ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ನಗರದ ಟಿ.ಬಿ. ಸ್ಯಾನಿಟೋರಿಯಂ ಬಳಿ ಕಳೆದ ಎರಡು ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಕರಡಿಯನ್ನು ಬುಧವಾರ ಮುಂಜಾನೆ ಅರಣ್ಯ ಇಲಾಖೆಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳ ನಿರಂತರ ಕಾರ್ಯಾಚರಣೆ ಮೂಲಕ ಸೆರೆ ಹಿಡಿದು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.ಜು.28 ಸೋಮವಾರ ರಾತ್ರಿ 12 ಗಂಟೆಗೆ ಟಿ.ಬಿ. ಸ್ಯಾನಿಟೋರಿಯಂ ಬಳಿ ಕರಡಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಕರಡಿಯ ಚಲನ ವಲನಗಳ ಮೇಲೆ ನಿಗಾವಹಿಸಿ ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಹಲವು ತಂಡಗಳನ್ನು ರಚಿಸಿ ಸೆರೆಹಿಡಿಯಲು ಯೋಜನೆ ರೂಪಿಸಲಾಗಿತ್ತು.
ಕರಡಿಯು ಬಳ್ಳಾರಿ ಕೋಟೆಯ ಮೇಲೆ ತೆರಳಿ ಬಂಡೆ ಪ್ರದೇಶದಲ್ಲಿ ಅಡಗಿಕೊಂಡಿತ್ತು. ಜನರನ್ನು ಗಾಬರಿಗೊಳಿಸದೇ ಪರ್ಯಾಯ ತಂಡಗಳನ್ನು ಕೋಟೆಯ ಸುತ್ತಮುತ್ತ ನಿಯೋಜಿಸಿ ಕೋಟೆಯ ಮೇಲೆ ಜನ ಸಂಚಾರವನ್ನು ನಿರ್ಭಂಧಿಸಲಾಗಿತ್ತು. ಕರಡಿ ನಿಧಾನವಾಗಿ ಕೋಟೆಯಿಂದ ಕೆಳಕ್ಕೆ ಇಳಿಯಲು ಪ್ರಾರಂಭಿಸಿದಾಗ ಕಮಲಾಪುರದ ಶ್ರೀಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ ಮೃಗಾಲಯದ ಪಶು ವೈದ್ಯಕೀಯ ತಂಡದ ಸಹಾಯ ಪಡೆದು ಜು.30ರ ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಯಶಸ್ವಿಯಾಗಿ ಸೆರೆ ಹಿಡಿಯಲಾಯಿತು.ಸೆರೆ ಹಿಡಿದಿರುವ ಕರಡಿಯು ಅಂದಾಜು ಐದು ವರ್ಷದ ಹೆಣ್ಣು ಕರಡಿಯಾಗಿದ್ದು, ಪಶು ವೈದ್ಯರ ತಂಡವು ಪ್ರಾಥಮಿಕವಾಗಿ ಪರೀಕ್ಷಿಸಿ ಕರಡಿಯ ಗುರುತಿಗಾಗಿ ಮೈಕ್ರೋ ಚಿಪ್ ಅಳವಡಿಸುವಿಕೆ, ಹೆಚ್ಚಿನ ಚಿಕಿತ್ಸೆ ಮತ್ತು ಪರೀಕ್ಷೆಗಾಗಿ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಕಳುಹಿಸಲಾಗಿದೆ.
ವಲಯ ಅರಣ್ಯಾಧಿಕಾರಿ ಗಿರೀಶ್ ಕುಮಾರ್ ಡಿ.ಕೆ. ಮತ್ತು ಅವರ ಸಿಬ್ಬಂದಿ ತಂಡದ ನಿರಂತರ ಪ್ರಯತ್ನಗಳಿಂದ ಪೊಲೀಸ್ ಹಾಗೂ ಪುರಾತತ್ವ ಇಲಾಖೆಯ ಸಹಕಾರದೊಂದಿಗೆ ಸಾರ್ವಜನಿಕರಿಗೆ ಯಾವುದೇ ಅಪಾಯವಾಗದಂತೆ ಎರಡು ದಿನಗಳ ಕಾಲ ನಿರಂತರ ಕಾರ್ಯಾಚರಣೆಯ ನಂತರ ಕರಡಿಯನ್ನು ಸುರಕ್ಷಿತವಾಗಿ ಸೆರೆ ಹಿಡಿದು ರಕ್ಷಿಸಲಾಗಿದೆ ಎಂದು ಬಳ್ಳಾರಿ ಪ್ರಾದೇಶಿಕ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಡಾ. ಬಸವರಾಜ ಕೆ.ಎನ್. ತಿಳಿಸಿದ್ದಾರೆ.ಕರಡಿ ಕೋಟೆಯಲ್ಲಿ ಅವಿತುಗೊಂಡಿರುವ ವಿಚಾರ ಗೊತ್ತಾಗುತ್ತಿದ್ದಂತೆಯೇ ಸ್ಥಳೀಯರು ಆತಂಕಗೊಂಡಿದ್ದರು. ಇತ್ತೀಚೆಗೆ ಕರಡಿಗಳು ದಾಳಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕೋಟೆಯಲ್ಲಿ ಕರಡಿ ಅವಿತುಕೊಂಡಿದೆ ಎಂಬ ಸುದ್ದಿಕೇಳಿ ಸ್ಥಳೀಯರು ಹೊರಗಡೆ ಬರದೆ ಭಯಭೀತರಾಗಿದ್ದರು. ಮಕ್ಕಳನ್ನು ಹೊರಗಡೆ ಕಳಿಸದೆ ಸಂಜೆಯಾಗುತ್ತಿದ್ದಂತೆಯೇ ಮನೆ ಸೇರಿಕೊಳ್ಳುತ್ತಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಕರಡಿಯನ್ನು ಸೆರೆ ಹಿಡಿದು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಸ್ಥಳೀಯರು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.