ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ಗೆ ಬಿಜೆಪಿ ಟಿಕೆಟ್ ಬಹುತೇಕ ಖಚಿತವಾಗಿದೆ ಎಂದು ಹಾಲಿ ಸಂಸದೆ ಮಂಗಲ ಅಂಗಡಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಎರಡನೇ ಲಿಸ್ಟ್ನಲ್ಲಿ ನಮ್ಮ ಕುಟುಂಬದ ಹೆಸರು ಬರಲಿಲ್ಲ. ಹೀಗಾಗಿ ನಾವು ಹೈಕಮಾಂಡ್ ಭೇಟಿಯಾಗಲು ಹೋಗಿದ್ದೆವು.
ಅಷ್ಟರೊಳಗೆ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಕೊಡುವ ಚರ್ಚೆ ನಡೆದಿತ್ತು. ಹೀಗಾಗಿ ದೆಹಲಿಯಿಂದ ಮರಳಿ ಬಂದಿದ್ದೇವೆ. ಶೆಟ್ಟರ್ ಮೊದಲು ಬೆಳಗಾವಿಯಿಂದ ಬೇಡ ಎಂದು ಹೇಳಿದ್ದರು. ಆದರೆ, ವರಿಷ್ಠರು ನೀವೇ ನಿಂತುಕೊಳ್ಳಬೇಕೆಂದು ಹೇಳಿದ್ದಾರೆ.
ಹಾಗಾಗಿ, ನಾವು ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗಲಿಲ್ಲ. ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಈಗಲೂ ನನ್ನ ಮತ್ತು ನನ್ನ ಮಕ್ಕಳ ಹೆಸರಿದೆ ಎಂದು ಹೇಳಿದರು.
ಜಗದೀಶ ಶೆಟ್ಟರ್ ಅವರಿಗೆ ಟಿಕೆಟ್ ಕೊಟ್ಟರೆ ಯಾವುದೇ ಅಭ್ಯಂತರ ಇಲ್ಲ. ಅವರ ಪರವಾಗಿ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ. ನನ್ನ ಮಕ್ಕಳಾದ ಶ್ರದ್ಧಾ ಇಲ್ಲವೆ, ಸ್ಫೂರ್ತಿಗೆ ಟಿಕೆಟ್ ನೀಡಬೇಕೆಂಬ ನನ್ನ ಬೇಡಿಕೆ ಇತ್ತು. ಆದರೆ, ಪಕ್ಷದ ಹೈಕಮಾಂಡ್ ತೀರ್ಮಾನ ನಿರಾಸೆ ಮೂಡಿಸಿದೆ ಎಂದರು.
ಗೋ ಬ್ಯಾಕ್ ಶೆಟ್ಟರ್ ಅಭಿಯಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬೇರೆ ಬೇರೆ ಜಿಲ್ಲೆಯ ನಾಯಕರು ಈಗಾಗಲೇ ಬೇರೆ ಬೇರೆ ಕಡೆ ಸ್ಪರ್ಧೆ ಮಾಡಿದ್ದಾರೆ.
ಜಗದೀಶ್ ಶೆಟ್ಟರ್ ಮಾಜಿಮುಖ್ಯಮಂತ್ರಿ ಮತ್ತು ಹಿರಿಯ ನಾಯಕರು. ಸ್ಪರ್ಧೆ ಮಾಡಬಹುದು. ಸ್ಥಳೀಯ ಪಕ್ಷದ ನಾಯಕರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ.
ಪಕ್ಷದ ಹೈಕಮಾಂಡ್ ನಮಗೆ ಯಾವುದೇ ಆಶ್ವಾಸನೆ ಕೊಟ್ಟಿಲ್ಲ. ಟಿಕೆಟ್ ನೀಡುವುದಿಲ್ಲ ಎಂದೂ ಹೇಳಿಲ್ಲ ಎಂದು ಹೇಳಿದರು. ಶೆಟ್ಟರ್‌ಗೆ ಖುಷಿಯಿಂದ ಸೀಟು ಬಿಟ್ಟು ಕೊಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಸಂಗ ಹಾಗೆ ಬಂದಿದೆ ಎಂದು ನಸು ನಕ್ಕರು.