ಸಾರಾಂಶ
ಜಿ.ಡಿ. ಹೆಗಡೆಕಾರವಾರ: ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲ ತೀರವನ್ನು ಸ್ವಚ್ಛಗೊಳಿಸಲು ತಂದಿದ್ದ ಬೀಚ್ ಕ್ಲೀನಿಂಗ್ ಮಷಿನ್ ವರ್ಷದೊಳಗೆ ಪುನಃ ಕೆಟ್ಟಿದ್ದು, ಈ ಯಂತ್ರದ ಮೂಲಕ ಸ್ವಚ್ಛತಾ ಕಾರ್ಯ ನಡೆಯುತ್ತಿಲ್ಲ.ಕಳೆದ ೨೦೨೩ರ ಆಗಸ್ಟ್‌ನಲ್ಲಿ ಈ ಯಂತ್ರ ಹಾಳಾಗಿ ವರ್ಷದಿಂದ ಕೆಲಸ ಮಾಡದೇ ನಿಂತ ಬಗ್ಗೆ ಕನ್ನಡಪ್ರಭದಲ್ಲಿ ವರದಿ ಪ್ರಕಟಿಸಲಾಗಿತ್ತು. ಅಂದಿನ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಪರಿಶೀಲನೆ ನಡೆಸಿ ಯಂತ್ರ ದುರಸ್ತಿಗೆ ನಗರಸಭೆಗೆ ಸೂಚನೆ ನೀಡಿದ ಬಳಿಕ ಮುಂಬೈಯಿಂದ ತಂತ್ರಜ್ಞರನ್ನು ಕರೆಸಿ ₹೨೦ ಲಕ್ಷ ವೆಚ್ಚದಲ್ಲಿ ಯಂತ್ರ ದುರಸ್ತಿ ಮಾಡಿಸಿದ್ದರು. ಆದರೆ ವರ್ಷದಲ್ಲೇ ಪುನಃ ಕೆಟ್ಟು ನಿಂತಿದೆ. ಯಂತ್ರದ ಚೈನ್‌ನಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದು, ಟ್ಯಾಗೋರ್ ಕಡಲ ತೀರದಲ್ಲಿ ಇರುವ ಚಾಪೆಲ್ ಯುದ್ಧ ವಿಮಾನ ಸಂಗ್ರಹಾಲಯದ ಸಮೀಪ ಇರುವ ಶೆಡ್‌ನಲ್ಲಿ ಇರಿಸಲಾಗಿದೆ.೨೦೧೭ರಲ್ಲಿ ಈ ಯಂತ್ರವನ್ನು ಪ್ರವಾಸೋದ್ಯಮ ಇಲಾಖೆಯಿಂದ ಖರೀದಿಸಿ ತರಲಾಗಿತ್ತು. ಬಳಿಕ ನಿರ್ವಹಣೆಗೆ, ಕಡಲ ತೀರದ ಸ್ವಚ್ಛತೆಗೆ ಸ್ಥಳೀಯ ನಗರಸಭೆಗೆ ಹಸ್ತಾಂತರ ಮಾಡಲಾಗಿತ್ತು. ಆದರೆ ಯಂತ್ರವು ತಾಂತ್ರಿಕ ಸಮಸ್ಯೆಗೆ ಒಳಗಾಗಿದ್ದು, ಸ್ವಚ್ಛತಾ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ತಿಂಗಳಿನಿಂದ ನಿಂತಲ್ಲಿಯೇ ನಿಂತಿದೆ. ಯಂತ್ರದ ದುರಸ್ತಿಗೆ ಮುಂಬೈಯಿಂದ ತಂತ್ರಜ್ಞರು ಬರಬೇಕಿದೆ. ಅವರು ಬಂದು ಚೈನ್ ಏನಾಗಿದೆ ಎಂದು ನೋಡಿಕೊಂಡು ಹೋಗಲು ₹೧೫ ಸಾವಿರ ಪಾವತಿ ಮಾಡಬೇಕಿದೆ. ಯಂತ್ರದ ದುರಸ್ತಿಗೆ ಪ್ರತ್ಯೇಕ ವೆಚ್ಚವಾಗಲಿದೆ. ಕಡಲ ತೀರದಿಂದ ಬರುವ ಆದಾಯ ಪ್ರವಾಸೋದ್ಯಮ ಇಲಾಖೆಗೆ ಹೋಗುತ್ತಿದ್ದು, ನಗರಸಭೆಗೆ ಆದಾಯ ಸಿಗುತ್ತಿಲ್ಲ. ಕಾರಣ ನಗರಸಭೆಯ ಜನಪ್ರತಿನಿಧಿಗಳು ಆದಾಯ ಬರದೇ ದುರಸ್ತಿ ಮಾಡಿಸಲು ಒಪ್ಪಿಗೆ ನೀಡುತ್ತಿಲ್ಲ. ಕಳೆದ ಬಾರಿ ಚೈನ್ ದುರಸ್ತಿ ಮಾಡಿದ ₹೨೦ ಲಕ್ಷ ಕಂಪನಿಗೆ ಪಾವತಿ ಮಾಡುವುದು ಬಾಕಿ ಉಳಿದಿದೆ. ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಖರೀದಿಸಿದ ಯಂತ್ರ ಪದೇ ಪದೇ ಹಾಳಾಗುತ್ತಿದ್ದು, ಬಳಕೆ ಮಾಡಿಕೊಳ್ಳಲು ಆಗುತ್ತಿಲ್ಲ. ಯಂತ್ರದ ನಿರ್ವಹಣೆಗೆ ತಗಲುವ ಖರ್ಚಿಗೆ ಶಾಶ್ವತವಾದ ಪರಿಹಾರವನ್ನು ಜಿಲ್ಲಾಡಳಿತ ನೀಡಬೇಕಿದೆ.
ಆಡಳಿತಾತ್ಮಕ ಕಾರಣ: ರವೀಂದ್ರನಾಥ ಟಾಗೋರ್ ಕಡಲ ತೀರ ಸ್ವಚ್ಛಗೊಳಿಸುವ ಯಂತ್ರದ ಚೈನಿನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ದುರಸ್ತಿಗೆ ಮುಂಬೈಯಿಂದ ತಂತ್ರಜ್ಞರು ಬರಬೇಕಿದೆ. ಕೆಲವು ಆಡಳಿತಾತ್ಮಕ ಕಾರಣದಿಂದ ದುರಸ್ತಿ ಮಾಡಿಸಲು ಆಗುತ್ತಿಲ್ಲ. ತಾತ್ಕಾಲಿಕವಾಗಿ ಪೌರಕಾರ್ಮಿಕರನ್ನು ಬಳಕೆ ಮಾಡಿಕೊಂಡು ಸ್ವಚ್ಛತೆ ಮಾಡಿಸಲಾಗುತ್ತಿದೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ನಗರಸಭೆ ಪೌರಾಯುಕ್ತ ಜಗದೀಶ ಹುಲಗೆಜ್ಜಿ ತಿಳಿಸಿದರು.₹75 ಲಕ್ಷ ವೆಚ್ಚದಲ್ಲಿ ಖರೀದಿಸಿದ್ದ ಯಂತ್ರಕಡಲ ತೀರದಲ್ಲಿ ಸಾಕಷ್ಟು ಘನತ್ಯಾಜ್ಯಗಳನ್ನು ಎಸೆಯುವುದರಿಂದ ಸ್ವಚ್ಛತೆಗೆ ಕಷ್ಟವಾಗುತ್ತದೆ ಎಂದು ೨೦೧೭- ೧೮ನೇ ಸಾಲಿನಲ್ಲಿ ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ಅಂದಿನ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ವಿದೇಶದಲ್ಲಿ ನಿರ್ಮಿತವಾದ ಬೀಚ್ ಟೆಕ್ ಹೆಸರಿನ ಯಂತ್ರವನ್ನು ಅಂದಾಜು ₹೭೫ ಲಕ್ಷ ವೆಚ್ಚದಲ್ಲಿ ಖರೀದಿಸಿ ತಂದಿದ್ದರು.
ಈ ಯಂತ್ರವನ್ನು ಇಲ್ಲಿನ ನಗರಸಭೆಗೆ ಹಸ್ತಾಂತರಿಸಲಾಗಿದ್ದು, ಇದಕ್ಕೆ ಅಗತ್ಯವಿರುವ ಸಿಬ್ಬಂದಿಯನ್ನು ನೇಮಿಸಿ ರವೀಂದ್ರನಾಥ ಟಾಗೋರ್ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿತ್ತು. ನಿಯೋಜಿತ ಸಿಬ್ಬಂದಿಗೆ ನಗರಸಭೆಯಿಂದಲೇ ವೇತನ ಪಾವತಿ ಮಾಡಲಾಗುತ್ತಿತ್ತು.ಅಂದಾಜು ೨ ಕಿಮೀ ಉದ್ದದ ಕಾರವಾರದ ರವೀಂದ್ರನಾಥ ಟಾಗೋರ್ ಕಡಲ ತೀರ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಕರ್ನಾಟಕ ಒಂದೇ ಅಲ್ಲದೇ ಹೊರ ರಾಜ್ಯಗಳಿಂದ ಕೂಡಾ ಇಲ್ಲಿಗೆ ಪ್ರವಾಸಿಗರು ಆಗಮಿಸುತ್ತಾರೆ. ಸ್ಥಳೀಯರು ಸಂಜೆ, ಬೆಳಗ್ಗೆ ವೇಳೆ ವಾಯುವಿಹಾರಕ್ಕೆ ತೆರಳುತ್ತಾರೆ.