ವಿದ್ಯೆ ನೀಡಿದ ಸಂಸ್ಥೆಗೆ ಬೆನ್ನೆಲುಬಾಗಿ: ಜ್ಯೋತಿ ಮಿರ್ಜಾನಕರ್

| Published : Jul 07 2024, 01:21 AM IST

ಸಾರಾಂಶ

75 ವರ್ಷಗಳ ಇತಿಹಾಸ ಇರುವ ಗೋಕರ್ಣ ಭದ್ರಕಾಳಿ ಪ್ರೌಢಶಾಲೆಯ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿ, ಖ್ಯಾತ ವಿಜ್ಞಾನಿ ಡಾ. ನಾರಾಯಣ ಹೊಸಮನೆ ಮಾರ್ಗದರ್ಶನದಂತೆ ಟ್ರಸ್ಟ್ ರಚಿಸಿಕೊಂಡು ಹಲವು ಕಾರ್ಯಗಳನ್ನು ಮಾಡುತ್ತಿದ್ದು, ಇದಕ್ಕೆ ಎಲ್ಲರೂ ಸಹಕಾರ ಅಗತ್ಯ ಎಂದು ಚಾಮಿ ವಿದ್ಯಾವಾಹಿನಿ ಟ್ರಸ್ಟ್‌ನ ಅಧ್ಯಕ್ಷೆ ಜ್ಯೋತಿ ಮಿರ್ಜಾನಕರ್ ಹೇಳಿದರು.

ಗೋಕರ್ಣ: ವಿದ್ಯೆ ನೀಡಿದ ಶಾಲೆಗೆ ನಾವು ಕೊಡುತ್ತಿರುವ ಕೊಡುಗೆ ಒಂದು ಚಿಕ್ಕ ಸೇವೆ, ಇದನ್ನು ಬಳಸಿಕೊಳ್ಳುವ ಇಂದಿನ ವಿದ್ಯಾರ್ಥಿಗಳು ಮುಂದಿನ ದಿನದಲ್ಲಿ ಉನ್ನತ ಸ್ಥಾನಕ್ಕೆ ಹೋದಾಗ ಪುನಃ ನಿಮಗೆ ವಿದ್ಯೆ ನೀಡಿದ ಶಿಕ್ಷಣ ಸಂಸ್ಥೆಗೆ ನೆರವಾಗುವ ಮೂಲಕ ವಿದ್ಯೆ ಪಡೆದ ಸಂಸ್ಥೆಗೆ ಬೆನ್ನೆಲುಬಾಗಿರಬೇಕು ಎಂದು ಚಾಮಿ ವಿದ್ಯಾ ವಾಹಿನಿ ಟ್ರಸ್ಟ್‌ನ ಅಧ್ಯಕ್ಷೆ ಜ್ಯೋತಿ ಮಿರ್ಜಾನಕರ್ ಹೇಳಿದರು.

ಇಲ್ಲಿಯ ಭದ್ರಕಾಳಿ ಪ್ರೌಢಶಾಲೆಯಲ್ಲಿ ಶಾಲಾ ಆಡಳಿತ ಮಂಡಳಿಯಿಂದ ನಡೆದ ದಾನ-ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು. ಇಲ್ಲಿನ ಪ್ರತಿಷ್ಠಿತ ಸಂಸ್ಥೆ ಆದ ಕೆನರಾ ಶಿಕ್ಷಣ ಪ್ರಸಾರಕ ಮಂಡಳಿಯ ಭದ್ರಕಾಳಿ ಪ್ರೌಢಶಾಲೆಯಲ್ಲಿ ಅಂದು ನಾವು ವಿದ್ಯೆ ಪಡೆದಿದ್ದೇವೆ. 75 ವರ್ಷಗಳ ಇತಿಹಾಸ ಇರುವ ಈ ಶಾಲೆಯ ಅಭಿವೃದ್ಧಿಗೋಸ್ಕರ ಹಳೆಯ ವಿದ್ಯಾರ್ಥಿ ಖ್ಯಾತ ವಿಜ್ಞಾನಿ ಡಾ. ನಾರಾಯಣ್ ಹೊಸಮನೆ ಅವರ ಮಾರ್ಗದರ್ಶನದಂತೆ ಅವರ ಹೆಸರಿನಲ್ಲಿ ಟ್ರಸ್ಟ್ ರಚಿಸಿಕೊಂಡು ಹಲವು ಕಾರ್ಯಗಳನ್ನು ಮಾಡುತ್ತಿದ್ದು, ಇದಕ್ಕೆ ಎಲ್ಲರೂ ಸಹಕಾರ ಅಗತ್ಯ ಎಂದರು. ಅಲ್ಲದೆ ಪ್ರಾರಂಭಿಸಲಿರುವ ಹಲವು ಯೋಜನೆಗಳನ್ನು ವಿವರಿಸಿದರು.

ರಾಜೀವ್ ಮಿರ್ಜಾನಕರ ಮಾತನಾಡಿ, ನಾವು ಎಷ್ಟೇ ದೊಡ್ಡ ಸ್ಥಾನದಲ್ಲಿ ಇದ್ದರೂ ನಮ್ಮ ಮೂಲವನ್ನು ಮರೆಯಬಾರದು. ನಮ್ಮ ಊರು, ನಮಗೆ ವಿದ್ಯೆ ನೀಡಿದ ಶಾಲಾ-ಕಾಲೇಜಿಗೆ ಸಾಧ್ಯವಾದಷ್ಟು ನೆರವಾಗಬೇಕು ಎಂದರು.

ಚಾಮಿ ವಿದ್ಯಾವಾಹಿನಿ ಟ್ರಸ್ಟ್ ಉಪಾಧ್ಯಕ್ಷ ಪ್ರಕಾಶ್ ಕಾಮತ್ ಮಾತನಾಡಿ, ಭದ್ರಕಾಳಿ ಶಿಕ್ಷಣ ಸಂಸ್ಥೆಗೆ ಭವ್ಯ ಇತಿಹಾಸವಿದೆ. ಇಲ್ಲಿ ಮತ್ತಷ್ಟು ಸೌಲಭ್ಯಗಳೊಂದಿಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ನಮ್ಮ ಸಂಸ್ಥೆಯ ನೆರವು ನಿರಂತರ ಮುಂದುವರಿಯುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆನರಾ ಕೇಂದ್ರ ಶಿಕ್ಷಣ ಪ್ರಸಾರಕ ಮಂಡಳದ ಅಧ್ಯಕ್ಷ ಡಾ. ವಿ.ಆರ್. ಮಲ್ಲನ್ ಮಾತನಾಡಿ, ಹಳೆಯ ವಿದ್ಯಾರ್ಥಿಗಳ ನೆರವಿನಿಂದ ವಿದ್ಯಾಸಂಸ್ಥೆಯನ್ನು ನಡೆಸಲು ಅನುಕೂಲವಾಗುತ್ತಿದೆ ಎಂದರು.ಪ್ರಾಚಾರ್ಯ ಎಸ್.ಸಿ. ನಾಯಕ, ಪ್ರೌಢಶಾಲಾ ಮುಖ್ಯಾಧ್ಯಾಪಕ ಸಿ.ಜಿ. ನಾಯಕ ದೊರೆ, ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯಾಧ್ಯಾಪಕಿ ರೇವತಿ ಮಲ್ಲನ್, ಶಾಲಾ ಆಡಳಿತ ಮಂಡಳಿಯ ಕೋಶಾಧ್ಯಕ್ಷ ರವೀಂದ್ರ ಕೊಡ್ಲೆಕೆರೆ, ಡಾ. ರಾಮಚಂದ್ರ ಮಲ್ಲನ್ ಮಾತನಾಡಿ ದಾನಿಗಳ ಸಹಾಯವನ್ನು ಸ್ಮರಿಸಿ, ಅಭಿನಂದಿಸಿದರು.

ಆಡಳಿತ ಮಂಡಳಿಯ ಸದಸ್ಯ ಗುರುಪ್ರಕಾಶ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಚಾಮಿ ಟ್ರಸ್ಟ್‌ ಖಜಾಂಚಿ ರವಿ ಗುನಗಾ, ಸದಸ್ಯರಾದ ಗಣಪತಿ ಅಡಿ, ಪ್ರಕಾಶ್ ನಾಡ್ಕರ್ಣಿ, ಆಡಳಿತ ಮಂಡಳಿ ಸದಸ್ಯರಾದ ರಮೇಶ್ ಪ್ರಸಾದ್, ವಸಂತ್ ರಾಜನ ಕೊಡ್ಲೆಕೆರೆ ಉಪಸ್ಥಿತರಿದ್ದರು.

ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಜಿ.ಎನ್. ನಾಯಕ ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ರಾಮಮೂರ್ತಿ ನಾಯಕ ವಂದಿಸಿದರು. ಉಪನ್ಯಾಸಕಿ ಪಲ್ಲವಿ ಹೆಗಡೆ ಕಾರ್ಯಕ್ರಮ ನಿರ್ವಹಿಸಿದ್ದರು. ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.