ರಾಮನಗರ: ವಸತಿ, ಕನಿಷ್ಠ ವೇತನ ಹಾಗೂ ಒಂದು ಸಾವಿರ ಬೀಡಿ ಕಟ್ಟಿದರೆ 350 ರು. ಗೌರವಧನ ನೇರವಾಗಿ ಕಾರ್ಮಿಕರಿಗೆ ಸಿಗುವಂತಾಗಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೀಡಿ ಕಾರ್ಮಿಕರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಆಂಜನೇಯ ಆರ್ಚ್ ಬಳಿಯಿಂದ ಮೆರವಣಿಗೆ ಹೊರಟ ನೂರಾರು ಬೀಡಿ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಬಳಿಯ ಪ್ರತಿಭಟನಾ ಸ್ಥಳದಲ್ಲಿ ಧರಣಿ ನಡೆಸಿ ಕಾರ್ಮಿಕ ಅಧಿಕಾರಿ ಕಾವೇರಿ ಅವರಿಗೆ ಬೇಡಿಕೆಗಳ ಮನವಿ ಸಲ್ಲಿಸಿದರು.ಎಲ್ಲ ನೋಂದಾಯಿತ ಮತ್ತು ನೋಂದಾಯಿತರಲ್ಲದ ಬೀಡಿ ಕಾರ್ಮಿಕರ ಸಮಗ್ರ ಸಮೀಕ್ಷೆ ನಡೆಸಿ ಅರ್ಹರಿಗೆ ಗುರುತಿನ ಚೀಟಿ ವಿತರಿಸಬೇಕು. ಆರೋಗ್ಯ ಸುರಕ್ಷತೆ, ಪಿಂಚಣಿ, ವಿದ್ಯಾರ್ಥಿ ವೇತನ, ವಿಮೆಯಂತಹ ಸಾಮಾಜಿಕ ಭದ್ರತಾ ಸೌಲಭ್ಯಗಳು ಸುಲಭವಾಗಿ ದೊರೆಯುವಂತಾಗಬೇಕು. ಮಹಿಳಾ ಬೀಡಿ ಕಾರ್ಮಿಕರಿಗೆ ವಿಶೇಷ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಹಿಳಾ ಕಾರ್ಮಿಕರ ಮೇಲಿನ ಶೋಷಣೆ, ಅವಮಾನ ಮತ್ತು ವೇತನ ತಾರತಮ್ಯ ತಡೆಯಲು ವಿಶೇಷ ದೂರು ಪರಿಹಾರ ಸಮಿತಿ ರಚಿಸಬೇಕು. ಬೀಡಿ ಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರಗಳನ್ನು ನಿಯಮಿತವಾಗಿ ಆಯೋಜಿಸಬೇಕು. ಧೂಳು ಮತ್ತು ತಂಬಾಕು ಸಂಬಂಧಿತ ಅನಾರೋಗ್ಯಗಳಿಂದ ಅನೇಕ ಕಾರ್ಮಿಕರು ಬಳಲುತ್ತಿದ್ದಾರೆ. ಉಚಿತ ಚಿಕಿತ್ಸಾ ಸೌಲಭ್ಯ ಹಾಗೂ ಔಷಧ ವಿತರಣೆ ಮಾಡಬೇಕು.

ಬೀಡಿ ಕಾರ್ಮಿಕರ ಪಿಎಫ್ , ಇಎಸ್ ಐ ಹಾಗೂ ಇತರ ಕಾನೂನುಬದ್ಧ ಸೌಲಭ್ಯಗಳನ್ನು ಕಡ್ಡಾಯವಾಗಿ ಜಾರಿಗೆ ತರಬೇಕು. ಕಾರ್ಮಿಕರಿಗೆ ದೊರೆಯಬೇಕಾದ ಹಕ್ಕುಗಳನ್ನು ತಪ್ಪಿಸುವ ಗುತ್ತಿಗೆದಾರರು ಮತ್ತು ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಉದ್ಯೋಗ ಭದ್ರತೆ ಒದಗಿಸಬೇಕು. ಕೆಲಸದ ಕೊರತೆ ಹಾಗೂ ಮಧ್ಯವರ್ತಿಗಳ ದೌರ್ಜನ್ಯದಿಂದ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರಂತರ ಕೆಲಸ ಹಾಗೂ ಕಾನೂನು ರಕ್ಷಣೆ ನೀಡಬೇಕು. ಕಾರ್ಮಿಕರ ಕುಂದುಕೊರತೆಗಳ ಕುರಿತಾಗಿ ಕಾರ್ಮಿಕ ಇಲಾಖೆ ಮಧ್ಯಸ್ಥಿಕೆಯಲ್ಲಿ ಮಾಲೀಕರ ಮತ್ತು ಕಾರ್ಮಿಕ ಮುಖಂಡರನ್ನು ಒಳಗೊಂಡು ಜಂಟಿ ಸಭೆ ಏರ್ಪಡಿಸಬೇಕು. ಕಾಲಕಾಲಕ್ಕೆ ಕಾರ್ಮಿಕರ ಸಮಸ್ಯೆಗಳನ್ನು ತ್ವರಿತವಾಗಿ ಆಲಿಸಿ ಪರಿಹರಿಸುವ ವ್ಯವಸ್ಥೆ ರೂಪಿಸಬೇಕು.


ಬೀಡಿ ಕಾಲೋನಿ ಪ್ರದೇಶದಲ್ಲಿ ನೈಜ ಕಾರ್ಮಿಕರಲ್ಲದವರಿಗೆ ವಿತರಿಸಿರುವ ವಸತಿಗಳನ್ನು ಹಿಂಪಡೆದು ವಸತಿ ರಹಿತ ಬೀಡಿ ಕಾರ್ಮಿಕರಿಗೆ ವಿತರಣೆ ಮಾಡಬೇಕು. ಬೀಡಿ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ವಿದ್ಯಾರ್ಥಿವೇತನ ನೀಡಬೇಕು. ಕಾರ್ಮಿಕ ಕುಟುಂಬಗಳ ಮಕ್ಕಳ ಶಿಕ್ಷಣ ಮುಂದುವರಿಸಲು ವಿಶೇಷ ನೆರವು ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸ್ಪಂದನ ಸಂಘಟನೆಯ ಕಾರ್ಯದರ್ಶಿ ಮಾಲಿನಿ , ಬೀಡಿ ಕಾರ್ಮಿಕರ ಮುಖಂಡ ಮುನಾಫ್, ಕಾರ್ಮಿಕ ಮುಖಂಡರಾದ ರಾಘವೇಂದ್ರ, ಮಂಗಳೂರು ವಿಜಯ್, ಅಶ್ವಥ್, ಕಾವ್ಯ, ಶ್ರೀನಿವಾಸ್, ಫಾರ್ಹನ್, ಬೀಡಿ ಕಾರ್ಮಿಕ ಸಂಘದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

---------------------

18ಕೆಆರ್ ಎಂಎನ್ 6.ಜೆಪಿಜಿ

ಬೀಡಿ ಕಾರ್ಮಿಕರು ಕಾರ್ಮಿಕ ಅಧಿಕಾರಿ ಕಾವೇರಿ ಅವರಿಗೆ ಮನವಿ ಸಲ್ಲಿಸಿದರು.

------------------------