ಬಿಇಎಲ್‌ ರಸ್ತೆಯಲ್ಲಿ ಗುಂಡಿಗಳ ದರ್ಬಾರ್‌

| Published : Nov 07 2024, 01:17 AM IST

ಸಾರಾಂಶ

ನಗರದ ಬಿಇಎಲ್‌ ಸರ್ಕಲ್‌ನಿಂದ ಮುಂದುವರಿದು ವಿದ್ಯಾರಣ್ಯಪುರ, ಜಾಲಹಳ್ಳಿ ರಸ್ತೆಗಳಲ್ಲಿ ಗುಂಡಿಗಳ ದರ್ಬಾರ್‌ ಹೆಚ್ಚಾಗಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಹೈರಾಣಾಗಿದ್ದು, ದುರಸ್ತಿಗೆ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಬಿಇಎಲ್‌ ಸರ್ಕಲ್‌ನಿಂದ ಮುಂದುವರಿದು ವಿದ್ಯಾರಣ್ಯಪುರ, ಜಾಲಹಳ್ಳಿ ರಸ್ತೆಗಳಲ್ಲಿ ಗುಂಡಿಗಳ ದರ್ಬಾರ್‌ ಹೆಚ್ಚಾಗಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಹೈರಾಣಾಗಿದ್ದು, ದುರಸ್ತಿಗೆ ಒತ್ತಾಯಿಸಿದ್ದಾರೆ.

ಎರಡು ತಿಂಗಳ ಹಿಂದಷ್ಟೇ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಸೂಚನೆ ಮೇರೆಗೆ ನಗರಾದ್ಯಂತ ಎಲ್ಲ ರಸ್ತೆಗಳ ಪಾಟ್‌ಹೋಲ್‌ ಮುಚ್ಚುವ ಟಾಸ್ಕನ್ನು ಬಿಬಿಎಂಪಿ ನಡೆಸಿತ್ತು. ಇದಕ್ಕಾಗಿ ಪ್ರತಿ ವಾರ್ಡ್‌ಗೆ ₹15 ಲಕ್ಷ ಬಿಡುಗಡೆ ಮಾಡಲಾಗಿದೆ. ಅದರ ಭಾಗವಾಗಿ ಇಲ್ಲಿಯೂ ಗುಂಡಿಗಳನ್ನು ಮುಚ್ಚಲಾಗಿತ್ತು. ಆದರೆ, ಕಾಟಾಚಾರಕ್ಕಾಗಿ, ಕಳಪೆಯಾಗಿ ಗುಂಡಿ ಮುಚ್ಚಲಾಗಿದೆ. ಸೆಪ್ಟೆಂಬರ್‌ ಕೊನೆಯ ವಾರ ಸುರಿದ ಮಳೆಗೆ ರಸ್ತೆ ಗುಂಡಿ ಮುಚ್ಚಿದ ಕಾಮಗಾರಿಯ ಗುಣಮಟ್ಟ ಬಯಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಇಎಲ್‌ ಸರ್ಕಲ್‌ ಸೇರಿದಂತೆ ಎಚ್ಎಂಟಿ ರಸ್ತೆ, ಗಂಗಮ್ಮ ಸರ್ಕಲ್‌, ಎಂ.ಎಸ್‌.ಪಾಳ್ಯಕ್ಕೆ ಹೋಗುವ ಮುಖ್ಯ ರಸ್ತೆಗುಂಟ ಗುಂಡಿಗಳು ಉಂಟಾಗಿವೆ. ಜಾಲಹಳ್ಳಿ, ಜಾಲಹಳ್ಳಿ ಏರ್‌ಪೋರ್ಟ್‌ ಸ್ಟೇಷನ್‌, ಅಬ್ಬಿಗೆರೆ, ರಾಮಚಂದ್ರಾಪುರ, ಎಚ್‌ಎಂಟಿ ಸೇರಿ ಮತ್ತಿತರೆಡೆ ಬರುವವರು ಪರದಾಡುವಂತಾಗಿದೆ.

ಗುಂಡಿಗಳಿಂದ ಜಲ್ಲಿಕಲ್ಲುಗಳು, ಟಾರ್‌ ತುಂಡುಗಳು ರಸ್ತೆಯ ತುಂಬೆಲ್ಲ ಹರಡಿಕೊಂಡಿವೆ. ಅಡಿಗಳಷ್ಟು ಆಳದ ಗುಂಡಿಗಳಲ್ಲಿ ವಾಹನಗಳು ಹತ್ತಿಳಿಯುವುದರಿಂದ ಸವಾರರು ಪರದಾಡುತ್ತಿದ್ದಾರೆ. ಗುಂಡಿಗಳನ್ನು ತಪ್ಪಿಸಿ ವಾಹನ ಚಲಾಯಿಸುವುದೇ ಸವಾಲಾಗಿದೆ. ಒಳ ರಸ್ತೆ, ಬಡಾವಣೆಗಳಲ್ಲೂ ಇದೇ ಪರಿಸ್ಥಿತಿಯಿದೆ.

ಈ ರಸ್ತೆಗಳಲ್ಲಿ ಪ್ರತಿನಿತ್ಯ ಸಾವಿರಾರು ಬೈಕ್‌ ಸವಾರರು, ಶಾಲಾ ವಾಹನಗಳು, ಕಚೇರಿಗೆ ಹೋಗುವವರು ಅಧಿಕಾರಿ ವರ್ಗಕ್ಕೆ ಶಪಿಸಿಕೊಂಡು ಓಡಾಡುವಂತಾಗಿದೆ. ಮಳೆ ಬಂದರೆ ನೀರು ತುಂಬಿಕೊಂಡು ಗುಂಡಿಗಳು ಗೊತ್ತಾಗುವುದಿಲ್ಲ. ಈಗ ಬಿಸಿಲಿದೆ, ಗುಂಡಿಗಳಿಂದಾಗಿ ಧೂಳು ಹೆಚ್ಚಾಗಿದೆ. ಮುಂದೆ ಬಸ್ಸು ಸೇರಿ ಮತ್ತಿತರೆ ಬೃಹತ್‌ ವಾಹನಗಳು ಹೋದರೆ ಹಿಂದೆ ಹೋಗುವುದು ಕಷ್ಟ ರಸ್ತೆಯನ್ನು ದುರಸ್ತಿ ಮಾಡಲಾಗಿಯೇ ಇಲ್ಲವೆ ಎಂಬ ಅನುಮಾನ ಬರುವಂತ ಸ್ಥಿತಿಯಿದೆ ಎಂದು ಸ್ಥಳೀಯ ನಿವಾಸಿ ಎಂ.ರಾಜೇಶ್‌ ವ್ಯಂಗ್ಯವಾಡಿದರು.

ಮಳೆಯಿಂದಾಗಿ ರಸ್ತೆಗಳಲ್ಲಿ ಗುಂಡಿಗಳು ಉಂಟಾಗಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ದುರಸ್ತಿ ಮಾಡಿದ ರಸ್ತೆ ಒಂದೇ ಮಳೆಗೆ ಪುನಃ ಕಿತ್ತು ಹೋಗುತ್ತಿದೆ ಎಂದರೆ ಏನರ್ಥ? ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಮಾತ್ರವಲ್ಲ, ಕಾಮಗಾರಿ ಗುಣಮಟ್ಟ ಹೇಗಿದೆ ಎಂಬುದನ್ನೂ ಮೇಲ್ವಿಚಾರಣೆ ಮಾಡಬೇಕು ಎಂದು ಸ್ಥಳೀಯ ನಿವಾಸಿ ಭರತ್‌ ಹೇಳಿದರು.

ನಾಳೆಯೇ ಈ ರಸ್ತೆಗಳಲ್ಲಿ ಎಲ್ಲ ಗುಂಡಿಗಳನ್ನು ಮುಚ್ಚುವಂತೆ ಸೂಚಿಸಿದ್ದೇವೆ. ಈಚೆಗೆ ಬಂದ ಮಳೆಯಿಂದ ರಸ್ತೆಗಳು ಕಿತ್ತು ಹೋಗಿರುವುದಾಗಿ ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಏನೇ ಆಗಿರಲಿ, ರಸ್ತೆ ದುರಸ್ತಿ ಮಾಡುವಂತೆ ಹೇಳಿದ್ದೇವೆ.

-ಬಿ.ಎಸ್‌.ಪ್ರಹ್ಲಾದ್‌, ಬಿಬಿಎಂಪಿ, ರಸ್ತೆ ಮುಖ್ಯ ಎಂಜಿನಿಯರ್‌.

ಮುಚ್ಚಿದ್ದ ಗುಂಡಿಗಳೆಲ್ಲ ಪುನಃ ಬಾಯ್ದೆರೆದುಕೊಂಡಿವೆ. ಈ ರಸ್ತೆಗಳಲ್ಲಿ ವಾಹನ ಚಲಾಯಿಸಿಕೊಂಡು ಹೋಗುವುದೇ ಕಷ್ಟವಾಗಿದ್ದು, ಸರ್ಕಾರ, ಬಿಬಿಎಂಪಿ ಆದಷ್ಟು ಬೇಗ ಈ ರಸ್ತೆಯನ್ನು ರಿಪೇರಿ ಮಾಡಿಸಬೇಕು.

-ಪವನ್‌ ಮತ್ತಿಕೆರೆ, ಸ್ಥಳೀಯ ನಿವಾಸಿ.