ರೂಮಲ್ಲಿ ತಿಗಣೆ ಕಾಟ..ಸ್ನಾನದ ನೀರಿನಲ್ಲಿ ಹುಳು..!

| Published : Nov 14 2025, 04:15 AM IST

ಸಾರಾಂಶ

ಹಲವು ದೂರು ಬಂದ ಹಿನ್ನೆಲೆಯಲ್ಲಿ ನಗರದಲ್ಲಿರುವ ಹಾಸ್ಟೆಲ್‌ಗಳಿಗೆ ಲೋಕಾಯುಕ್ತರು ಮತ್ತು ಉಪಲೋಕಾಯುಕ್ತರು ಗುರುವಾರ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಲವು ದೂರು ಬಂದ ಹಿನ್ನೆಲೆಯಲ್ಲಿ ನಗರದಲ್ಲಿರುವ ಹಾಸ್ಟೆಲ್‌ಗಳಿಗೆ ಲೋಕಾಯುಕ್ತರು ಮತ್ತು ಉಪಲೋಕಾಯುಕ್ತರು ಗುರುವಾರ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ವಿದ್ಯಾರ್ಥಿಗಳು, ನಮಗೆ ನೀಡುವ ಊಟ ಸರಿಯಾಗಿಲ್ಲ. ಸ್ನಾನಕ್ಕೆ ಬಳಸುವ ನೀರಿನಲ್ಲಿ ಹುಳುಗಳು ಇರುತ್ತವೆ. ಮೊಟ್ಟೆ–ಬಾಳೆಹಣ್ಣು ನೀಡುವುದಿಲ್ಲ. ಪ್ರಶ್ನಿಸಿದರೆ ಬೈಯುತ್ತಾರೆ. ನಮಗೆ ನೀಡಿರುವ ಹಾಸಿಗೆ, ದಿಂಬುಗಳು ಕೊಳಕಾಗಿ ನಾರುತ್ತಿವೆ. ಕೊಠಡಿ ತುಂಬೆಲ್ಲಾ ತಿಗಣೆಗಳು ಇದ್ದು, ಅವು ಕಚ್ಚಿ ಮೈಯೆಲ್ಲಾ ಗಂಧೆಗಳಾಗಿವೆ ಎಂದು ಲೋಕಾಯುಕ್ತರ ಮುಂದೆ ಅಳಲು ತೋಡಿಕೊಂಡರು.

ಸಮಾಜ ಕಲ್ಯಾಣ ಇಲಾಖೆ ಸೇರಿರುವ, ನಗರದ ಎಂ.ಜಿ.ರಸ್ತೆಯಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್ ಸರ್ಕಾರಿ ವಿಜ್ಞಾನ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ್‌ ಅವರು, ದಿಢೀರ್‌ ಭೇಟಿ ಪರಿಶೀಲನೆ ನಡೆಸಿದ್ದಾಗ ಅವರ ಮುಂದೆ ವಿದ್ಯಾರ್ಥಿಗಳು ಸಾಲು–ಸಾಲು ದೂರುಗಳನ್ನು ಹೇಳಿದರು.

2022ರಲ್ಲಿ ವಿದ್ಯಾರ್ಥಿಗಳು ನೀಡಿದ್ದ ದೂರಿನ ಆಧಾರದಲ್ಲಿ ಲೋಕಾಯುಕ್ತವು ಈ ಹಿಂದೆಯೇ ಪ್ರಕರಣ ದಾಖಲಿಸಿಕೊಂಡಿತ್ತು. ಲೋಕಾಯುಕ್ತ ಪೊಲೀಸ್‌ ವಿಭಾಗವು ನಡೆಸಿದ ಪರಿಶೀಲನೆಯ ನಂತರ ನಗರದ ವಿವಿಧೆಡೆ ಇರುವ ಹತ್ತು ವಿದ್ಯಾರ್ಥಿ ನಿಲಯಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆ ಪ್ರಕರಣಗಳ ತನಿಖೆಯ ಭಾಗವಾಗಿ ಲೋಕಾಯುಕ್ತರು, ಉಪ ಲೋಕಾಯುಕ್ತರು ಭೇಟಿ ನೀಡಿದಾಗ ವಿದ್ಯಾರ್ಥಿ ನಿಲಯಗಳಲ್ಲಿನ ಅವ್ಯವಸ್ಥೆ ತೆರೆದುಕೊಂಡಿತ್ತು.

ತನಿಖೆ ನಡೆಸಿ ವರದಿ ನೀಡಲು ಸೂಚನೆ:

ವಾರ್ಡನ್‌ ಮತ್ತು ಅಡುಗೆ ಸಹಾಯಕರು ತಮ್ಮಲ್ಲಿರುವ ವ್ಯವಸ್ಥೆಗಳು ಉತ್ತಮವಾಗಿವೆ ಎಂದು ಮಾಹಿತಿ ನೀಡಿದರು. ಆದರೆ ಲೋಕಾಯುಕ್ತರು ಪರಿಶೀಲನೆ ನಡೆಸಿದಾಗ ಸ್ವಚ್ಛತೆ ಇಲ್ಲದೆ ಇರುವುದು, ವಿದ್ಯಾರ್ಥಿಗಳು ಕಿಕ್ಕಿರಿದು ತುಂಬಿರುವುದು ಕಂಡುಬಂದಿತ್ತು. ತಕ್ಷಣವೇ ವಾರ್ಡನ್‌ ಮತ್ತು ಅಡುಗೆ ಸಹಾಯಕರನ್ನು ಹೊರಗಡೆ ಕಳುಹಿಸಿ, ಎಲ್ಲ ವಿದ್ಯಾರ್ಥಿಗಳನ್ನು ಕರೆಸಿ ಮಾಹಿತಿ ಪಡೆದುಕೊಂಡರು. ತಮಗೆ ನೀಡುವ ಬೆಳೆಗಿನ ಉಪಾಹಾರವು ಗುಣಮಟ್ಟದಿಂದ ಕೂಡಿರುವುದಿಲ್ಲ. ಮಧ್ಯಾಹ್ನ ಮತ್ತು ರಾತ್ರಿ ನೀಡುವ ಅನ್ನ ಬೆಂದಿರುವುದಿಲ್ಲ ಹಾಗೂ ಸಾರಿನಲ್ಲಿ ತರಕಾರಿಯಾಗಲೀ, ಬೇಳೆಯಾಗಲೀ ಇರುವುದಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು. ಈ ಬಗ್ಗೆ ತನಿಖೆ ನಡೆಸಿ, ವರದಿ ನೀಡಿ ಎಂದು ಲೋಕಾಯುಕ್ತರು, ಪೊಲೀಸರಿಗೆ ಸೂಚಿಸಿದರು.ಉಪಲೋಕಾಯುಕ್ತರಿಂದಲೂ ಪರಿಶೀಲನೆ:

ಸಮಾಜ ಕಲ್ಯಾಣ ಇಲಾಖೆಯು ಯಲಹಂಕ ಮತ್ತು ಕೊಡಿಗೆಹಳ್ಳಿಯಲ್ಲಿ ನಡೆಸುತ್ತಿರುವ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಉಪ ಲೋಕಾಯುಕ್ತ ಬಿ.ವೀರಪ್ಪ ಮತ್ತು ಉಪ ಲೋಕಾಯುಕ್ತ ಕೆ.ಎನ್‌.ಫಣೀಂದ್ರ ಅವರು ಭೇಟಿ ನೀಡಿದ ವಿಜಯನಗರದ ಮನುವನ ಬಳಿ ಇರುವ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಜಯನಗರದ ಮನುವನ ಬಳಿ ಇರುವ ಬಾಲಕಿಯರ ವಿದ್ಯಾರ್ಥಿ ನಿಲಯದ ಸ್ನಾನದ ಕೊಠಡಿಗಳಿಗೆ ದೊಡ್ಡ ಕಿಟಕಿಗಳಿವೆ. ಆದರೆ ಅವುಗಳಿಗೆ ಅರೆಪಾರದರ್ಶಕ ಗಾಜು ಅಥವಾ ಯಾವುದೇ ರೀತಿಯ ಮರೆಮಾಡಿರಲಿಲ್ಲ. ಈ ವಿದ್ಯಾರ್ಥಿ ನಿಲಯವು ನೆಲಮಟ್ಟದಿಂದ ಕೆಳಗಡೆ ಇದ್ದು, ಸುತ್ತ ಮುತ್ತ ಬಹುಮಹಡಿ ಕಟ್ಟಡಗಳಿವೆ. ಆ ಕಟ್ಟಡಗಳಿಂದ ವಿದ್ಯಾರ್ಥಿ ನಿಲಯದ ಸ್ನಾನದ ಮನೆಗಳು ಕಾಣುತ್ತವೆ. ಇದು ಅತ್ಯಂತ ಗಂಭೀರವಾದ ಸಮಸ್ಯೆಯಾಗಿದ್ದು, ಕೂಡಲೇ ಸರಿಪಡಿಸಬೇಕು ಎಂದು ಉಪಲೋಕಾಯುಕ್ತ ಕೆ.ಎನ್‌.ಫಣೀಂದ್ರ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.ತಕ್ಷಣವೇ ಸರಿಪಡಿಸಿ:

ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ, ಯಲಹಂಕದ ಬಾಲಕಿಯರ ವಿದ್ಯಾರ್ಥಿ ನಿಲಯದ ಅಡುಗೆ ಮನೆಗೆ ಭೇಟಿ ನೀಡಿದ್ದಾಗ, ತೀರಾ ಕೊಳಕಾಗಿದ್ದ ಮತ್ತು ಮುಕ್ಕಾಗಿದ್ದ ಪಾತ್ರೆಯಲ್ಲಿ ಕಾಫಿ ಕಾಯಿಸಿಟ್ಟಿರುವುದು ಕಂಡು ಬಂತು. ಜತೆಗೆ ಅಡುಗೆ ಮನೆಯ ತುಂಬೆಲ್ಲಾ ಕೊಳಕು ಇತ್ತು. ಆದರೆ ಸ್ವಚ್ಛವಾಗಿ ಮತ್ತು ಉತ್ತಮ ಸ್ಥಿತಿಯಲ್ಲಿದ್ದ ಪಾತ್ರೆಗಳನ್ನು ಬಳಸದೆ, ಅಟ್ಟದ ಮೇಲೆ ಜೋಡಿಸಡಲಾಗಿತ್ತು. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಉಪ ಲೋಕಾಯುಕ್ತರು ಲೋಪಗಳನ್ನು ತಕ್ಷಣವೇ ಸರಿಪಡಿಸಿ ಎಂದು ವಾರ್ಡನ್‌ಗೆ ಸೂಚಿಸಿದರು.