಡಿದವರಿಗೂ ಉಪಕಾರ ಬಯಸುವುದು ಸಾಧು, ಸಂತರ ಗುಣ. ಅಂಥ ಸದ್ಗುಣ ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಬೆಂಗಳೂರಿನ ಕೂಡ್ಲಿ ಶೃಂಗೇರಿ ಮಠದ ಶ್ರೀವಿದ್ಯಾವಿಶ್ವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.ಅವರು ಬುಧವಾರ ಸ್ವರ್ಣವಲ್ಲೀಯಲ್ಲಿ ನಡೆಯುತ್ತಿರುವ ಶಿಷ್ಯ ಸ್ವೀಕಾರ ಮಹೋತ್ಸವದ ನಾಲ್ಕನೇ ದಿನ ನಡೆದ ಧರ್ಮಸಭೆಯ ಸಾನ್ನಿಧ್ಯ ನೀಡಿ ಆಶೀರ್ವಚನನೀಡಿದರು.
ಯಾರ ಮೇಲೂ ಪ್ರತೀಕಾರದಿಂದ ಬದುಕಬಾರದು. ದುಃಖ ಬಿಟ್ಟು ಸಹನೆಯಾಗಿಸಿಕೊಳ್ಳುವುದನ್ನು ಬೆಳೆಸಿಕೊಳ್ಳಬೇಕು. ಈ ಪ್ರಕ್ರಿಯೆ ದೊಡ್ಡ ಅವಸ್ಥೆ. ಇದನ್ನು ಎಲ್ಲರೂ ಸಾಧಿಸಿಕೊಳ್ಳಬೇಕು ಎಂದರು. ಮನುಷ್ಯ ಸದ್ಗುಣ ಬೆಳೆಸಿಕೊಳ್ಳಬೇಕು. ಇದರಿಂದ ವ್ಯಕ್ತಿ ದೈವತ್ವದ ಕಡೆಗೆ ಹೋಗುತ್ತಾನೆ. ತುಳಸಿದಾಸರೂ ಇದನ್ನೇ ಹೇಳಿದ್ದಾರೆ ಎಂದ ಅವರು, ಮಾನವ ಜನ್ಮದ ಮಹತ್ವದ ಅಂಶ ಭಗವತ್ ಸಾಕ್ಷಾತ್ಕಾರ ಎಂದರು. ಗುರುಗಳ ಮಾತಿನಲ್ಲಿ ವಿಶ್ವಾಸವಿಡುವುದೇ ಶ್ರದ್ಧೆ. ಯಜ್ಞ, ದಾನ, ತಪಸ್ಸು ಇವು ಮೂರನ್ನು ಆಚರಿಸುವುದರಿಂದ ಮನುಷ್ಯ ಜನ್ಮ ಪಾವನ ಎನಿಸಿಕೊಳ್ಳುತ್ತದೆ ಎಂದೂ ಹೇಳಿದರು.ಶಿರಳಗಿ ಶ್ರೀರಾಜಾರಾಮ ಕ್ಷೇತ್ರದ ಶ್ರೀಬ್ರಹ್ಮಾನಂದ ಭಾರತೀ ಸ್ವಾಮೀಜಿ ನಿದಿಧ್ಯಾಸನ ಕುರಿತು ಉಪನ್ಯಾಸ ನೀಡಿ, ನಾನು ಎನ್ನುವುದಕ್ಕೆ ಅಸ್ತಿತ್ವ ಇಲ್ಲ. ಅಭಿಮಾನದಿಂದ ಜೀವನ, ಇದುವೇ ದುಃಖ. ಇದನ್ನು ಬದಿಗೆ ಸರಿಸಿ ಕರ್ಮಯೋಗ ಮಾಡಬೇಕು. ಇದು ಸಾಧನೆಯ ಮೊದಲ ಮೆಟ್ಟಿಲು ಎಂದ ಅವರು, ತ್ಯಾಗದಲ್ಲಿ ಭಗವಂತ ಪ್ರಾಪ್ತಿ ಆಗುತ್ತದೆ. ತ್ಯಾಗದ ಮಹೋನ್ನತವಾದ ಆದರ್ಶ ಸಾರುವುದೇ ಸಂನ್ಯಾಸಾಶ್ರಮವಾಗಿದೆ ಎಂದರು.ಸಂಸದ ಅನಂತಕುಮಾರ ಹೆಗಡೆ, ನಮ್ಮ ಮಠಕ್ಕೆ ಹೊಸ ಗುರುಗಳು ಬರುತ್ತಿದ್ದಾರೆ. ಇದೊಂದು ಸಂಭ್ರಮದ ಕ್ಷಣ. ಇದನ್ನು ಭಕ್ತಿಯಿಂದ ಅನುಭವಿಸಬೇಕು. ವ್ಯಾಸ ಪೀಠಗಳ ಅಮೃತ ವಾಹಿನಿ ಹರಿದು ಬರಲಿ. ಈ ಕಾರಣದಿಂದ ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳಿದರು.
ಹೊಳೆನರಸಿಪುರದ ಅಧ್ಯಾತ್ಮ ಪ್ರಕಾಶದ ಶ್ರೀ ಪ್ರಕಾಶಾನಂದೇಂದ್ರ ಸರಸ್ವತೀ ಸ್ವಾಮೀಜಿ, ತುರವೇಕೆರೆ ಶ್ರೀಪ್ರಣವಾನಂದ ತೀರ್ಥ ಸ್ವಾಮೀಜಿ ಪಾಲ್ಗೊಂಡಿದ್ದರು.ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಯೋಗಾಚಾರ್ಯ ಕೆ.ಎಲ್. ಶಂಕರಾಚಾರ್ಯ ಜೋಯಿಸ್ ಯತಿ ಧರ್ಮ ಹಾಗೂ ಲೋಕ ಧರ್ಮದ ಕುರಿತು ಮಾತನಾಡಿದರು.ಮಹೇಶ ಭಟ್ಟ ಜೋಯಿಡಾ, ವಿದ್ಯಾನಂದ ಭಟ್ಟ ಸುಂಕಸಾಳ ವೇದಘೋಷ ಮಾಡಿದರು. ಯಲ್ಲಾಪುರ ಸೀಮೆಯ ಮಾತೆಯರು ಪ್ರಾರ್ಥಿಸಿದರು. ಎನ್.ಜಿ. ಹೆಗಡೆ ಭಟ್ರಕೇರಿ ಸ್ವಾಗತಿಸಿದರು. ಬಿಡುಗಡೆಗೊಂಡ ಆಲೋಕಯಾಂಬ ಲಲಿತೇ ಗ್ರಂಥದ ಕುರಿತು ಡಾ. ಶಂಕರ ಭಟ್ಟ ಉಂಚಳ್ಳಿ ಪರಿಚಯಿಸಿದರು. ಅನಂತ ಭಟ್ಟ ಹುಳಗೋಳ ವಂದಿಸಿದರು.ಡಾ. ವಿನಾಯಕ ಭಟ್ಟ ಗುಂಜಗೋಡ ನಿರ್ವಹಿಸಿದರು.ಸಭೆಗೆ ದರ್ಶನ ಭಾಗ್ಯ ನೀಡಿದ ಸ್ವಾಮೀಜಿ
ಇಡೀ ದಿನ ಬಿಡುವಿಲ್ಲದ ಧಾರ್ಮಿಕ ಚಟುವಟಿಕೆಗಳ ನಡುವಿನಲ್ಲಿಯೂ ಸಹ ನೆರೆದಿದ್ದ ಭಕ್ತರ ಅಪೇಕ್ಷೆಯ ಮೇರೆಗೆ ಕೆಲ ಹೊತ್ತಾದರೂ ಸಭೆಯಲ್ಲಿ ಸಾನ್ನಿಧ್ಯ ನೀಡುವ ಮೂಲಕ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಭಕ್ತರ ಅಭಿಲಾಷೆ ಪೂರ್ಣಗೊಳಿಸಿ ಧನ್ಯತಾ ಭಾವ ಸೃಷ್ಟಿಸಿದರು.ಈ ವೇಳೆ ಮಾತನಾಡಿದ ಶ್ರೀಗಳು, ಇವತ್ತಿನ ಕಾರ್ಯ ಇವತ್ತೇ ಮಾಡಬೇಕಾದ ತ್ವರೆ ಇದೆ. ಹಾಗಾಗಿ ಸಭೆಗೆ ಬರುವ ಆಲೋಚನೆ ಇರಲಿಲ್ಲ. ಆದರೂ ಭಕ್ತರ, ಕಾರ್ಯಕರ್ತರ ಅಪೇಕ್ಷೆಯಂತೆ ಬಂದಿದ್ದೇವೆ. ಬೇಗ ತೆರಳುವುದು ಅನಿವಾರ್ಯ ಆಗಿದೆ. ಆದರೆ, ಸಭೆಯಲ್ಲಿ ಮಾತನಾಡಿದ ಎಲ್ಲರ ಉಪನ್ಯಾಸ ದಾಖಲಿಸಲು ಹೇಳಿದ್ದು, ಆಲಿಸುವುದಾಗಿ ಕೂಡ ಹೇಳಿದರು.ಮನಸ್ಸನ್ನು ಪ್ರಶಾಂತಗೊಳಿಸುವುದೇ ಜ್ಞಾನ. ವಿಕಾರಗೊಳಿಸುವುದೇ ಅಜ್ಞಾನ. ಅಧ್ಯಾತ್ಮ ಜೀವನದ ಮೂಲಕ ಭಗವಂತನಲ್ಲಿ ಸೇರಲು ಯಾರು ಸಿದ್ಧರಿದ್ದಾರೋ ಅವರೇ ಧನ್ಯ ಪುರುಷರು. ಸ್ವರ್ಣವಲ್ಲೀ ಶ್ರೀಗಳು ಶಾಸ್ತ್ರದಲ್ಲಿ ಘನ ವಿದ್ವಾಂಸರು, ತಪಸ್ಸಿನ ಆಚರಣೆಯಲ್ಲಿ ಕಠೋರ ನಿಷ್ಠರಾಗಿದ್ದಾರೂ ಎಲ್ಲರೊಡನೆ ವಿಶ್ವಾಸದಿಂದ ಮಾತನಾಡಿ ಭಕ್ತರ ಮನ ಗೆದ್ದಿದ್ದಾರೆ ಎಂದು ಶಿರಳಗಿ ಸ್ವಾಮೀಜಿ ಹೇಳಿದರು.