ದೇವನಹಳ್ಳಿ: ಯುವ ಪೀಳಿಗೆಯ ಅಗತ್ಯ, ಆಲೋಚನೆಗೆ ತಕ್ಕಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ನೂತನ ಶಿಕ್ಷಣ ನೀತಿ ರೂಪಿಸಲು ಮುಂದಾಗಿದ್ದೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು
ದೇವನಹಳ್ಳಿ: ಯುವ ಪೀಳಿಗೆಯ ಅಗತ್ಯ, ಆಲೋಚನೆಗೆ ತಕ್ಕಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ನೂತನ ಶಿಕ್ಷಣ ನೀತಿ ರೂಪಿಸಲು ಮುಂದಾಗಿದ್ದೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ರಾಮಯ್ಯ ವಿಜ್ಞಾನ ಮತ್ತು ಮ್ಯಾನೇಜ್ಮೆಂಟ್ ಸಂಸ್ಥೆ ಉದ್ಘಾಟನೆ ಹಾಗೂ ನಾರಾಯಣ ಪ್ರಜ್ಞಾಲಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣ ನೀತಿಯ ಕುರಿತು ಚರ್ಚಿಸಲು ಕಾಂಗ್ರೆಸ್ ಆಡಳಿತವಿರುವ ೪ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ದೆಹಲಿಯಲ್ಲಿ ನಿಗದಿಯಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಅದು ರದ್ದಾಯಿತು. ವಿದ್ಯಾರ್ಥಿಗಳು ಕೇವಲ ಉದ್ಯೋಗ ಹುಡುಕುವವರಾಗದೆ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಾಗಬೇಕು. ವಿಶ್ವದ ೮೦ಕ್ಕೂ ಹೆಚ್ಚು ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಕರ್ನಾಟಕದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಆಸಕ್ತಿ ತೋರುತ್ತಿವೆ. ಇತ್ತೀಚೆಗೆ ಮೈಸೂರಿನಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದ ವೇಳೆ ಭಾರತವನ್ನು ಅಭಿವೃದ್ಧಿಪಡಿಸಬೇಕಾದರೆ ಅದು ಬೆಂಗಳೂರು ಮತ್ತು ಕರ್ನಾಟಕದ ಮೂಲಕವೇ ಸಾಧ್ಯ ಎಂದು ಹೇಳಿದ್ದೆ ಎಂದು ತಿಳಿಸಿದರು.ಶಿಕ್ಷಣ ಕ್ಷೇತ್ರಕ್ಕೆ ಎಂ.ಎಸ್.ರಾಮಯ್ಯ ಕುಟುಂಬದ ಕೊಡುಗೆ ತುಂಬಾ ದೊಡ್ಡದು. ರಾಮಯ್ಯ ಅವರು ಬೆಂಗಳೂರು ಮತ್ತು ಕರ್ನಾಟಕ ಬೆಳೆಯಲು ಅಪಾರ ಕೊಡುಗೆ ನೀಡಿದ್ದಾರೆ. ಜಯರಾಂ ಹಾಗೂ ನನ್ನ ಪರಿಚಯ ೪೦ ವರ್ಷಗಳಷ್ಟು ಹಳೆಯದು. ಜಯರಾಂ ಅವರನ್ನು ನಾನು ಗುರು ಎಂದು ಗೌರವಿಸುತ್ತೇನೆ. ಅವರಿಂದ ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ. ಎಂ.ಎಸ್. ರಾಮಯ್ಯ ಸಂಸ್ಥೆಯು ಜೆಎಸ್‌ಡಬ್ಲ್ಯೂ ಸಮೂಹದ ಸಜ್ಜನ್ ಜಿಂದಾಲ್ ಅವರಂತಹ ಹಲವು ಬೃಹತ್ ಉದ್ಯಮಿಗಳನ್ನು ಮತ್ತು ನಾಯಕರನ್ನು ಸೃಷ್ಟಿಸಿದೆ. ಇಲ್ಲಿನ ಹಳೆಯ ವಿದ್ಯಾರ್ಥಿಗಳ ಸಮೂಹ ತುಂಬಾ ದೊಡ್ಡದು. ರಾಮಯ್ಯ ಸಂಸ್ಥೆಯ ಪಕ್ಕದಲ್ಲೇ ಇರುವ ಭಾರತೀಯ ವಿಜ್ಞಾನ ಸಂಸ್ಥೆ ಆರಂಭವಾಗಲು ಸ್ವಾಮಿ ವಿವೇಕಾನಂದ, ಜಮ್‌ಶೆಟ್‌ಜಿ ಟಾಟಾ ಹಾಗೂ ಮೈಸೂರು ಮಹಾರಾಜರ ದೂರದೃಷ್ಟಿ ಕಾರಣ. ವಿವೇಕಾನಂದ ಹಾಗೂ ಜಮ್‌ಶೆಟ್‌ಜಿ ಟಾಟಾ ಅವರ ನಡುವಿನ ಸಂವಾದದ ಕಾರಣಕ್ಕೆ ಮಹತ್ವದ ಸಂಸ್ಥೆಗೆ ಮೈಸೂರು ಮಹಾರಾಜರು ಜಾಗ ನೀಡಿದರು. ಪರೋಪಕಾರಾಯ ಫಲಂತಿ ವೃಕ್ಷಾಃ ಶ್ಲೋಕದಂತೆ ಮರ, ನದಿ ಮತ್ತು ಹಸುಗಳು ಹೇಗೆ ತಮಗಾಗಿ ಅಲ್ಲದೆ ಸಮಾಜಕ್ಕಾಗಿ ಬಾಳುತ್ತವೆಯೋ, ಹಾಗೆಯೇ ರಾಮಯ್ಯ ಅವರ ಕುಟುಂಬದ ಆಸ್ತಿ ಮತ್ತು ಜ್ಞಾನವಂತ ಸಮಾಜ ನಿರ್ಮಾಣಕ್ಕೆ ಮುಡಿಪಾಗಿದೆ ಎಂದರು.
ಬೆಂಗಳೂರು ವಿದೇಶಿ ಉದ್ಯಮಿಗಳ ನೆಚ್ಚಿನ ಆಯ್ಕೆ:ಎಸ್.ಎಂ. ಕೃಷ್ಣರ ಸರ್ಕಾರದ ಅವಧಿಯಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ವೇಳೆ ಅಮೆರಿಕಾ ರಾಯಭಾರಿಯವರು ಹೇಳಿದಂತೆ, ಅಮೆರಿಕಾದ ೯/೧೧ರ ದುರಂತದ ನಂತರ, ಸುರಕ್ಷಿತ ಸ್ಥಳಕ್ಕಾಗಿ ಅಮೆರಿಕ ದೆಹಲಿ, ಮುಂಬೈ, ಪುಣೆ, ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರು ನಗರಗಳ ಸಮೀಕ್ಷೆ ನಡೆಸಿತ್ತು. ಚೆನ್ನೈನ ಹವಾಮಾನ, ಮುಂಬೈ-ಪುಣೆಗಳ ಜನದಟ್ಟಣೆ ಹಾಗೂ ಹೈದರಾಬಾದ್ ಪರಿಸ್ಥಿತಿಗಳನ್ನು ಪರಿಶೀಲಿಸಿದ ನಂತರ, ಕೇವಲ ಜ್ಞಾನ, ಸಂಸ್ಕೃತಿ ಮತ್ತು ಪ್ರತಿಭೆ ಹೆಚ್ಚಿರುವ ಬೆಂಗಳೂರನ್ನು ಅಂತಿಮವಾಗಿ ಆಯ್ಕೆ ಮಾಡಲಾಯಿತು ಎಂದು ಹೇಳಿದರು.
ದಾವೋಸ್ ಗೆ ತೆರಳಿದಾಗ ಹೆಚ್ಚಿನ ಉದ್ಯಮಿಗಳು ಬೆಂಗಳೂರಿನ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದರು. ಏಕೆಂದರೆ ಬೆಂಗಳೂರಲ್ಲಿ ೧ ಡಾಲರ್ ವೆಚ್ಚಕ್ಕೆ ಮುಂಬೈನಲ್ಲಿ ಮೂರುವರೆ ಡಾಲರ್‌ಗೆ ಸಮ. ಅಷ್ಟು ವೆಚ್ಚ ಹೆಚ್ಚಳವಾಗಿದೆ ಅಲ್ಲಿ. ಎಲ್ಲರೂ ಬೆಂಗಳೂರನ್ನು ಮೊದಲ ಆಯ್ಕೆಯನ್ನಾಗಿ ನೋಡುತ್ತಿದ್ದಾರೆ. ಅಂತಾರಾಷ್ಟ್ರೀಯ ನಾಯಕರೂ ಬೆಂಗಳೂರನ್ನು ಮೆಚ್ಚುತ್ತಿದ್ದಾರೆ. ಇಲ್ಲಿನ ಶಿಕ್ಷಣ ಗುಣಮಟ್ಟವೂ ಚೆನ್ನಾಗಿದೆ. ಅಮೆರಿಕನ್ನರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಕರ್ನಾಟಕದಲ್ಲಿ ಕನಿಷ್ಠ ೧೦ ಅಂತಾರಾಷ್ಟ್ರೀಯ ಶಾಲೆಗಳನ್ನು ಕೋರಿದ್ದರು. ಇಂದು ಭಾರತದಲ್ಲಿರುವ ೧೩೮ ಅಂತಾರಾಷ್ಟ್ರೀಯ ಶಾಲೆಗಳ ಪೈಕಿ ೩೭ ಶಾಲೆಗಳು ಕರ್ನಾಟಕದಲ್ಲೇ ಇವೆ. ಕರ್ನಾಟಕದಲ್ಲಿ ಪ್ರತಿ ವರ್ಷ ೨೦,೦೦೦ ಇಂಜಿನಿಯರ್‌ಗಳು ಹಾಗೂ ೫೯ ಮೆಡಿಕಲ್ ಕಾಲೇಜುಗಳಿಂದ ೧೩,೯೪೦ ವೈದ್ಯರು ಹೊರಬರುತ್ತಿದ್ದಾರೆ. ಜೊತೆಗೆ ೧.೨ ಲಕ್ಷಕ್ಕೂ ಹೆಚ್ಚು ಪ್ಯಾರಾಮೆಡಿಕಲ್ ಸಿಬ್ಬಂದಿ ತಯಾರಾಗುತ್ತಿದ್ದಾರೆ. ಸಿಲಿಕಾನ್ ವ್ಯಾಲಿಯಲ್ಲಿ ೧೬ ಲಕ್ಷ (೧.೬ ಮಿಲಿಯನ್) ಐಟಿ ವೃತ್ತಿಪರರಿದ್ದರೆ, ಬೆಂಗಳೂರು ಒಂದರಲ್ಲೇ ೨.೬ ಮಿಲಿಯನ್ ಐಟಿ ವೃತ್ತಿಪರರು ಕೆಲಸ ಮಾಡುತ್ತಿದ್ದಾರೆ. ಇದು ಬೆಂಗಳೂರಿನ ಹೆಗ್ಗಳಿಕೆ ಎಂದು ಹೇಳಿದರು.ಕೌಶಲ್ಯಕ್ಕೆ ಆದ್ಯತೆ:
ಫಾಕ್ಸ್‌ಕಾನ್ ಸಂಸ್ಥೆಯಲ್ಲಿ ೫೦,೦೦೦ ಯುವ ಸಮೂಹ ಉದ್ಯೋಗ ಮಾಡುತ್ತಿದ್ದಾರೆ. ವಸತಿ, ವಿಮೆ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಅಮೆರಿಕದ ಸುಂಕ ಸಮಸ್ಯೆಯ ನಡುವೆಯೂ ಉದ್ಯಮಿಗಳು ಭಾರತ ಹಾಗೂ ಬೆಂಗಳೂರನ್ನು ಸುರಕ್ಷಿತ ಎಂದು ಭಾವಿಸಿದ್ದಾರೆ. ನ್ಯೂಜಿಲೆಂಡ್ ಗೆ ತೆರಳಿದ್ದಾಗ ನಾನು ಗಮನಿಸಿದ ಸಂಗತಿ ಎಂದರೆ. ಅಲ್ಲಿ ನಮ್ಮ ಪದವಿ ಕೇಳುವುದಿಲ್ಲ. ಬದಲಾಗಿ ಕೌಶಲ್ಯ ಕೇಳುತ್ತಾರೆ. ಕೌಶಲ್ಯ ಶಿಕ್ಷಣ ಪಡೆದು ಈ ದೇಶದ ಏಳಿಗೆಗೆ ಕೊಡುಗೆ ಕೊಡಬೇಕು.ನಾನು ಹುಟ್ಟಿನಿಂದ ರೈತ, ವೃತ್ತಿಯಿಂದ ಉದ್ಯಮಿ, ಆಯ್ಕೆಯಿಂದ ಶಿಕ್ಷಣತಜ್ಞ ಹಾಗೂ ಆಸಕ್ತಿಯಿಂದ ರಾಜಕಾರಣಿ. ಆದರೆ ನನ್ನ ಹೃದಯ ಇರುವುದು ಶಿಕ್ಷಣ ಕ್ಷೇತ್ರದಲ್ಲಿ. ಅದೇ ರೀತಿ ಜಯರಾಂ ಅವರೂ ಸಹ ಶಿಕ್ಷಣ ಕ್ಷೇತ್ರಕ್ಕೇ ತಮ್ಮ ಜೀವನ ಮುಡುಪಾಗಿಟ್ಟವರು. ಜಯರಾಂ ಅವರು ಇತಿಹಾಸ ಓದುವವರಲ್ಲ, ಇತಿಹಾಸ ಸೃಷ್ಟಿಸುವವರು ಎಂದು ಬಣ್ಣಿಸಿದರು.
೦೭ ದೇವನಹಳ್ಳಿ ಚಿತ್ರಸುದ್ದಿ ಸುದ್ದಿ: ೦೧ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ರಾಮಯ್ಯ ವಿಜ್ಞಾನ ಮತ್ತು ಮ್ಯಾನೇಜ್ಮೆಂಟ್ ಸಂಸ್ಥೆ ಉದ್ಘಾಟನೆ ಹಾಗೂ ನಾರಾಯಣ ಪ್ರಜ್ಞಾಲಯ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೆರವೇರಿಸಿದರು.