ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಸಂವಿಧಾನವು ಎಲ್ಲರಿಗೂ ಬದುಕುವ ಅವಕಾಶ ನೀಡಿದೆ. ಆ ನಿಟ್ಟಿನಲ್ಲಿ ಯಾರು ಯಾವುದೇ ಉದ್ಯೋಗವನ್ನು ಆರಿಸಿಕೊಳ್ಳಲು ಅವಕಾಶ ನೀಡಿದೆ. ಭಾರತದಲ್ಲಿ ಇರುವ ಮಾನವ ಸಂಪನ್ಮೂಲ, ಬೌಗೋಳಿಕ ಸಂಪನ್ಮೂಲ, ಅರ್ಥಿಕ ಶಕ್ತಿ ಇನ್ಯಾವುದೇ ದೇಶಗಳಲ್ಲಿ ಕಾಣಲು ಸಾಧ್ಯವಿಲ್ಲ ಎಂದು ಮುರುಂಡಿ ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಲೋಹಿತ್ ತಿಳಿಸಿದರುತಾಲೂಕಿನ ಮುರುಂಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮತ್ತು ಸ್ಥಳೀಯ ಸಂಸ್ಥೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಪ್ರೇರಣಾ ಗೈಡ್ ಕಂಪನಿ ಕ್ಯಾಂಟೀನ್ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತದ ವಾಣಿಜ್ಯೋದ್ಯಮ ಮತ್ತು ಕೈಗಾರಿಕೆಗಳನ್ನು ಸ್ಥಾಪಿಸಿದ ಅನೇಕ ದಿಗ್ಗಜರ ಜೀವನ ಚರಿತ್ರೆ ಅಧ್ಯಯನ ಮಾಡಬೇಕು. ಸ್ಥಳೀಯವಾಗಿ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವು ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳುತ್ತಿದೆ. ಸ್ವಯಂ ಉದ್ಯೋಗ ಪ್ರಾರಂಭಿಸುವ ಹಂತದಲ್ಲಿ ಪೂರಕವಾಗಿ ತರಬೇತಿ, ನೈಪುಣ್ಯತೆ, ಸೃಜನ ಶೀಲತೆ, ಪ್ರಾಮಾಣಿಕತೆಯೊಂದಿಗೆ ನಿಷ್ಠೆ ಇದ್ದಲ್ಲಿ ಯಾವುದೇ ಉದ್ಯೋಗವನ್ನು ನಾವು ಉತ್ತುಂಗಕ್ಕೆ ಕೊಂಡೊಯ್ಯಬಹುದು. ಸ್ವಯಂ ಉದ್ಯೋಗ ಪ್ರಾರಂಭಿಸುವ ಮೊದಲು ಸಾಕಷ್ಟು ಅನುಭವ ಕೂಡ ಪಡೆಯಲು ಮುಂದಾಗಬೇಕು. ಸಾಮರಸ್ಯ ಮತ್ತು ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದಲ್ಲಿ ಯಾವುದೇ ಉದ್ಯಮದ ಯಶಸ್ಸು ನಮ್ಮದಾಗಿಸಿಕೊಳ್ಳಬಹುದು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ವಿದ್ಯಾರ್ಥಿಗಳು ಮತ್ತು ಮಕ್ಕಳಿಗೆ ಆತ್ಮವಿಶ್ವಾಸ ಮೂಡಿಸುವುದರ ಜೊತೆಗೆ ಜೀವನ ರೂಪಿಸಿಕೊಳ್ಳಲು ಕ್ಯಾಂಟೀನ್ ಡೇ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ವಿವಿಧ ಕ್ಷೇತ್ರಗಳ ಮೂಲಕ ಸೇವೆ ಸಲ್ಲಿಸಲು ಪ್ರೇರಣೆ ನೀಡುವ ಇಂತಹ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಹಕಾರಿಯಾಗಲಿವೆ ಎಂದರು.
ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಮಾತನಾಡಿ, ಅರಸೀಕೆರೆ ತಾಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಒಂದು ಕಾಲದಲ್ಲಿ ತವರೂರಾಗಿತ್ತು. ಅದು ಮತ್ತೊಮ್ಮೆ ಮರಕಳಿಸುವ ಸೂಚನೆ ಕಂಡು ಬರುತ್ತಿದೆ. ಪರಿಸರ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಎಲ್ಲರೂ ಸಾಮೂಹಿಕವಾಗಿ ಮುಂದಾಗಬೇಕಿದೆ. ರಾಜ್ಯದಲ್ಲಿ ಉತ್ತಮ ಕಾರ್ಯಕ್ರಮ ನಡೆಸಿದ ಯೂನಿಟ್ ಗಳನ್ನು ಗುರುತಿಸಿ ಸತ್ಕರಿಸಲಾಗುವುದು. ಜಿಲ್ಲೆಯ ಶ್ರವಣಬೆಳಗೊಳ ಮಹಾಮಸ್ತಾಭಿಷೇಕ, ಹಾಸನಾಂಬೆ ಜಾತ್ರಾ ಮಹೋತ್ಸವ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧನೆಗೆ ನಮ್ಮ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿದೆ ಎಂದು ಹೇಳಿದರು.ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಶಂಕರ್ ಮಾತನಾಡಿ, ಶಾಲಾ ಕಲಿಕಾ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ನಡೆಯಬೇಕು. ಆಗ ಮಾತ್ರ ಮಕ್ಕಳಿಗೆ ವ್ಯಾಪಾರ, ವಹಿವಾಟು, ಬ್ಯಾಂಕಿಂಗ್ ಕ್ಷೇತ್ರಗಳ ಪರಿಚಯವಾಗುತ್ತದೆ. ಸರ್ಕಾರದ ಜೊತೆ ಸ್ವಯಂ ಸೇವಾ ಸಂಸ್ಥೆಗಳು ಇಂತಹ ಕಾರ್ಯಗಳನ್ನು ಆಯೋಜಿಸುತ್ತಿರುವುದು ಸ್ವಾಗತಾರ್ಹ ಎಂದರು.
ಹಾಸನ ಜಿಲ್ಲಾ ಸ್ಕೌಟ್ಸ್ ಆಯುಕ್ತ ಸ್ಟೀಫನ್ ಪ್ರಕಾಶ್ ಮಾತನಾಡಿದರು.ಜಿಲ್ಲಾ ತರಬೇತಿ ಆಯುಕ್ತರಾದ ಕಾತ್ಯಾಯಿನಿ ತೇವರಿಮಠ್ ಸಂಸ್ಥೆ ಇತಿಹಾಸ ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಎಸ್.ಎನ್ ಸುರೇಶ್, ಉಪಾಧ್ಯಕ್ಷ ರೈಲ್ವೇ ಮಹದೇವ್, ನಿವೃತ್ತ ಮುಖ್ಯೋಪಾಧ್ಯಾಯ ಕೆ.ಸಿ ನಟರಾಜು, ಶಿಕ್ಷಕಿಯರಾದ ಸುಮಲತಾ, ಕವಿತಾ, ಲೋಕೇಶ್, ನವೀನ್ ಕುಮಾರ್, ಕುಸುಮ, ಉಪನ್ಯಾಸಕಿ ಸುಧಾ ಕಲ್ಯಾಣ್, ಹಿರಿಯ ಪತ್ರಕರ್ತ ಎಚ್.ಡಿ ಸೀತಾರಾಮ್ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಪೋಷಕ ವೃಂದದವರು ಭಾಗವಹಿಸಿದ್ದರು.ವಿದ್ಯಾರ್ಥಿಗಳು ತಾತ್ಕಾಲಿಕ ಮಳಿಗೆಗಳನ್ನು ನಿರ್ಮಾಣ ಮಾಡುವುದರ ಮೂಲಕ ತಾವೇ ನಾಮಕರಣ ಮಾಡಿದ್ದ ಶ್ರೀಜೇನುಕಲ್ಲು ಚಾಟ್ಸ್ ಸೆಂಟರ್, ಶ್ರೀ ದ್ಯಾವಮ್ಮ ದೇವಿ ಸೆಂಟರ್, ಶ್ರೀ ಅನ್ನಪೂರ್ಣೇಶ್ವರಿ ಹೊಟೇಲ್, ಜೇನುಶ್ರೀ ಹೊಟೇಲ್ ಸೇರಿದಂತೆ ವಿವಿಧ ಹೆಸರುಗಳ ಸ್ಟಾಲ್‌ಗಳಲ್ಲಿ ಮಾರಾಟ ಮಾಡುವ ದೃಶ್ಯ ಕಂಡುಬಂದಿತು. ಕೆಲವು ಪೋಷಕರು ತಮ್ಮ ಮಕ್ಕಳೊಂದಿಗೆ ಸಹಾಯಕರಾಗಿ ಕಾರ್ಯ ನಿರ್ವಹಿಸಿ ಪ್ರೇರೇಪಿಸಿದರು.
ಬಿಸಿ ಬೋಂಡ, ಚುರುಮುರಿ, ರವೆ ಉಂಡೆ, ಹೋಳಿಗೆ, ಪಾನಿಪುರಿ, ಚಕ್ಕಲಿ, ಕೋಡುಬಳೆ, ತಾಜಾ ತರಕಾರಿಗಳು, ವಿವಿಧ ಸೊಪ್ಪುಗಳು ಸೇರಿದಂತೆ ಸ್ಥಳೀಯ ತಿಂಡಿ ತಿನಿಸುಗಳು ಗ್ರಾಮಸ್ಥರು ಮತ್ತು ಅತಿಥಿಗಳ ಗಮನ ಸೆಳೆದು ಬಾಯಲ್ಲಿ ನೀರೂರಿಸಿದ್ದು ವಿಶೇಷ.