ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವ ಪ್ರಕರಣಗಳ ಬಗ್ಗೆ ಅರಿವುಂಟಾಗುವಂತೆ ಸಮಾಜಕ್ಕೆ ಸಂದೇಶಗಳನ್ನು ನೀಡುವಂತಾಗಬೇಕು.

ಸಬರಮತಿ ಪ್ರೌಢಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಭು ನೀಲಾಚಾರಿ ಬಡಿಗೇರ

ಕನ್ನಡಪ್ರಭ ವಾರ್ತೆ ಕೋಲಾರ

ಮಕ್ಕಳ ಶಿಕ್ಷಣದ ಹಕ್ಕು ಕಸಿದು ಅವರನ್ನು ಬಾಲ್ಯವಿವಾಹ, ಬಾಲಕಾರ್ಮಿಕತೆಗೆ ನೂಕುವ ಪ್ರಯತ್ನದ ಕುರಿತು ಎಚ್ಚರ ಅಗತ್ಯವಾಗಿದ್ದು, ಶಿಕ್ಷಕರೂ ಸಹಾ ಈ ಕುರಿತು ಗಮನಹರಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಭು ನೀಲಾಚಾರಿ ಬಡಿಗೇರ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲ್ಲೂಕಿನ ಸುಗಟೂರು ಸಬರಮತಿ ಪ್ರೌಢಶಾಲೆ ಆಶ್ರಯದಲ್ಲಿ ಶಾಲೆಯ ಆವರಣದಲ್ಲಿ ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿ,ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಾಲ್ಯವಿವಾಹ, ಮಾದಕ ವಸ್ತುಗಳ ನಿರ್ಮೂಲನೆ, ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಿದ ಅವರು, ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವ ಪ್ರಕರಣಗಳ ಬಗ್ಗೆ ಅರಿವುಂಟಾಗುವಂತೆ ಸಮಾಜಕ್ಕೆ ಸಂದೇಶಗಳನ್ನು ನೀಡುವಂತಾಗಬೇಕು ಎಂದರು.

ಬಾಲ ಕಾರ್ಮಿಕರಾಗಿ ಯಾರೇ ಕೆಲಸ ಮಾಡುತ್ತಿರುವುದು ಕಂಡು ಬಂದರೆ ಕೂಡಲೇ ಗಮನಕ್ಕೆ ತನ್ನಿ ಸಹಾಯವಾಣಿಗೆ ದೂರು ನೀಡಿ ಎಂದ ಅವರು, ಗ್ಯಾರೇಜ್, ಇಟ್ಟಿಗೆ ಕಾರ್ಖಾನೆಗಳಲ್ಲಿ ಹೊರ ರಾಜ್ಯದ ಕಾರ್ಮಿಕರು ತಮ್ಮ ಮಕ್ಕಳನ್ನು ದುಡಿಸುತ್ತಿದ್ದರೆ ಅವರ ಮನವೊಲಿಸಿ ಶಾಲೆಗೆ ಸೇರಿಸುವ ಕೆಲಸವಾಗಬೇಕು ಎಂದರು.

ಬಾಲ್ಯವಿವಾಹದ ಜತೆಗೆ ಮಕ್ಕಳಿಗೆ ಬಾಲ್ಯವಿವಾಹನವೂ ಮಾರಕವಾಗಿದೆ, ಶಾಲೆಗೆ ಹೋಗುವ ಮಕ್ಕಳಿಗೆ ಮದುವೆ ಮಾಡಿದರೆ ಅಂತಹ ಮದುವೆಗೆ ಕಾರಣರಾದ ಪೋಷಕರಿಗೆ ಮಾತ್ರವಲ್ಲ, ಪುರೋಹಿತರಿಗೆ, ಮದುವೆಗೆ ಹೋದ ಎಲ್ಲರಿಗೂ ಶಿಕ್ಷೆ ಖಚಿತ ಎಂದು ಎಚ್ಚರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ್ ಮಾತನಾಡಿ, ಬಾಲ ಕಾರ್ಮಿಕರ ರಕ್ಷಣೆಗಾಗಿಯೇ ಇಲಾಖೆ ಇದೆ. ಶಾಲೆ ಕಾಲೇಜು ಆವರಣದಿಂದ ೨೦೦ ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ನಿಷೇಧವಿದೆ, ಒಂದೆರಡು ವರ್ಷ ಕಷ್ಟಪಟ್ಟು ಓದಿ ಇಡೀ ಜೀವನ ಸುಖಕರವಾಗಿರುವಂತೆ ಬಾಳಿ, ಕೇವಲ ಶೈಕ್ಷಣಿಕ ಸುಖದ ಆಸೆಗಾಗಿ ದುಶ್ಚಟಗಳಿಗೆ ಬಲಿಯಾದರೆ ಇಡೀ ಜೀವನ ನರಕವಾದೀತು ಎಂದು ಎಚ್ಚರಿಸಿದರು.

ಡಯಟ್ ಉಪನ್ಯಾಸಕ ಬಾಲಾಜಿ ಮಾತನಾಡಿ, ಚಾಕೋಲೇಟ್‌ಗಳಲ್ಲಿ ಹೇರಾಯಿನ್, ಕೋಕಾ, ಮುಂತಾದ ಅಮಲು, ನಿಶೆ ಬರುವ ವಸ್ತುಗಳನ್ನು ಮಿಶ್ರಣ ಮಾಡಿ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಮಾದಕ ವ್ಯಸನಿಗಳನ್ನಾಗಿ ಮಾಡಿ ಕೊನೆಗೆ ಅವರನ್ನು ಸಮಾಜಘಾತುಕ, ಕಾನೂನು ಬಾಹಿರಾ ಕೃತ್ಯಗಳಲ್ಲಿ ತೊಡಗುವಂತೆ ಮಾಡುವ ಷಡ್ಯಂತ್ರ ನಡೆದಿದೆ ಎಂದು ವಿಷಾದಿಸಿ, ಮಕ್ಕಳು ಎಚ್ಚರದಿಂದಿರಿ ಎಂದು ಕಿವಿಮಾತು ಹೇಳಿದರು.

ಶಾಲೆಯ ಆಡಳಿತಾಧಿಕಾರಿ ಬಿ.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದು, ಓದುವ ವಯಸ್ಸಿನಲ್ಲಿ ಮದುವೆ ಮಾಡಿ ಅವರ ಜೀವನ ಹಾಳು ಮಾಡುವ ಘಟನೆಗಳು ಕಂಡು ಬಂದರೆ ಗಮನಕ್ಕೆ ತನ್ನಿ ಎಂದರು.

ಇದೇ ಸಂದರ್ಭದಲ್ಲಿ ಎನ್‌ಎಲ್‌ಎಸ್‌ಎ ಸಹಾಯವಾಣಿ ೧೫೧೦೦ ಬಳಕೆ ಕುರಿತು ನ್ಯಾಯಾಧೀಶರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ದೊಡ್ಡಾರೆಡ್ಡಿ, ಇಸಿಒ ನಂಜುಂಡಗೌಡ ಇದ್ದರು. ಶಿಕ್ಷಕ ಇ.ರಮೇಶ್ ಕಾರ್ಯಕ್ರಮ ನಿರೂಪಿಸಿದರು.