ನಾಳೆಯಿಂದ ಕಾಲ ಬೀರಪ್ಪ ದೇವರ ಭಂಡಾರ ಜಾತ್ರೆ

| Published : Nov 17 2024, 01:17 AM IST

ಸಾರಾಂಶ

ವಿನೋಬ ನಗರದ ಕನಕ ನಗರದಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ನ.18 ರಿಂದ ನ.21 ರವರೆಗೆ 4 ದಿನಗಳ ಕಾಲ ಬೀರಪ್ಪ ದೇವರ ಭಂಡಾರ ಜಾತ್ರೆ ಆಯೋಜನೆ ಮಾಡಲಾಗಿದೆ ಎಂದು ದೇವಸ್ಥಾನ ಸಮಿತಿ ನಿರ್ದೇಶಕ ಸಿ.ಎಚ್. ಮಾಲತೇಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಿನೋಬ ನಗರದ ಕನಕ ನಗರದಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ನ.18 ರಿಂದ ನ.21 ರವರೆಗೆ 4 ದಿನಗಳ ಕಾಲ ಬೀರಪ್ಪ ದೇವರ ಭಂಡಾರ ಜಾತ್ರೆ ಆಯೋಜನೆ ಮಾಡಲಾಗಿದೆ ಎಂದು ದೇವಸ್ಥಾನ ಸಮಿತಿ ನಿರ್ದೇಶಕ ಸಿ.ಎಚ್. ಮಾಲತೇಶ್ ತಿಳಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಬೆಳಗ್ಗೆ 9ಕ್ಕೆ ಭಂಡಾರ ಬೀಸುವುದು, ಭಜನಾ ಮಂಡಳಿ ಮಾತೆಯವರಿಂದ ಕನಕ ನಗರದ ಮುಖ್ಯ ರಸ್ತೆಯಲ್ಲಿ ಕನಕದಾಸರ ಕೀರ್ತನೆಗಳ ಗಾಯನ ನಡೆಯಲಿದೆ ಎಂದರು.ಈ ಕಾರ್ಯಕ್ರಮವು ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಜಡೇದೇವರ ಮಠದ ಶ್ರೀ ಸ್ವಾಮಿ ಅಮೋಘಸಿದ್ದೇಶ್ವರ ನಂದರ ಸಾನಿಧ್ಯದಲ್ಲಿ ನಡೆಯಲಿದೆ ಎಂದರು.ಅಂದು ಸಂಜೆ 5ಕ್ಕೆ ಸಂಕಷ್ಟಹರ ಚತುರ್ಥಿ ಮತ್ತು ಕಾರ್ತಿಕ ದೀಪೋತ್ಸವ, ರಾತ್ರಿ 8ಕ್ಕೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನ.19 ರಂದು ನಡೆಯುವ ಕಾರ್ಯಕ್ರಮದಲ್ಲಿ ತಿಂಥಿಣಿ ಶಾಖಾ ಮಠದ ಕನಕಗುರು ಪೀಠದ ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ವಿನೋಬನಗರ ಶಿವಾಲಯದಿಂದ ಬೀರಲಿಂಗೇಶ್ವರ ದೇವಸ್ಥಾನದವರೆಗೆ ಪೂರ್ಣಕುಂಭ ಸ್ವಾಗತ ನಡೆಯಲಿದೆ. ಈ ವೇಳೆ ಗೌರಿಗದ್ದೆಯ ವಿನಯ್ ಗುರೂಜಿ ಅವಧೂತರು ಭಾಗಿಯಾಗಲಿದ್ದಾರೆ ಎಂದರು.ಬೆಳಗ್ಗೆ 11ಕ್ಕೆ ಶ್ರೀಗಳಿಂದ ಜೋಗತಿಯರಿಗೆ ಮಡ್ಲಕ್ಕಿ (ಉಡಿತುಂಬುವ) ಕಾರ್ಯಕ್ರಮ ಮತ್ತು ಚೌಡಿಕೆಪದ, ಮಧ್ಯಾಹ್ನ ಪ್ರಸಾದ ಅನ್ನದಾಸೋಹ ನಡೆಯಲಿದೆ. ಭಜನಾ ಪರಿಷತ್, ಶಿವಮೊಗ್ಗ ಮತ್ತು ಎಲ್ಲಾ ಭಜನಾ ಮಂಡಳಿಗಳ ಒಕ್ಕೂಟದಿಂದ ಭಜನಾಮೃತ ಮತ್ತು ಹಾಲುಮತ ಮಹಾಸಭಾದ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ. 80 ರಷ್ಟು ಅಂಕ ಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ನ.20 ರಂದು ಬುಧವಾರ ಬೆಳಗ್ಗೆ 6 ಕ್ಕೆ ಗಣಹೋಮ, ರುದ್ರಹೋಮ, ಪ್ರಧಾನ ಹೋಮ, ಶಕ್ತಿಹೋಮ ಜಯಾಹೋಮ ಮತ್ತು ಮಹಾಮಂಗಳಾರತಿ ಬೆಳಗ್ಗೆ 10 ಕ್ಕೆ ಹೊಸದುರ್ಗ ಶಾಖಾಮಠ ಈಶ್ವರಾನಂದಪುರಿ ಸ್ವಾಮೀಜಿ ಅವರ ಸಾನಿಧ್ಯದಲ್ಲಿ, ಶಿವಾಲಯದಿಂದ ಸಮಸ್ತ ಭಕ್ತಾದಿಗಳು ಬುತ್ತಿಯೊಂದಿಗೆ ಮೆರವಣಿಗೆ ಮೂಲಕ ಶ್ರೀಗಳೊಂದಿಗೆ ಬೀರಪ್ಪನ ನೈವೇದ್ಯ ಸಮರ್ಪಣೆ, ಮಹಾಪೂರ್ಣಾಹುತಿ, ಮಂಗಳಾರತಿ, ಪ್ರಸಾದ ವಿನಿಯೋಗ ಮತ್ತು ಆಶೀರ್ವಚನ ಕಾರ್ಯಕ್ರಮ ಜರುಗಲಿದೆ ಎಂದು ವಿವರಿಸಿದರು.ಸಂಜೆ 5 ರಂದು ಗೊರವಯ್ಯನವರಿಂದ ದೋಣಿ ಸೇವೆ, 7.30ಕ್ಕೆ ವಿದ್ವಾನ್ ದತ್ತಮೂರ್ತಿ ಭಟ್ ತಂಡದಿಂದ ಕನಕದಾಸರ ಜೀವನ ಚರಿತ್ರೆ ಯಕ್ಷಗಾನ, ರಾತ್ರಿ 9 ಗಂಟೆಗೆ ದೇವಸ್ಥಾನದ ಸುತ್ತ ಬಲಿ ಸಮರ್ಪಣೆ ನಡೆಯಲಿದೆ. ನ.21ರಂದು ಪರಿವಾರ ದೇವತೆಗಳಿಗೆ ಪಂಚಾಮೃತ ಅಭಿಷೇಕ ಮತ್ತು ವಿಶೇಷ ಅಲಂಕಾರ, ಅಷ್ಟೋತ್ತರ ಅರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ ಎಂದರು.ಮಧ್ಯಾಹ್ನ 3 ಗಂಟೆಗೆ ಡೊಳ್ಳು ವೀರಗಾಸೆ ಮತ್ತು ಮಂಗಳವಾದ್ಯದೊಂದಿಗೆ ನಗರದ ಗೋಪಿವೃತ್ತದಿಂದ ಜೈಲ್ ಸರ್ಕಲ್, ಲಕ್ಷ್ಮೀ ಚಲನಚಿತ್ರ ಮಂದಿರದ ಮೂಲಕ ಬೀರಲಿಂಗೇಶ್ವರ ದೇವಸ್ಥಾನದ ವರೆಗೆ ರಾಜಬೀದಿ ಉತ್ಸವ ನಡೆಯಲಿದೆ. ಈ ವೇಳೆ ಹಳದಿ ಬಾವುಟವನ್ನ ಭಕ್ತಾದಿಗಳು ಹಿಡಿದುಕೊಂಡು ಬರಲಿದ್ದಾರೆ ಎಂದು ತಿಳಿಸಿದರು.ನವೀನ್ ಒಡೆಯರ್ ಮತ್ತು ಸಂಗಡಿಗರಿಂದ ಜಗದ್ಗುರು ರೇವಣಸಿದ್ದೇಶ್ವರ ಸ್ವಾಮಿಯ ಅರ್ಚಕರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದ್ದು, ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ದಾಸೋಹ ಇರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವಂತೆ ಅವರು ಕೋರಿದರು. ಗೋಷ್ಠಿಯಲ್ಲಿ ಸಂಗೊಳ್ಳಿ ರಾಯಣ್ಣ ಸಂಘದ ರಾಮಕೃಷ್ಣ ಮೂಡ್ಲಿ, ಸಮಿತಿಯ ಶರತ್ ಮರಿಯಪ್ಪ, ಎಚ್. ಪಾಲಾಕ್ಷಿ, ಎಸ್. ಜ್ಞಾನೇಶ್ವರ, ಸಿ. ಹೊನ್ನಪ್ಪ, ಎಸ್.ಪಿ. ಶೇಷಾದ್ರಿ, ನವುಲೆ ಈಶ್ವರಪ್ಪ, ವಾಟಾಳ್ ಮಂಜುನಾಥ್, ಕೆ.ಜಿ. ರಾಘವೇಂದ್ರ, ಬಾಬಣ್ಣ, ಮೋಹನ್ ಮೊದಲಾದವರು ಉಪಸ್ಥಿತರಿದ್ದರು.