ಎಂಪಿಎಂಸಿಯಲ್ಲಿ 10 ಕೆಜಿ ಬೀನ್ಸ್ ಒಂದು ಸಾವಿರದಿಂದ 1300 ರು. । ಇತರೆ ತರಕಾರಿಗಳ ಬೆಲೆಯೂ ಏರಿಕೆ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಜಿಲ್ಲೆಯಲ್ಲಿ ಕಳೆದ ತಿಂಗಳು ತರಕಾರಿ ದರ ಕುಸಿದ ಪರಿಣಾಮ ರೈತರ ಹೊಟ್ಟೆ ಮೇಲೆ ಬರೆ ಎಳೆಯುವಂತೆ ಆಗಿತ್ತು. ಆದರೆ ಜಿಲ್ಲೆಯಲ್ಲಿ ಈಗ ಬೀನ್ಸ್ ಮತ್ತು ಸೌತೆಕಾಯಿ ಬೆಳೆಗಳು ರೈತರಿಗೆ ಉತ್ತಮ ಆದಾಯ ತಂದುಕೊಡುವ ಮೂಲಕ ಅವರ ಮೊಗದಲ್ಲಿ ಮಂದಹಾಸ ಮೂಡಿಸಿವೆ.
ಬಯಲು ಸೀಮೆಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೇಸಿಗೆಯನ್ನು ಲೆಕ್ಕಿಸದೆ ವಿವಿಧ ತರಕಾರಿ ಬಂಪರ್ ಬೆಳೆಗಳನ್ನು ಬೆಳೆದ ರೈತರು, ಮಾರುಕಟ್ಟೆಗೆ ತಂದಾಗ ತರಕಾರಿ ಬೆಲೆಗಳು ಕುಸಿದಿತ್ತು. ಔಷಧಿಗಳು ರೇಟ್ ನೋಡಿದರೆ ಗಗನಕ್ಕೆ ಏರಿದೆ ಎಂದು ರೈತರು ನೋವು ಪಡುತ್ತಿದ್ದರು. ಆದರೆ ಇದೀಗ ಬೀನ್ಸ್ ಮತ್ತು ಸೌತೆಕಾಯಿ ಸೇರಿದಂತೆ ಅನೇಕ ತರಕಾರಿಗಳು ಬೆಲೆ ಏರಿಕೆ ಆಗಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.ನಗರದ ರಸ್ತೆ ಪಕ್ಕದಲ್ಲಿ ತರಕಾರಿಗಳು 100 ರು.ಗೆ 3 ರಿಂದ 4 ಕೆಜಿ ಮಾರಾಟ ಮಾಡುತ್ತಿದ್ದರು. ಬೆಲೆ ಏರಿಕೆ ಹಿನ್ನೆಲೆ ಈಗ 100 ರು.ಗೆ ಎರಡು- ಎರಡೂವರೆ ಕೆಜಿ ಮಾತ್ರ ಮಾರಾಟ ಮಾಡುತ್ತಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಎಪಿಎಂಸಿ ಮಾರ್ಕೆಟ್‌ನಲ್ಲಿ ಶನಿವಾರವಾದ ಇಂದು 10 ಕೆಜಿ ಬೀನ್ಸ್ ಒಂದು ಸಾವಿರದಿಂದ 1300 ರು. ಆಗಿದೆ. ಸೌತೆಕಾಯಿ ಸಹ ಒಂದು ಮೂಟೆ 600 ರಿಂದ 700 ರು. ವರೆಗೆ ಖರೀದಿ ಆಗಿರುವುದು ರೈತರಿಗೆ ಸ್ವಲ್ಪ ಸಂತೋಷವಾಗಿದೆ. ಇನ್ನೂ ಅನೇಕ ತರಕಾರಿಗಳಿಗೆ ಬೆಲೆ ಸಹಾ ಕುಸಿದು ಬಿದ್ದಿತ್ತು. ಇದೀಗ ಸ್ವಲ್ಪಮಟ್ಟಿಗೆ ಎಲ್ಲಾ ತರಕಾರಿಗಳ ಬೆಲೆ ಏರಿಕೆ ಆಗಿರುವುದು ರೈತರಿಗೆ ಖುಷಿ ತಂದಿದೆ.
ತೀವ್ರ ಬಿಸಿಲಿನ ತಾಪ, ನೀರಿನ ಕೊರತೆ ಮತ್ತು ಇಳುವರಿ ಕುಸಿತದಿಂದಾಗಿ ತರಕಾರಿ ಬೆಲೆಗಳು ಗಗನಕ್ಕೇರಿವೆ. ಬೀನ್ಸ್ ಚಿಲ್ಲರೆ ದರವು ಕೆ.ಜಿ.ಗೆ ರು. 160 ರಿಂದ ರು. 200ರ ಗಡಿ ದಾಟಿದೆ. ಹೆಚ್ಚುತ್ತಿರುವ ಸಾಗಾಣಿಕೆ ವೆಚ್ಚ ಮತ್ತು ಬೇಡಿಕೆಯಿಂದಾಗಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.
ತೀವ್ರ ಬಿಸಿಲಿನಿಂದಾಗಿ ಬೆಳೆಗಳು ಬೇಗನೆ ಹಾಳಾಗುತ್ತಿವೆ ಮತ್ತು ಇಳುವರಿ ಕುಗ್ಗಿರುವುದು. ಮಳೆಯ ಕೊರತೆ ಹಾಗೂ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಕೃಷಿಗೆ ನೀರುಣಿಸುವುದು ಕಷ್ಟವಾಗಿದೆ. ಇಂಧನ ದರ ಹೆಚ್ಚಳ ಮತ್ತು ದೂರದ ಊರುಗಳಿಂದ ತರಕಾರಿ ತರಿಸಬೇಕಾಗಿರುವುದರಿಂದ ಸಾರಿಗೆ ವೆಚ್ಚದ ಹೊರೆ ಎಲ್ಲಾ ಸೇರಿ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ. ಮಳೆಗಾಲ ಆರಂಭವಾಗಿ ಹೊಸ ಬೆಳೆ ಮಾರುಕಟ್ಟೆಗೆ ಬರುವವರೆಗೂ ಬೆಲೆಗಳು ಹೀಗೇ ಮುಂದುವರಿಯುವ ನಿರೀಕ್ಷೆಯಿದೆ ಎಂದು ಎಪಿಎಂಸಿಯ ಎಸ್.ವಿಟಿ ಮಂಡಿ ವರ್ತಕ ಸುರೇಶ್ ತಿಳಿಸಿದ್ದಾರೆ.ರೈತರು ಸಾಲ ಮಾಡಿ ಬೆಳೆಗಳನ್ನು ಬೆಳೆಯುತ್ತಾರೆ. ರೈತರು ಬೆಳೆದ ಬೆಳೆಗೆ ಉತ್ತಮವಾದ ಬೆಲೆ ಸಿಕ್ಕಿದಾಗ ಮಾತ್ರ ಅವರು ಸಂತೋಷವಾಗಿರಲು ಸಾಧ್ಯ. ಜಿಲ್ಲೆಯಲ್ಲಿ ರೈತರು ಬೆಳೆದ ತರಕಾರಿಗಳು, ಹೂವು, ಹಣ್ಣುಗಳು, ಹೊರ ರಾಜ್ಯಕ್ಕೆ ಸಹ ತೆಗೆದುಕೊಂಡು ಹೋಗುತ್ತಾರೆ.
ಸಿಕೆಬಿ-1 ನಗರದ ಎಪಿಎಂಸಿಯಲ್ಲಿ ಹರಾಜಾಗುತ್ತಿರುವ ಬೀನ್ಸ್.