ಕನ್ನಡಪ್ರಭ ವಾರ್ತೆ ಬೆಳಗಾವಿ

ಹಿಂದೂ ಎಂದರೆ ಕೇವಲ ಪೂಜಾ ವಿಧಾನ, ಆಹಾರ ಪದ್ಧತಿ ಅಥವಾ ಆಚರಣೆಗಳಲ್ಲ ಅದು ಒಂದು ಜೀವನ ಸ್ವಭಾವ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘಚಾಲಕ ಮೋಹನ್ ಭಾಗವತ್ ಅಭಿಪ್ರಾಯಪಟ್ಟರು.

ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರಿಗೆ ಶನಿವಾರ ಭೇಟಿ ನೀಡಿ ವೀರಭದ್ರೇಶ್ವರನ ದರ್ಶನ ಪಡೆದು ಶ್ರೀಕಾಡಸಿದ್ದೇಶ್ವರ ಮಠದಲ್ಲಿ ನಡೆದ ತುಲಾಭಾರ ಕಾರ್ಯಕ್ರಮದಲ್ಲಿ ಪಾಠಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.

ನಾನಾ ಪಂಥ, ಭಾಷೆ, ಪ್ರಾಂತ್ಯಗಳಿದ್ದರೂ ನಾವು ಪ್ರಾಚೀನ ಕಾಲದಿಂದಲೂ ಒಟ್ಟಿಗೆ ಬೆರೆತು ಬದುಕುತ್ತಿರುವುದೇ ನಮ್ಮ ಸಂಸ್ಕೃತಿ. ನಮ್ಮ ಸಮಾಜದಲ್ಲಿ ಅನೇಕ ದೇವರುಗಳು, ವಿಭಿನ್ನ ಆಹಾರ ಪದ್ಧತಿಗಳು ಮತ್ತು ಆಚರಣೆಗಳಿವೆ. ಭಿನ್ನತೆಗಳನ್ನು ನಾವು ಒಪ್ಪಿಕೊಳ್ಳುವುದಷ್ಟೇ ಅಲ್ಲ, ಗೌರವಿಸುತ್ತೇವೆ. ಯಾರನ್ನೂ ಮತಾಂತರ ಮಾಡುವುದಿಲ್ಲ. ಎಲ್ಲರನ್ನೂ ಅವರು ಹೇಗಿದ್ದಾರೋ ಹಾಗೆಯೇ ಸ್ವೀಕರಿಸುತ್ತೇವೆ ಎಂದು ಹೇಳಿದರು.

ನಿಮ್ಮ ನಂಬಿಕೆಯ ಮೇಲೆ ನೀವು ದೃಢವಾಗಿರಿ ಮತ್ತು ಇತರರ ನಂಬಿಕೆಯನ್ನು ಗೌರವಿಸಿ. ಪೂಜಾ ಪದ್ಧತಿ ವೈಯಕ್ತಿಕ ಮೋಕ್ಷಕ್ಕೆ ಸಂಬಂಧಿಸಿದ ವಿಷಯವಾಗಿರಬಹುದು. ಆದರೆ, ಎಲ್ಲರೂ ಒಟ್ಟಾಗಿ ಬದುಕುವುದು ಧರ್ಮದ ಸಾರವಾಗಿದೆ ಎಂದು ವಿವರಿಸಿದರು.


ಜಾಗತಿಕ ಸಂಘರ್ಷಗಳ ಕುರಿತು ಕಳವಳ ವ್ಯಕ್ತಪಡಿಸಿದ ಭಾಗವತ್‌ ಅವರು, ರಷ್ಯಾ-ಉಕ್ರೇನ್ ಯುದ್ಧ ಸೇರಿದಂತೆ ಇತ್ತೀಚಿನ ಘಟನೆಗಳನ್ನು ಉಲ್ಲೇಖಿಸಿ, ನಾನು ಮತ್ತು ನನ್ನದು ಎಂಬ ಸ್ವಾರ್ಥವೇ ಜಗತ್ತಿನ ಬಿಕ್ಕಟ್ಟುಗಳಿಗೆ ಪ್ರಮುಖ ಕಾರಣವಾಗುತ್ತಿದೆ. ಪ್ರತಿಯೊಂದು ವಿಷಯದಲ್ಲೂ ಸ್ವಾರ್ಥದ ಅಂಶಗಳನ್ನು ಮುಂದಿರಿಸುವ ಮನೋಭಾವವೇ ಜಾಗತಿಕ ವಿಭಜನೆಗೆ ಕಾರಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಪರಿಸರ ಬಿಕ್ಕಟ್ಟಿನಿಂದ ಹಿಡಿದು ಯುದ್ಧಗಳವರೆಗೆ ಪ್ರಪಂಚದ ಸಮಸ್ಯೆಗಳ ಮೂಲ ಮಾನವ ಧರ್ಮ ಅಥವಾ ವಿಶ್ವ ಧರ್ಮದ ಮರೆವಿನಲ್ಲಿದೆ ಎಂದು ಹೇಳಿದರು.

ಈ ವೇಳೆ ಶ್ರೀಶೈಲ ಪೀಠದ ಡಾ। ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮತ್ತು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.