ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಕೃಷಿ ಆಧಾರಿತ ಗ್ರಾಮೀಣ ಜೀವನ ಉನ್ನತೀಕರಣದಲ್ಲಿ ಸಹಕಾರಿ ರಂಗದ ಕೊಡುಗೆ ಅನುಪಮ. ಬಸವನಾಡಿನಲ್ಲಿ ಸಹಕಾರಿ ಚಳುವಳಿ ಅಭ್ಯುದಯ ಸಾಧಿಸಿರುವುದು ಹೆಮ್ಮೆಯ ವಿಚಾರ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಬಣ್ಣಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಕೃಷಿ ಆಧಾರಿತ ಗ್ರಾಮೀಣ ಜೀವನ ಉನ್ನತೀಕರಣದಲ್ಲಿ ಸಹಕಾರಿ ರಂಗದ ಕೊಡುಗೆ ಅನುಪಮ. ಬಸವನಾಡಿನಲ್ಲಿ ಸಹಕಾರಿ ಚಳುವಳಿ ಅಭ್ಯುದಯ ಸಾಧಿಸಿರುವುದು ಹೆಮ್ಮೆಯ ವಿಚಾರ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಬಣ್ಣಿಸಿದರು.ನಗರದ ಶ್ರೀಶಾಂತೇಶ್ವರ ವಿವಿಧೋದ್ದೇಶ ಸಹಕಾರಿ ಸಂಘದ ರಜತ ಮಹೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಜಯಪುರ, ಬಾಗಲಕೋಟೆ ಸೇರಿದಂತೆ ಅಖಂಡ ವಿಜಯಪುರ ಜಿಲ್ಲೆಯ ಗ್ರಾಮೀಣ ಸಮಗ್ರ ಅಭಿವೃದ್ಧಿ ಮೂಲಕ ರೈತ ಸಮುದಾಯ ನೆಮ್ಮದಿಯ ಜೀವನ ನಡೆಸುವಲ್ಲಿ ಪಾಂಡುರಂಗ ದೇಸಾಯಿ ಅವರು ಸ್ಥಾಪಿಸಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕೊಡುಗೆ ಅಮೋಘವಾಗಿದೆ ಎಂದರು.
ನಾನು ಅಧ್ಯಕ್ಷನಾಗಿರುವ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಶತಮಾನದ ಹಿಂದೆ ಪಾಂಡುರಂಗ ದೇಸಾಯಿ ಅವರ ಮೂಲಕ ₹ 63 ಸಾವಿರ ಗಳಿಂದ ಆರಂಭಗೊಂಡು, ಇದೀಗ ₹ 14 ಸಾವಿರ ಕೋಟಿ ಆರ್ಥಿಕ ಶಕ್ತಿ ಹೊಂದಿದೆ. ಅದೇ ರೀತಿ ಹೊರ್ತಿ ಗ್ರಾಮದಲ್ಲಿ 25 ವರ್ಷಗಳ ಹಿಂದೆ ಶ್ರೀಮಂತ ಇಂಡಿ ಅವರ ಸಾರಥ್ಯದಲ್ಲಿ ಕೇವಲ ₹ 4 ಲಕ್ಷ ಬಂಡವಾಳದೊಂದಿಗೆ ಆರಂಭಗೊಂಡ ಶ್ರೀ ಶಾಂತೇಶ್ವರ ವಿವಿಧೋದ್ದೇಶ ಸಹಕಾರಿ ಸಂಘ, ಇದೀಗ ₹ 2000 ಕೋಟಿ ದುಡಿಯುವ ಬಂಡವಾಳ ಹೊಂದಿದೆ. 50 ಶಾಖೆಗಳನ್ನು ಸ್ಥಾಪಿಸಿ, 500 ಜನರಿಗೆ ಉದ್ಯೋಗ ಕಲ್ಪಿಸಿ, ಹಳ್ಳಿಯಲ್ಲಿ ಹುಟ್ಟಿ ನಗರದಲ್ಲಿ ಬೆಳವಣಿಗೆ ಕಂಡಿರುವುದು ಅದ್ಭುತ ಸಾಧನೆ ಎಂದು ಶ್ಲಾಘಿಸಿದರು.ಧೋತರ ಉಡುವವರೇ ಹಳ್ಳಿಯಲ್ಲಿ ಸ್ಥಾಪಿಸಿದ ಈ ಸಹಕಾರಿ ಸಂಘ ನಗರ ಪ್ರದೇಶದ ವಿದ್ಯಾವಂತರಿಗೆ ಉದ್ಯೋಗ ಕಲ್ಪಿಸಿ 500 ಕುಟುಂಬಗಳಿಗೆ ಆಧಾರವಾಗಿದೆ ಎಂಬುದು ಸಹಕಾರಿ ಕ್ಷೇತ್ರಕ್ಕೆ ಪ್ರೇರಣಾದಾಯಕ ನಿದರ್ಶನ ಎಂದು ಬಣ್ಣಿಸಿದರು.
ಕಾತ್ರಾಳ-ಬಾಲಗಾಂವ ಜ್ಞಾನ ಯೋಗಾಶ್ರಮದ ಅಮೃತಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಸಂಸ್ಥಾಪಕ ಅಧ್ಯಕ್ಷ ಶ್ರೀಮಂತ ಇಂಡಿ ವಹಿಸಿದ್ದರು. ಮುದ್ದೇಬಿಹಾಳ ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಅಪ್ಪಾಜಿ ನಾಡಗೌಡ ಮರಣೋತ್ತರ ಪರಿಹಾರ ಧನ ವಿತರಿಸಿದರು. ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರಾಜು ಬಿಜ್ಜರಗಿ, ಪ್ರಶಾಂತ ಶೆಟ್ಟಿ, ಶಾಂತೇಶ ಕಳಸಗೊಂಡ ಇವರಿಗೆ ಸಹಕಾರಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಸಾಧನೆಗಾಗಿ ನಿಂಗನಗೌಡ ಬಿರಾದಾರ, ಸಂತೋಷ ಇಂಡಿ, ಪ್ರಕಾಶಗೌಡ ಪಾಟೀಲ, ಶಿವಯೋಗೆಪ್ಪ ಚನಗೊಂಡ, ಶಿವಯೋಗೆಪ್ಪ ಜೋತಗೊಂಡ, ಹನುಮಂತರಾಯ ಪಾಟೀಲ, ಶ್ರೀಕಾಂತ ಕುಡಿಗನೂರು, ಭೀಮು ಸಾಹುಕಾರ ಬಸನಾಳ ಅವರನ್ನು ಸನ್ಮಾನಿಸಲಾಯಿತು.ಬಸವರಾಜ ಸಾವಕಾರ ನಿರೂಪಿಸಿದರು. ಬಿ.ಜೆ.ಇಂಡಿ ವಂದಿಸಿದರು.