ಗುರು-ಹಿರಿಯರ ಮೇಲೆ ಗೌರವವಿರಲಿ: ಹನುಮಂತಪ್ಪ

| Published : Jan 31 2024, 02:15 AM IST

ಸಾರಾಂಶ

ವಿಜಯಪುರ: ತನ್ನ ವಿದ್ಯಾರ್ಥಿಯೊಬ್ಬ ಪ್ರಯೋಜಕನಾಗಿ ತನ್ನ ಮುಂದೆ ನಿಂತಾಗ ಆ ಶಿಕ್ಷಕನಿಗಾಗುವ ಸಂತೋಷ, ವೃತ್ತಿಗಾಗುವ ಸಾರ್ಥಕತೆ ಮತ್ಯಾವುದರಲ್ಲಿಯೂ ಸಿಗುವುದಿಲ್ಲ ಎಂದು ನಿವೃತ್ತ ಶಿಕ್ಷಕ ಹನುಮಂತಪ್ಪ ಸರಗಪ್ಪ ದಳವಾಯಿ ಹೇಳಿದರು.

ವಿಜಯಪುರ: ತನ್ನ ವಿದ್ಯಾರ್ಥಿಯೊಬ್ಬ ಪ್ರಯೋಜಕನಾಗಿ ತನ್ನ ಮುಂದೆ ನಿಂತಾಗ ಆ ಶಿಕ್ಷಕನಿಗಾಗುವ ಸಂತೋಷ, ವೃತ್ತಿಗಾಗುವ ಸಾರ್ಥಕತೆ ಮತ್ಯಾವುದರಲ್ಲಿಯೂ ಸಿಗುವುದಿಲ್ಲ ಎಂದು ನಿವೃತ್ತ ಶಿಕ್ಷಕ ಹನುಮಂತಪ್ಪ ಸರಗಪ್ಪ ದಳವಾಯಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ೧೯೮೩ರಿಂದ ೮೯ರವರೆಗಿನ ಹಳೆಯ ವಿದ್ಯಾರ್ಥಿಗಳ ಸಂಘದ ವಿದ್ಯಾರ್ಥಿಗಳಿಂದ ಗುರುವಂದನೆ ಸ್ವೀಕರಿಸಿ ಮಾತನಾಡಿದ ಅವರು, ಯಾವ ವಿದ್ಯಾರ್ಥಿ ಆಸಕ್ತಿಯಿಂದ ಶಿಕ್ಷಕರ ಮಾರ್ಗದರ್ಶನವನ್ನು ತನ್ನ ಜೀವನದಲ್ಲಿ ರೂಢಿಸಿಕೊಳ್ಳುತ್ತಾರೋ ಅವರು ಮಾತ್ರ ಪ್ರಯೋಜಕರಾಗಲು ಸಾಧ್ಯ. ಗುರು-ಹಿರಿಯರ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು. ತಂದೆ-ತಾಯಿ ಬಗ್ಗೆ ಅಭಿಮಾನ ಹೊಂದಿರಬೇಕು. ಆಗ ಮಾತ್ರ ಉತ್ತಮ ವ್ಯಕ್ತಿಗಳಾಗಿ, ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದರು.

ಪುರಸಭೆ ಅಧ್ಯಕ್ಷೆ ವಿಮಲಾಬಸವರಾಜ್ ಮಾತನಾಡಿ, ನಮ್ಮ ದೇಶದ ವೈಶಿಷ್ಟ್ಯಎಂದರೆ ಗುರು-ಶಿಷ್ಯರ ಪರಂಪರೆ. ಗುರುಗಳೇ ನಮ್ಮನ್ನು ಅಜ್ಞಾನದಿಂದ ಹೊರಗೆ ತೆಗೆಯುತ್ತಾರೆ. ಗುರುಗಳು ನಮ್ಮ ಜೀವನದಲ್ಲಿನ ಅಜ್ಞಾನವನ್ನು ದೂರ ಮಾಡಿ, ಜೀವನವನ್ನು ಆನಂದದಿಂದ ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ಕಲಿಸಿದ್ದಾರೆ. ಅವರ ಮಾರ್ಗದರ್ಶನವೇ ನಮಗೆ ದಾರಿದೀಪ ಎಂದರು.

ನಿವೃತ್ತ ಶಿಕ್ಷಕ ಶಾಂತವೀರಯ್ಯ ಮಾತನಾಡಿ, ಗುರುವೆಂದರೆ ವಿದ್ಯಾರ್ಥಿಯಲ್ಲಿನ ಅಂಧಕಾರವನ್ನು ತೊಲಗಿಸಿ, ಬೆಳಕಿನೆಡೆಗೆ ಮುನ್ನಡೆಸುವ ಸಾಕಾರ ಮೂರ್ತಿ. ಶಿಕ್ಷಕರೆಂದರೆ ಕೇವಲ ಪಠ್ಯಪುಸ್ತಕದಲ್ಲಿನ ಪಾಠ ಬೋಧನೆ ಮಾಡುವವರು ಮಾತ್ರವಲ್ಲ, ವಿದ್ಯಾರ್ಥಿಗಳನ್ನು ಸನ್ಮಾರ್ಗದಲ್ಲಿ ಮುನ್ನಡೆಸುವವರು, ಪಠ್ಯದ ಜೊತೆಗೆ ಜೀವನದ ಮೌಲ್ಯಗಳನ್ನು ತುಂಬುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ಶಿಕ್ಷಕರಿಗೆ ಮಹತ್ವದ ಸ್ಥಾನವಿದೆ ಎಂದರು.

ಪುರಸಭೆ ಸದಸ್ಯ ಎ.ಆರ್.ಹನಿಪುಲ್ಲಾ, ವಿ.ನಂದಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಜೆ.ಎನ್.ಶ್ರೀನಿವಾಸ್, ಬೇಕರಿ ಮಂಜುನಾಥ್, ಎಸ್.ರಮೇಶ್, ಆರ್.ಮುನಿರಾಜು, ಸುಜಾತಮ್ಮ, ಗಾಯತ್ರಿದೀಕ್ಷಿತ್, ದಿವಾಕರ್ ಬಾಬು, ಮಂಡಿಬೆಲೆ ವಿಜಯಕುಮಾರ್, ಯಲುವಹಳ್ಳಿ ಮೋಹನ್, ಜಂಗಮಕೋಟೆ ಸತೀಶ್, ಗುರುಪ್ರಸಾದ್, ಭಾರತಿ, ಮಂಜುಳಾ ಹಾಜರಿದ್ದರು.

(ಫೋಟೋ ಕ್ಯಾಫ್ಷನ್‌)ವಿಜಯಪುರದ ಸರ್ಕಾರಿ ಪ್ರೌಢಶಾಲೆಯ ೧೯೮೩ರಿಂದ ೮೯ರವರೆಗಿನ ಹಳೆಯ ವಿದ್ಯಾರ್ಥಿಗಳ ಸಂಘದ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.