ಸಾರಾಂಶ
ಬಳ್ಳಾರಿ: ರಂಗಭೂಮಿ ಮತ್ತು ಜಾನಪದ ಕ್ಷೇತ್ರಕ್ಕೆ ಅನನ್ಯ ಸೇವೆ, ಸಾಧನೆ ಮೂಲಕ ಕನ್ನಡ ನಾಡಿಗೆ ವಿಶೇಷವಾಗಿ ಬಳ್ಳಾರಿಗೆ ಕೀರ್ತಿ ತಂದ ನಾಡೋಜ ಬೆಳಗಲ್ಲು ವೀರಣ್ಣ ಅವರ ಹೆಸರಿನಲ್ಲಿ ಕಲಾಕ್ಷೇತ್ರ ನಿರ್ಮಿಸಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಸಿ.ಮಂಜುನಾಥ್ ಒತ್ತಾಯಿಸಿದರು.ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು, ಬಳ್ಳಾರಿ ಜಿಲ್ಲಾ ಘಟಕ ಹಾಗೂ ನಗರದ ಶ್ರೀ ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ಇವರ ಸಹಯೋಗದೊಂದಿಗೆ ಸ್ನೇಹ ಸಂಪುಟ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಾಡೋಜ ಬೆಳಗಲ್ಲು ವೀರಣ್ಣ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಭಾರತದ ಸಂಸ್ಕೃತಿ ಪರಂಪರೆಯನ್ನು ತೊಗಲುಗೊಂಬೆ ಕಲೆ ಮೂಲಕ ದೇಶ ವಿದೇಶಗಳಲ್ಲಿ ಪ್ರಚುರಪಡಿಸಿದ ನಾಡೋಜ ಬೆಳಗಲ್ಲು ವೀರಣ್ಣ ಅವರು ಬಳ್ಳಾರಿಯ ಹೆಮ್ಮೆಯಾಗಿದ್ದಾರೆ. ವೀರಣ್ಣನವರು ಪ್ರತಿಭೆ, ಸರಳ, ಸಜ್ಜನಿಕೆ, ವಿನಯವಂತಿಕೆಯಲ್ಲಿ ವರನಟ ಡಾ. ರಾಜಕುಮಾರ್ ಅವರಂತಿದ್ದರು. ಹಿರಿಯ ಸಂಗೀತ ನಿರ್ದೇಶಕ ಡಾ.ಹಂಸಲೇಖ ಅವರು ಬೆಳಗಲ್ಲು ವೀರಣ್ಣ ಅವರನ್ನು ರಂಗಭೂಮಿಯ ಡಾ. ರಾಜಕುಮಾರ್ ಎಂದೇ ಕರೆಯುತ್ತಿದ್ದರು ಎಂದು ಸ್ಮರಿಸಿದರು.
ನಾಡೋಜ ಬೆಳಗಲ್ಲು ವೀರಣ್ಣ ಕಲಾಕ್ಷೇತ್ರ ನಿರ್ಮಾಣದ ಜತೆಗೆ ನಗರದ ಪ್ರಮುಖ ರಸ್ತೆಗೆ ಇವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಕಲ್ಲುಕಂಬ ಪಂಪಾಪತಿ ಅವರು ಆಗ್ರಹಿಸಿದರಲ್ಲದೆ, ಶೀಘ್ರದಲ್ಲೇ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಆಯುಕ್ತರಿಗೆ ತಮ್ಮ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮನವಿ ಪತ್ರ ನೀಡಲಾಗುವುದು ಎಂದು ತಿಳಿಸಿದರು.ಸತ್ಯಂ ಬಿಇಡಿ ಕಾಲೇಜಿನ ಪ್ರಾಚಾರ್ಯ ಡಾ.ಅಶ್ವರಾಮು ಮಾತನಾಡಿದರು.
ಸಂಘಟಕ ಬಿಸಲಹಳ್ಳಿ ಬಸವರಾಜ್ ವೀರಣ್ಣ ಅವರ ಒಡನಾಟ ಸ್ಮರಿಸಿದರು. ರಂಗಕಲಾವಿದ ಪರಶುರಾಮ್ ಹಂದ್ಯಾಳ್, ತೊಗಲುಗೊಂಬೆ ಕಲಾವಿದ ಬೆಳಗಲ್ಲು ಮಲ್ಲಿಕಾರ್ಜುನ, ಅಧ್ಯಾಪಕ ಬೆಳಗಲ್ಲು ಹನುಮಂತು, ಲಕ್ಷ್ಮಿ ಬೆಳಗಲ್ಲು, ಆಲಾಪ್ ಸಂಗೀತ ಕಲಾ ಬಳಗದ ರಮಣಪ್ಪ ಭಜಂತ್ರಿ, ಛಾಯಾಗ್ರಾಹಕ ತಿಪ್ಪೇಸ್ವಾಮಿ, ಟಿ. ಸುನೀಲ್ ಕುಮಾರ್ ಇತರರಿದ್ದರು. ಗಗನ ಕುಮಾರ್, ಲೇಖಕ ಎಎಂಪಿ ವೀರೇಶಸ್ವಾಮಿ ಹಾಗೂ ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ನ ಅಧ್ಯಕ್ಷ ಸುಬ್ಬು ಶಿಳ್ಳೇಕ್ಯಾತರ ಕಾರ್ಯಕ್ರಮ ನಿರ್ವಹಿಸಿದರು.