ವಿದ್ಯುತ್ ಕೆಲಸದಲ್ಲಿ ಸುರಕ್ಷತೆ ಇರಲಿ: ನಲಿನ್ ಅತುಲ್

| Published : Nov 18 2024, 12:01 AM IST

ವಿದ್ಯುತ್ ಕೆಲಸದಲ್ಲಿ ಸುರಕ್ಷತೆ ಇರಲಿ: ನಲಿನ್ ಅತುಲ್
Share this Article
  • FB
  • TW
  • Linkdin
  • Email

ಸಾರಾಂಶ

ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಕೆಲಸ ಮಾಡುವಾಗ ಅತ್ಯಂತ ಸುರಕ್ಷತೆಯಿಂದ ಕಾರ್ಯನಿರ್ವಹಿಸಬೇಕು.

ಜಿಲ್ಲೆಯಲ್ಲಿ ಜಿರೋ ಅಪಘಾತ ವಲಯ ಸೃಷ್ಟಿಯಾಗಬೇಕು । ಲೈನ್ ಮ್ಯಾನ್‌ಗಳಿಗೆ ವಿದ್ಯುತ್ ಸುರಕ್ಷತಾ ಜಾಗೃತಿ ಅರಿವು ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಹೇಳಿಕೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಕೆಲಸ ಮಾಡುವಾಗ ಅತ್ಯಂತ ಸುರಕ್ಷತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.

ಶನಿವಾರ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಕೊಪ್ಪಳ ಕಾರ್ಯ ಮತ್ತು ಪಾಲನಾ ವಿಭಾಗದಿಂದ ಹಮ್ಮಿಕೊಂಡಿದ್ದ ಮಾರ್ಗದಾಳು, ಸಹಾಯಕ ಮಾರ್ಗದಾಳು ಹಾಗೂ ಕಿರಿಯ ಮಾರ್ಗದಾಳುಗಳ ವಿದ್ಯುತ್ ಸುರಕ್ಷತಾ ಜಾಗೃತಿ ಅರಿವು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಬಿಇ ಎಲೆಕ್ಟ್ರಾನಿಕ್ ಪದವಿ ಪಡೆದಿರುವ ನನಗೆ ವಿದ್ಯುತ್ ಸರಬರಾಜು ನಿಗಮದಲ್ಲಿ ಕಾರ್ಯನಿರ್ವಹಿಸಿರುವ ಅನುಭವವಿದೆ. ಎಲ್ಲಾ ಮಾರ್ಗದಾಳುಗಳು ಕರ್ತವ್ಯದ ವೇಳೆಯಲ್ಲಿ ಕಡ್ಡಾಯವಾಗಿ ಸುರಕ್ಷತಾ ಉಪಕರಣ ಬಳಸಬೇಕು ಹಾಗೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ ವಿದ್ಯುತ್ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಈ ಹಿನ್ನೆಲೆ ಜಿಲ್ಲೆಯಲ್ಲಿ ಯಾವುದೇ ವಿದ್ಯುತ್ ಅಪಘಾತಗಳು ನಡೆದಯದಂತೆ ಎಚ್ಚರಿಕೆಯಿಂದ ಕೆಲಸ ಮಾಡುವ ಮೂಲಕ ಜಿಲ್ಲೆಯಲ್ಲಿ ಜಿರೋ ಅಪಘಾತ ವಲಯ ಸೃಷ್ಟಿಯಾಗಬೇಕು ಎಂದು ಹೇಳಿದರು.

ಜೆಸ್ಕಾಂ ಕೊಪ್ಪಳ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಫಣಿ ರಾಜೇಶ್ ಮಾತನಾಡಿ, ಲೈನ್ ಮ್ಯಾನ್‌ಗಳ ಕಾರ್ಯ ಪ್ರಮುಖವಾಗಿದೆ. ಅವರಿಗೆ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಈ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಲೈನ್ ಮ್ಯಾನ್‌ಗಳು ತರಬೇತಿಯ ಸದುಪಯೋಗ ಪಡೆದುಕೊಂಡು ಸುರಕ್ಷತೆ ಜೊತೆಗೆ ಅತ್ಯಂತ ಜಾಗೃತಿಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಕಾರ್ಯನಿರ್ವಾಹಕ ಅಭಿಯಂತರರಾದ ರಾಜೇಶ ವರ್ಮಾ, ಮೊಟ್ಲಾ ನಾಯ್ಕ್ ಹಾಗೂ ನಜಮುನ್ನಿಸಾ, ಉಪ ಲೆಕ್ಕ ನಿಯಂತ್ರಣಾಧಿಕಾರಿ ವೀಣಾ ಕುಮಾರಿ, ಲೆಕ್ಕಾಧಿಕಾರಿ ತಿರುಮಲೈ, ವಿದ್ಯುತ್ ನೌಕರರ ಸಂಘದ ಪದಾಧಿಕಾರಿಗಳಾದ ಮನೋಹರ, ನಾಗರಾಜ ಗಾಯಕವಾಡ್, ಹನುಮಂತಪ್ಪ ಹುನಗುಂದ, ಅನಾಳಪ್ಪ, ಹನುಮಂತಪ್ಪ ಹಾದಿಮನಿ ಸೇರಿದಂತೆ ಎಲ್ಲಾ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಜೆಸ್ಕಾಂ ಸಿಬ್ಬಂದಿ ಇದ್ದರು.ತರಬೇತಿ:ಕಾರ್ಯಾಗಾರದಲ್ಲಿ ಡಾ. ಶಿವಪ್ಪ ಎಸ್., ಬಿ.ಆರ್. ದೇಸಾಯಿ, ವೆಂಕಟೇಶ್, ಡಾ. ಚನ್ನಕೇಶವನ ಹಾಗೂ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ರಮೇಶ ವಿದ್ಯುತ್ ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ನೀಡಿದರು. ಮಾರ್ಗದಾಳು, ಸಹಾಯಕ ಮಾರ್ಗದಾಳು ಹಾಗೂ ಕಿರಿಯ ಮಾರ್ಗದಾಳುಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಮೇಲುಸ್ತುವಾರಿಯನ್ನು ಹಿರಿಯ ಸಹಾಯಕ ನಾಗರಾಜ ಗಾಯಕವಾಡ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಲ್.ಅರುಣ ಕುಮಾರ ವಹಿಸಿದ್ದರು. ಕಿರಿಯ ಅಭಿಯಂತರ ಗಿರೀಶ್ ಎಂ. ನಿರೂಪಿಸಿ, ವಂದಿಸಿದರು.