ಸಾರಾಂಶ
ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹ
ಕನ್ನಡಪ್ರಭ ವಾರ್ತೆ ಶಿವಮೊಗ್ಗಕರ್ನಾಟಕ ರಾಜ್ಯದ ಮಲೆನಾಡಿನ ತಪ್ಪಲಿನಲ್ಲಿ ಲಕ್ಕವಳ್ಳಿ ಸಮೀಪ ಇರುವ ಸುಮಾರು ಏಳೆಂಟು ಜಿಲ್ಲೆಗಳಿಗೆ ನೀರುಣಿಸುವ ರೈತರ ಜೀವನಾಡಿ ಭದ್ರಾ ಜಲಾಶಯದ ಈಗಿನ ಪರಿಸ್ಥಿತಿಯ ಹಿನ್ನೋಟ ನೋಡಿದರೆ ಕೆರೆಕಟ್ಟೆಯ ತರಹ ಕಾಣಿಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಎಲ್.ಟಿ.ಹೇಮಣ್ಣ ತಿಳಿಸಿದ್ದಾರೆ.
ಜಲಾಶಯಕ್ಕೆ ಸೂಕ್ತ ಭದ್ರತೆ ಮತ್ತು ರಕ್ಷಣೆ ಒದಗಿಸಿಲ್ಲ ಜಲಾಶಯದ ಮುಂಭಾಗದಲ್ಲಿ ಗಿಡಮರಗಳು ಬೆಳೆದು ನಿಂತಿವೆ. ವಿದ್ಯುತ್ ಉತ್ಪಾದನಾ ಘಟಕ ಪಕ್ಕದಲ್ಲಿರುವ ಮೆಟ್ಟಿಲು ಹತ್ತಿ ಜಲಾಶಯದ ಹಿನ್ನೀರು ನೋಡಲು ಅಥವಾ ಇತರೆ ಯಾವುದೇ ಕಾರ್ಯಗಳಿಗೆ ಓಡಾಡುವ ಅವಕಾಶ ಈ ಹಿಂದೆ ಇತ್ತು. ಆದರೆ ಈಗ ಆ ಸ್ಥಳದಲ್ಲಿ ಮರ ಗಿಡಗಳು ಬೆಳೆದು ಜಲಾಶೀದ ಸೌಂದರ್ಯಕ್ಕೆ ಹಾಗೂ ಸುರಕ್ಷತೆಗೆ ತೊಂದರೆಯಾಗಿದೆ ಎಂದು ಹೇಳಿದ್ದಾರೆ.ಭದ್ರಾ ಜಲಾಶಯದಲ್ಲಿ ಅಂದಾಜು 70ಕ್ಕಿಂತ ಹೆಚ್ಚು ಟಿಎಂಸಿ ನೀರು ಶೇಖರಣೆ ಇದೆ. ಕುಡಿಯುವ ನೀರಿನ ಯೋಜನೆಗೆ ಈ ಜಲಾಶಯದಲ್ಲಿರುವ ನೀರನ್ನು ಸರಬರಾಜು ಮಾಡಲು ಹಲವರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇನ್ನೊಂದು ಪ್ರಮುಖವಾದ ವಿಷಯ ಎಂದರೆ ರಾಜ್ಯದ ಜಲಾಶಯಗಳ ಮುಂಭಾಗದಲ್ಲಿ ಸುಂದರ ಹಾಗೂ ವ್ಯವಸ್ಥಿತ ರೀತಿಯಲ್ಲಿ ಮನಮೋಹಕ ವೃಂದಾವನಗಳು ಇದೆ. ಆದರೆ ಈ ಭದ್ರಾ ಜಲಾಶಯದ ಮುಂಭಾಗದಲ್ಲಿ ಸಾಕಷ್ಟು ಖಾಲಿ ಜಾಗದಲ್ಲಿ ಒಂದು ಸುಂದರ ವೃಂದಾವನ ಮಾಡಲು ಅವಕಾಶವಿದೆ. ಆದರೆ ಇದುವರೆಗೂ ಈ ಜಲಾಶಯದ ಸುತ್ತ ಅಂತಹ ಸುಂದರ ಬೃಂದಾವನ ನಿರ್ಮಾಣವಾಗಿಲ್ಲ. ಈ ಜಲಾಶಯದ ಸುತ್ತ ಒಂದು ಸುಂದರವಾದ ಬೃಂದಾವನವನ್ನು ನಿರ್ಮಾಣ ಮಾಡಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ ಎಂದಿದ್ದಾರೆ.
ಈ ಜಲಾಶಯದ ಖಾಲಿ ಜಾಗದಲ್ಲಿ ಒಂದು ಸುಂದರ ವಾದ ಅಂತಾರಾಷ್ಟ್ರೀಯ ಉದ್ಯಾನವನ್ನು ಮಾಡಲು ಪ್ರಯತ್ನಿಸಬೇಕಾಗಿದೆ. ಆದ್ದರಿಂದ ಸಕ್ತ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ.