ನಾಗರಿಕರಿಗೆ ಅನುಕೂಲವಾಗುವಂತಹ ಯೋಜನೆ ರೂಪಿಸಿ ಅನುಷ್ಠಾನಕ್ಕೆ ಮಂಡಳಿಯ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಾಗರಿಕರಿಗೆ ಅನುಕೂಲವಾಗುವಂತಹ ಯೋಜನೆ ರೂಪಿಸಿ ಅನುಷ್ಠಾನಕ್ಕೆ ಮಂಡಳಿಯ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ್‌ ಹೇಳಿದರು.

ಬೆಂಗಳೂರು ಜಲಮಂಡಳಿಯ ಎಂಜಿನಿಯರ್‌ ಸಂಘ ಶನಿವಾರ ಕಾವೇರಿ ಭವನದಲ್ಲಿ ಆಯೋಜಿಸಿದ್ದ ತಾಂತ್ರಿಕ ದಿನಚರಿ 2026 ಬಿಡುಗಡೆ ಹಾಗೂ ನಿವೃತ್ತ ಎಂಜಿನಿಯರ್‌ಗೆ ಅಭಿನಂದನೆ ಮಾಡಿ ಮಾತನಾಡಿದ ಅವರು, ಜಲ ಮಂಡಳಿಯ ಉದ್ದೇಶ ನಾಗರಿಕರಿಗೆ ಗುಣಮಟ್ಟ ಕುಡಿಯುವ ನೀರಿನ ಪೂರೈಸುವುದು ಮತ್ತು ಒಳಚರಂಡಿ ವ್ಯವಸ್ಥೆ ನಿರ್ವಹಣೆ ಮಾಡುವುದಾಗಿದೆ. ಬಹಳ ಶಿಸ್ತಿನಿಂದ ಕೆಲಸ ಮಾಡಬೇಕು. ಜತೆಗೆ ಬರ ಸೇರಿದಂತೆ ಯಾವುದೇ ಪರಿಸ್ಥಿತಿ ಎದುರಾದರೂ ಎದುರಿಸಲು ಸಿದ್ಧರಾಗಿರಬೇಕು ಎಂದು ಸಲಹೆ ನೀಡಿದರು.

ಬೆಂಗಳೂರು ಇತಿಹಾಸದಲ್ಲಿ ಮಂಡಳಿ ಸಾಧನೆ ಕೂಡ ಸ್ಥಾನ ಪಡೆದಿದೆ. ಇದಕ್ಕೆ ಪ್ರಮುಖ ಕಾರಣ, ಎಂಜಿನಿಯರ್‌ಗಳ ಪರಿಶ್ರಮ, ದೂರದೃಷ್ಟಿಯಾಗಿದೆ. ಹೊಸ ಆಲೋಚನೆಗಳ ಮೂಲಕ ನೀಡುವ ಸೇವೆಯನ್ನು ಮತ್ತಷ್ಟು ಉತ್ತಮ ಪಡಿಸಲು ಶ್ರಮಿಸೋಣ ಎಂದರು.

ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕಿ ಡಾ.ಜಿ. ಮಾಧವಿ ಲತಾ ಮಾತನಾಡಿ, ಭಾರತದ ನಿರ್ಮಾಣಕ್ಕೆ ಸಿವಿಲ್‌, ಮೆಕಾನಿಲ್‌ ಎನ್ನದೇ ಪ್ರತಿಯೊಬ್ಬ ಎಂಜಿನಿಯರ್‌ಗಳ ಶ್ರಮ ಬಹಳಷ್ಟಿದೆ. ನೀರಿನ ಸೋರಿಕೆ, ಅನಿರೀಕ್ಷಿತ ಸವಾಲುಗಳನ್ನು ಸಮರ್ಪಕವಾಗಿ ಎದುರಿಸುತ್ತಾ ದೂರದ ಕಾವೇರಿ ನದಿಯಿಂದ ಬೆಂಗಳೂರು ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುತ್ತಿರುವುದು ಶ್ಲಾಘನೀಯ ಎಂದರು.

ಈ ವೇಳೆ ಪ್ರಧಾನ ಮುಖ್ಯ ಎಂಜಿನಿಯರ್ ಬಿ.ಎಸ್. ದಲಾಯತ್, ಉಪಾಧ್ಯಕ್ಷ ರಮಾನಂದ, ಕಾರ್ಯದರ್ಶಿ ಎ. ರಾಜಶೇಖರ, ಖಜಾಂಚಿ ಎಸ್‌. ಚಂದ್ರಶೇಖರ್, ಜಲ ಮಂಡಳಿ ಎಂಜಿನಿಯರ್‌ ಸಂಘದ ಅಧ್ಯಕ್ಷ ಬಿ.ಸಿ. ಗಂಗಾಧರ ಮೊದಲಾದವರಿದ್ದರು.