ಚನ್ನಪಟ್ಟಣ: ಕಳೆದ ಶನಿವಾರ ತಾಲೂಕಿನ ಸಿಂಗರಾಜಪುರ-ಕೋಡಂಬಹಳ್ಳಿ ಮಾರ್ಗದ ದಂಡಿನ ಮಾರಮ್ಮ ದೇವಸ್ಥಾನದ ಬಳಿ ಸೆರೆ ಹಿಡಿಯಲಾದ ಕರಡಿ ಮೃತಪಟ್ಟಿದ್ದು, ಆ ಕರಡಿಗೆ ರೇಬಿಸ್ ಇರುವುದು ಮರಣೋತ್ತರ ಪರೀಕ್ಷೆ ವೇಳೆ ದೃಢಪಟ್ಟಿದೆ
ಚನ್ನಪಟ್ಟಣ: ಕಳೆದ ಶನಿವಾರ ತಾಲೂಕಿನ ಸಿಂಗರಾಜಪುರ-ಕೋಡಂಬಹಳ್ಳಿ ಮಾರ್ಗದ ದಂಡಿನ ಮಾರಮ್ಮ ದೇವಸ್ಥಾನದ ಬಳಿ ಸೆರೆ ಹಿಡಿಯಲಾದ ಕರಡಿ ಮೃತಪಟ್ಟಿದ್ದು, ಆ ಕರಡಿಗೆ ರೇಬಿಸ್ ಇರುವುದು ಮರಣೋತ್ತರ ಪರೀಕ್ಷೆ ವೇಳೆ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸಿಬ್ಬಂದಿ ಹಾಗೂ ಸ್ಥಳೀಯರಿಗೆ ಆತಂಕ ಎದುರಾಗಿದೆ.
ದಂಡಿನ ಮಾರಮ್ಮನ ದೇವಸ್ಥಾನದ ಬಳಿ ಸುಮಾರು ೪೦ ವಯಸ್ಸಿನ ಹೆಣ್ಣು ಕರಡಿ ಕಳೆದ ಶನಿವಾರ ಬೆಳಗ್ಗೆ ೬ ಗಂಟೆ ಸುಮಾರಿಗೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರರ ಮೇಲೆ ಮೊದಲಿಗೆ ದಾಳಿ ಮಾಡಿತ್ತು. ಈ ವೇಳೆ ಸವಾರ ಬೈಕ್ ಬಿಟ್ಟು ತಪ್ಪಿಸಿಕೊಂಡು ಓಡಿ ಹೋಗಿದ್ದ. ಆದರೂ ಬೈಕ್ ಮೇಲೆ ಕರಡಿ ತನ್ನ ರೋಷಾವೇಶ ತೋರಿಸಿತ್ತು. ಇದರೊಂದಿಗೆ ಇದೇ ದಾರಿಯಲ್ಲಿ ಬಂದ ಸರಕು ಸಾಗಣೆ ವಾಹನದ ಮೇಲೂ ಎರಗಲು ಯತ್ನಿಸಿದ್ದು, ಸುಮಾರು ಹೊತ್ತು ರಸ್ತೆಯಲ್ಲಿಯೇ ಕುಳಿತು ತನ್ನ ಪುಂಡಾಟ ಮೆರೆದಿತ್ತು. ಅಂತಿಮವಾಗಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ಕರಡಿ ಸೆರೆ ಹಿಡಿದಿದ್ದರು.ಕರಡಿ ಸೆರೆಹಿಡಿದು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರಿಸಿದ ಬಳಿಕ, ಅದು ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆಯಲ್ಲಿ ಕರಡಿಗೆ ರೇಬೀಸ್ ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ವ್ಯಾಕ್ಸಿನ್ ಪಡೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಇದರೊಂದಿಗೆ, ಕರಡಿ ಸೆರೆಸಿಕ್ಕ ೧ ಕಿ.ಮೀ. ವ್ಯಾಪ್ತಿಯಲ್ಲಿನ ಜಾನುವಾರುಗಳಿಗೂ ವ್ಯಾಕ್ಸಿನೇಷನ್ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಕಾರ್ಯಾಚರಣೆ ವೇಳೆಯಲ್ಲಿಯೇ ಗಾಯಗೊಂಡಿದ್ದವರಿಗೆ ಈ ಮೊದಲೇ ವ್ಯಾಕ್ಸಿನ್ ನೀಡಲಾಗಿದ್ದು ಮೊದಲ ಹಂತವಾಗಿ ಕಾರ್ಯಾಚರಣೆಯಲ್ಲಿ ಭಾಗಿಯಾದ ಇತರರು ಹಾಗೂ ೧ ಕಿಮೀ ವ್ಯಾಪ್ತಿಯ ಜಾನುವಾರುಗಳಿಗೆ ವ್ಯಾಕ್ಸಿನೇಷನ್ ನೀಡಲು ಕ್ರಮ ವಹಿಸಲಾಗಿದೆ. ಯಾವುದಾದರೂ ಲಕ್ಷಣಗಳು ಕಂಡುಬಂದರೆ ೫ ಕಿ.ಮೀ. ವ್ಯಾಪ್ತಿಯಲ್ಲಿನ ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ವ್ಯಾಕ್ಸಿನೇಷನ್ ಪಡೆಯಬೇಕಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶವನ್ನು ಸಾತನೂರು ವಲಯ ಮತ್ತು ಚನ್ನಪಟ್ಟಣ ವಲಯ ಅರಣ್ಯಾಧಿಕಾರಿಗಳು ನೀಡಿದ್ದಾರೆ.
ಪೊಟೋ೩೧ಸಿಪಿಟಿ೧:ಚನ್ನಪಟ್ಟಣ ತಾಲೂಕಿನ ಸಿಂಗರಾಜಪುರ-ಕೋಡಂಬಹಳ್ಳಿ ಮಾರ್ಗದ ದಂಡಿನ ಮಾರಮ್ಮ ದೇವಸ್ಥಾನದ ಬಳಿ ಸೆರೆ ಹಿಡಿದಿದ್ದ ಕರಡಿ.