ಸಾರಾಂಶ
ಪುತ್ತೂರು : ಪಿಯುಸಿಗೆ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡುವಲ್ಲಿ ಬಿಎಡ್ ಕಡ್ಡಾಯಗೊಳಿಸಿ ಶಿಕ್ಷಣ ಇಲಾಖೆ ಸುತ್ತೋಲೆಯನ್ನು ಹೊರಡಿಸಿದ್ದು, ಇದರಿಂದಾಗಿ ಈಗಾಗಲೇ ಅತಿಥಿ ಉಪನ್ಯಾಸ ನೀಡುತ್ತಿರುವ ಶಿಕ್ಷಕರಿಗೆ ತೊಂದರೆಯಾಗುತ್ತಿದೆ.
ಬಿಎಡ್ ವ್ಯಾಸಂಗಕ್ಕೆ ಕಾಲಾವಕಾಶ ನೀಡುವಂತೆ ಸರ್ಕಾರವನ್ನು ತಿಳಿಸುವಂತೆ ಆಗ್ರಹಿಸಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅತಿಥಿ ಉಪನ್ಯಾಸಕರು ಮನವಿ ಮಾಡಿದ್ದಾರೆ. ಈಗಾಗಲೇ ಪಿಜಿ ಪದವೀಧರರು ಅತಿಥಿ ಉಪನ್ಯಾಸಕರಾಗಿ ಹಲವು ವರ್ಷಗಳಿಂದ ಕರ್ತವ್ಯ ಮಾಡುತ್ತಿದ್ದಾರೆ.
ಇವರು ಮುಂದಿನ ದಿನಗಳಲ್ಲಿ ಉಪನ್ಯಾಸಕರಾಗಿ ಮುಂದುವರಿಯಬೇಕಾದಲ್ಲಿ ಬಿಎಡ್ ಕಡ್ಡಾಯವಾಗಿ ಮಾಡಬೇಕಿದೆ ಎಂದು ಶಿಕ್ಷಣ ಇಲಾಖೆಯ ಆದೇಶ ಮಾಡಿ ಸುತ್ತೋಲೆ ಹೊರಡಿಸಿದೆ. ಈ ಆದೇಶ ಜಾರಿಯಾದಲ್ಲಿ ಹಲವು ಮಂದಿ ಉಪನ್ಯಾಸಕರು ಕೆಲಸವನ್ನು ಕಳೆದುಕೊಳ್ಳಲಿದ್ದು, ಅತಿಥಿ ಉಪನ್ಯಾಸಕರನ್ನು ನೇಮಕಾತಿ ವೇಳೆ ಸ್ನಾತಕೋತ್ತರ ಪದವಿಯನ್ನು ಮಾನ್ಯ ಮಾಡಲಾಗಿತ್ತು ಆದರೆ ಇದೀಗ ಹೊಸ ಕಾನೂನು ವೃತ್ತಿಗೆ ಸಂಕಷ್ಟವನ್ನು ತಂದೊಡ್ಡಿದೆ.
ನಮಗೆ ಉಪನ್ಯಾಸದ ಜೊತೆಗೆ ಬಿಎಡ್ ವ್ಯಾಸಂಗ ಮಾಡಲು ಎರಡು ವರ್ಷದ ಕಾಲಾವಕಾಶ ನೀಡಬೇಕು. ಎರಡು ವರ್ಷದ ಕಾಲವಕಾಶ ನೀಡಿದ್ದಲ್ಲಿ ನಾವು ಎಎಡ್ ವ್ಯಾಸಂಗವನ್ನು ಪೂರ್ಣಗೊಳಿಸುವುದಾಗಿ ಅತಿಥಿ ಉಪನ್ಯಾಸಕರು ಶಾಸಕರಿಗೆ ಮಾಡಿದ ಮನವಿಯಲ್ಲಿ ತಿಳಿಸಿದ್ದು ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ.
ಇದರೊಂದಿಗೆ ಪಿಯುಸಿ ಅತಿಥಿ ಶಿಕ್ಷಕರಿರುವಲ್ಲಿ ಖಾಯಂ ಶಿಕ್ಷಕರನ್ನು ನಿಯೋಜನೆ ಮಾಡುತ್ತಿದ್ದು ಇದರಿಂದ ಅತಿಥಿ ಉಪನ್ಯಾಸಕರಿಗೆ ತೊಂದರೆಯಾಗುತ್ತಿದೆ. ಮಾತ್ರವಲ್ಲದೆ ನಾವು ಕೆಲಸ ಇಲ್ಲದೆ ಮನೆಯಲ್ಲಿ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಅತಿಥಿ ಉಪನ್ಯಾಸಕರು ಇರುವ ಕಾಲೇಜಿಗೆ ಖಾಯಂ ಶಿಕ್ಷಕರನ್ನು ನಿಯೋಜನೆ ಮಾಡಬಾರದು ಎಂದು ಅತಿಥಿ ಉಪನ್ಯಾಕಸರು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭ ಉಪನ್ಯಾಸಕರಾದ ತನುಜಾಕ್ಷಿ ಶೆಟ್ಟಿ, ಪ್ರಜ್ಞಾ, ಸಾಧನಾ, ಶೋಭಿತಾ, ಅಕ್ಷತಾ, ನವ್ಯಶ್ರೀ, ಜ್ಯೋತಿ, ಮಮತಾ, ಸಹನಾ, ಆಯಿಷತ್ ಮರ್ವ, ಮಹಮ್ಮದ್ ಜುಬೈರ್, ಪ್ರಸಾದ್, ತುಷಾರ, ಶ್ರುತಿ, ಅಶ್ವಿತಾ, ಉಷಾ, ಚಂದ್ರಿಕಾ, ಯೋಗೀಶ್ವರಿ, ದಿವ್ಯ ಬೇಬಿ, ಮತ್ತು ದೀಕ್ಷಿತಾ ಉಪಸ್ಥಿತರಿದ್ದರು.ಮನವಿಯ ಬಗ್ಗೆ ಶಿಕ್ಷಣ ಇಲಾಖೆಯ ಸಚಿವರಾದ ಮಧು ಬಂಗಾರಪ್ಪ ಅವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಪ್ರಯತ್ನ ನಡೆಸುವುದಾಗಿ ಹಾಗೂ ಹೊಸ ಆದೇಶದ ಬಗ್ಗೆ ಪರಿಶೀಲನೆ ನಡೆಸಲು ವಿನಂತಿಸುವುದಾಗಿ ಶಾಸಕರು ಮನವಿದಾರರಿಗೆ ಭರವಸೆ ನೀಡಿದರು.
ಜೊತೆಗೆ ಅತಿಥಿ ಉಪನ್ಯಾಸಕರು ಇರುವ ಕಡೆಗಳಲ್ಲಿ ಖಾಯಂ ಶಿಕ್ಷಕರ ನಿಯೋಜನೆ ರದ್ದುಗೊಳಿಸುವ ವಿಚಾರದ ಬಗ್ಗೆಯೂ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಜೊತೆ ಮಾತನಾಡುವುದಾಗಿ ಶಾಸಕರು ಭರವಸೆ ನೀಡಿದರು.