ಸೈನಿಕ, ಪತ್ರಿಕಾರಂಗ, ಕೃಷಿಯಿಂದ ಸಮಾಜದ ಅಭಿವೃದ್ಧಿ ಸಾಧ್ಯ: ಸ್ವಾಮೀಜಿ

| Published : Dec 23 2024, 01:00 AM IST

ಸಾರಾಂಶ

ಸೈನಿಕ, ಪತ್ರಿಕಾರಂಗ ಕೃಷಿ ಈ ಮೂರು ಕ್ಷೇತ್ರಗಳು ಸಮಾಜದ ಅಭಿವೃದ್ಧಿಗಾಗಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕರಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಹಾವೇರಿ: ದೇಶ ಕಾಯುವ ಸೈನಿಕ, ದೇಶದಲ್ಲಿ ನಡೆಯುವ ಘಟನೆಗಳನ್ನು ವರದಿ ಮಾಡುವ ಪತ್ರಿಕಾ ರಂಗ, ಕೃಷಿ ಪ್ರತಿಯೊಂದು ಜೀವಿಗೂ ಅನ್ನ, ಆಹಾರ ಪೂರೈಸುತ್ತದೆ. ಹಾಗಾಗಿ ಈ ಮೂರು ಕ್ಷೇತ್ರಗಳು ಸಮಾಜದ ಅಭಿವೃದ್ಧಿಗಾಗಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕರಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಶ್ರೀ ಮಲ್ಲಿಕಾರ್ಜುನ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಪತ್ರಕರ್ತರು, ಮಾಧ್ಯಮ ಮಿತ್ರರು ಹಾಗೂ ವೈದ್ಯರನ್ನು ಸನ್ಮಾನಿಸಿ ಮಾತನಾಡಿದರು.ಪತ್ರಿಕಾ ಮಾಧ್ಯಮ ಸಮಾಜದ ಅಂಕು -ಡೊಂಕು ತಿದ್ದುವುದರ ಜೊತೆಗೆ ಆರೋಗ್ಯಪೂರ್ಣ ಸಮಾಜ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪತ್ರಕರ್ತನ ಲೇಖನಿ ಖಡ್ಗಕ್ಕಿಂತ ಹರಿತವಾಗಿರುತ್ತದೆ. ಅದೆ ರೀತಿ ವೈದ್ಯರು ಜನರ ಆರೋಗ್ಯ ಕಾಪಾಡುತ್ತಾರೆ. ಆಧುನಿಕ ಯುಗದಲ್ಲಿ ಸಂಸ್ಕಾರ, ಸಂಸ್ಕೃತಿ, ಮೌಲ್ಯ ಕಡಿಮೆಯಾಗುತ್ತಿದೆ. ಗುಣಾತ್ಮಕ ಶಿಕ್ಷಣ ಕೊಡುವ ಮೂಲಕ ಸುಂದರ ಸಮಾಜ ನಿರ್ಮಿಸಲು ಮುಂದಾಗಬೇಕು ಎಂದರು.

ಪತ್ರಕರ್ತ ಮಾಲತೇಶ ಅಂಗೂರ ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನ ಮಕ್ಕಳ ವೈಜ್ಞಾನಿಕ ಮನೋಭಾವನೆ ಹೆಚ್ಚಿಸುತ್ತದೆ. ಮುದ್ದು ಮಕ್ಕಳು ವಿವಿಧ ಬಗೆಯ ವಿಶೇಷ ಮಾದರಿಗಳನ್ನು ಚೆನ್ನಾಗಿ ಮಾಡಿದ್ದಾರೆ. ಶ್ರೀಗಳು ಅನುಭವಿ ಶಿಕ್ಷರೊಂದಿಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಸಂಸ್ಕಾರ ಕೊಡುವ ಮೂಲಕ ಶಾಲೆಯ ಸಮಗ್ರ ಅಭಿರುದ್ದಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದರು.

ಡಾ. ಸಂಗಮೇಶ ದೊಡ್ಡಗೌಡ್ರ ಮಾತನಾಡಿ, ಶ್ರೀಗಳು ಸುಂದವಾದ ಕಟ್ಟಡದ ಜೊತೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಮಕ್ಕಳು ಅದ್ಭುತವಾಗಿ ಮಾಡಿದ ಇಂದಿನ ವಿಜ್ಞಾನ ವಸ್ತು ಪ್ರದರ್ಶನ ನೋಡಿ ತುಂಬಾ ಸಂತಸವಾಗಿದೆ ಎಂದರು.

ಮುಖ್ಯೋಪಾಧ್ಯಾಯ ಶಂಕರ ಅಕ್ಕಸಾಲಿ ಮಾತನಾಡಿದರು. ವೈದ್ಯರಾದ ಡಾ. ಗುಹೇಶ್ವರ ಪಾಟೀಲ, ಡಾ. ಶರಣಬಸವ ಅಂಗಡಿ, ಡಾ. ಶಿವಾನಂದ ಕೆಂಬಾವಿ, ಡಾ. ದಯಾನಂದ ಸುತಕೋಟಿ, ಡಾ. ಸಿದ್ದನಗೌಡ, ಡಾ. ಗಂಗಯ್ಯ ಕುಲಕರ್ಣಿ ಮೊದಲಾದವರನ್ನು ಶ್ರೀಗಳು ಸನ್ಮಾನಿಸಿದರು. ಚೇತನಾ ಮತ್ತು ಗೌಸಿಯಾ ಕಾರ್ಯಕ್ರಮ ನಿರೂಪಿಸಿದರು.