ಸಮರ್ಪಕವಾಗಿ ಕುಡಿಯುವ ನೀರು, ಜಾನುವಾರುಗಳ ಮೇವು ಪೂರೈಕೆ, ಅಲ್ಪಕಾಲಿಕ ಬೆಳೆ, ರೈತರು ಬೆಳೆ ವಿಮೆಯ ಪ್ರಯೋಜನ ಪಡೆದುಕೊಳ್ಳಲು ಅನುಕೂಲವಾಗಲು ಸಂಬಂಧಿಸಿದ ಇಲಾಖೆಗಳ ಎಲ್ಲ ಅಧಿಕಾರಿಗಳು ಸಜ್ಜಾಗಬೇಕು ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಸೂಚನೆ ನೀಡಿದರು.

ಕೂಡ್ಲಿಗಿ: ಮಳೆ ಕೊರತೆಯಿಂದ ತಾಲೂಕಿನಲ್ಲಿ ಸಮರ್ಪಕವಾಗಿ ಕುಡಿಯುವ ನೀರು, ಜಾನುವಾರುಗಳ ಮೇವು ಪೂರೈಕೆ, ಅಲ್ಪಕಾಲಿಕ ಬೆಳೆ, ರೈತರು ಬೆಳೆ ವಿಮೆಯ ಪ್ರಯೋಜನ ಪಡೆದುಕೊಳ್ಳಲು ಅನುಕೂಲವಾಗಲು ಸಂಬಂಧಿಸಿದ ಇಲಾಖೆಗಳ ಎಲ್ಲ ಅಧಿಕಾರಿಗಳು ಸಜ್ಜಾಗಬೇಕು ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಸೂಚನೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬರದ ಸಂದರ್ಭದಲ್ಲಿ ನಿಷ್ಕ್ರೀಯವಾಗಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಶಾಸಕರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕೃಷಿ ನಿರ್ದೇಶಕ ತೇಜವರ್ಧನ್ ಮಾತನಾಡಿ, ಈಗಾಗಲೇ ಸರ್ಕಾರದ ಯೋಜನೆಯಲ್ಲಿ ಬಂದಿರುವ ಹನಿ ಡ್ರಿಪ್ ವಿತರಣೆ ಮಾಡಲಾಗಿದೆ. ಮಳೆ ಕೊರತೆಯಿಂದ ತಾಲೂಕಿನಲ್ಲಿ ೪೭,೯೧೫ ಹೆಕ್ಟೇರ್ ಬಿತ್ತನೆ ಗುರಿಯ ಪೈಕಿ ಕೇವಲ ೧೪,೧೯೪ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದ್ದು, ಇದರಲ್ಲಿ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಎರಡು ಮೂರು ದಿನಗಳಲ್ಲಿ ಮಳೆ ಬಾರದೆ ಇದ್ದರೆ ಬಾಡಿ ಹೋಗಲಿದೆ. ಇನ್ನು ೩೩೭೦೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಾಗಿದೆ ಎಂದು ತಿಳಿಸಿದರು.

ವಿದ್ಯುತ್ ಕಂಬಗಳು ಹಾಳಾಗಿವೆ. ಗ್ರಾಮಗಳಲ್ಲಿ ವಿದ್ಯುತ್‌ ತಂತಿ ನೆಲಕ್ಕೆ ತಾಗುವಂತಿವೆ. ಈ ಕಂಬಗಳ ದುರಸ್ತಿ ಆಗುತ್ತಿಲ್ಲ ಎಂದು ರೈತರಿಂದ ದೂರುಗಳು ಬಂದಿವೆ. ಏಕೆ ವಿಳಂಬ ನೀತಿ ಅನುಸರಿಸುತ್ತಿದ್ದೀರಿ ಎಂದು ಶಾಸಕರು ಜೆಸ್ಕಾಂ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಇಲ್ಲ-ಸಲ್ಲದ ಸಬೂಬು ನೀಡುವುದರ ಮೂಲಕ ಅಧಿಕಾರಿಗಳು ನುಣುಚಿಕೊಂಡರು.

ಕುಡಿಯುವ ನೀರು:

ಎಲ್ಲ ಹಳ್ಳಿಗಳಿಗೂ ಸಮಸ್ಯೆಯಾಗದಂತೆ ನೀರು ನೀಡಬೇಕು. ಅವಶ್ಯಕತೆ ಇದ್ದಲ್ಲಿ ಬೋರ್‌ವೆಲ್‌ ವ್ಯವಸ್ಥೆ ಮಾಡಿ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಪ್ರಸನ್ನ ಅವರಿಗೆ ಸೂಚಿಸಿದರು.

ಈಗಾಗಲೇ ತಾಲೂಕಿನ ಓಬಳಾಪುರ, ಅಡವಿ ಸೂರವ್ವನಹಳ್ಳಿ ಕ್ಯಾಸನಕೆರೆ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಂಡುಬಂದಿದ್ದು, ಖಾಸಗಿ ಬೋರ್‌ವೆಲ್ ಹಾಗೂ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಲಿದೆ. ಕುಡಿಯುವ ನೀರು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿರಬೇಕು ಎಂದರು.

ಮುಂಗಾರು ಮಳೆ ಶೇ. ೬೦ರಷ್ಟು ಕೊರತೆ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಮಳೆ ಕೊರತೆ ಇನ್ನಷ್ಟು ಎದುರಾಗುವ ಸಾಧ್ಯತೆಗಳೂ ಇರಬಹುದು. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆ ಬಾಧಿಸಬಹುದು, ಕುಡಿಯುವ ನೀರಿಗೆ ಹಾಹಾಕಾರವಾಗದಂತೆ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಲ್ಲಿ ಸಂಬಂಧಿಸಿದ ಅಧಿಕಾರಿಗಳು ಮುಂಜಾಗ್ರತಾ ಹಾಗೂ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕರು ತಿಳಿಸಿದರು.

ಈ ಸಂದರ್ಭದಲ್ಲಿ ತಾಪಂ ಇಒ ನರಸಪ್ಪ, ಕೊಟ್ಟೂರು ತಹಸೀಲ್ದಾರ್ ಜಿ.ಕೆ. ಅಮರೇಶ್, ತಾಪಂ ಆಡಳಿತಾಧಿಕಾರಿ ಮಾರ್ಕಂಡೇಯ, ಕೊಟ್ಟೂರು ತಾಪಂ ಇಒ ಆನಂದ್, ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ವೆಂಕಟೇಶ್, ಪಂಚಾಯತ್ ಎಂಜಿನೀಯರಿಂಗ್ ಇಲಾಖೆಯ ಎಇಇ ಮಲ್ಲಿಕಾರ್ಜುನ, ಲೋಕೋಪಯೊಗಿ ಇಲಾಖೆ ಎಇಇ ಕೆ. ನಾಗನಗೌಡ, ತಾಲೂಕು ವೈಧ್ಯಾಧಿಕಾರಿ ಡಾ. ಎಸ್.ಪಿ. ಪ್ರದೀಪ್, ಬಿಸಿಎಂ ಇಲಾಖೆ ಅಧಿಕಾರಿ ಶ್ಯಾಮಪ್ಪ, ಸಮಾಜ ಕಲ್ಯಾಣ ಅಧಿಕಾರಿ ಜಗದೀಶ ದಿಗಡೂರು, ತಾಲೂಕು ಪಪಂ ಕಲ್ಯಾಣ ಅಧಿಕಾರಿ ಮೆಹಬೂಬ್ ಭಾಷಾ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ಇದ್ದರು.