ಸಾರಾಂಶ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮಾದರಿಯಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ಕಾರ್ಯನಿರ್ವಹಣೆ ಮಾಡಲು ‘ಮೈಸೂರು ಅಭಿವೃದ್ಧಿ ಪ್ರಾಧಿಕಾರ ವಿಧೇಯಕ 2024’ನ್ನು ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ಸಭೆಯಲ್ಲಿ ಶುಕ್ರವಾರ ನಿರ್ಧರಿಸಲಾಯಿತು.
ಸುವರ್ಣ ವಿಧಾನಸೌಧ : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮಾದರಿಯಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ಕಾರ್ಯನಿರ್ವಹಣೆ ಮಾಡಲು ‘ಮೈಸೂರು ಅಭಿವೃದ್ಧಿ ಪ್ರಾಧಿಕಾರ ವಿಧೇಯಕ 2024’ನ್ನು ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ಸಭೆಯಲ್ಲಿ ಶುಕ್ರವಾರ ನಿರ್ಧರಿಸಲಾಯಿತು.
ಮುಡಾ ನಿವೇಶನ ಹಂಚಿಕೆ ವಿವಾದದ ನಡುವೆಯೇ ಮುಡಾಕ್ಕೆ ಪ್ರತ್ಯೇಕ ಕಾಯ್ದೆ ರೂಪಿಸಲು ನಿರ್ಧರಿಸಲಾಗಿದೆ. ಬಿಡಿಎ ಮಾದರಿಯಲ್ಲಿ ಭೂಸ್ವಾಧೀನ, ನಿವೇಶನ ಹಂಚಿಕೆ, ನಕ್ಷೆ ಮಂಜೂರಾತಿ, ತೆರಿಗೆ ವಸೂಲಿಯಂಥ ಕಾರ್ಯಗಳನ್ನು ಮುಡಾ ಮೂಲಕ ಮಾಡಲು ಮುಡಾ ವಿಧೇಯಕ 2024ನ್ನು ಮುಂದಿನ ವಾರ ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು.
ನೂತನ ಕಾಯ್ದೆಯಿಂದಾಗಿ ಈವರೆಗೆ ಇರುವ ಸದಸ್ಯರ ಸಂಖ್ಯೆ ಕಡಿಮೆಯಾಗಲಿದೆ. ಬಿಡಿಎ ಮಾದರಿಯಲ್ಲಿ ನಿರ್ದಿಷ್ಟ ಮಂದಿಗಷ್ಟೇ ಮತ್ತು ಅಧಿಕಾರಿಗಳಿಗೆ ಮುಡಾದ ಆಡಳಿತ ಮಂಡಳಿಯಲ್ಲಿ ಸ್ಥಾನ ಸಿಗಲಿದೆ. ಸದ್ಯ ಹತ್ತಕ್ಕೂ ಹೆಚ್ಚಿನ ಜನಪ್ರತಿನಿಧಿಗಳು, ರಾಜಕೀಯ ನಾಯಕರು ಮುಡಾ ಆಡಳಿತ ಮಂಡಳಿ ಸದಸ್ಯರಾಗಿದ್ದಾರೆ. ಆದರೆ, ಅದು ಮೂರರಿಂದ ನಾಲ್ಕಕ್ಕೆ ಇಳಿಕೆಯಾಗಲಿದೆ. ಉಳಿದಂತೆ ಆಯುಕ್ತರು, ಸದಸ್ಯ ಕಾರ್ಯದರ್ಶಿ ಸೇರಿದಂತೆ ಅಧಿಕಾರಿಗಳ ಸಂಖ್ಯೆ ಹೆಚ್ಚಿರಲಿದೆ.
ಬಿಡಿಎ, ಮುಡಾ ಸೇರಿ ರಾಜ್ಯದ ಎಲ್ಲ ನಗರಾಭಿವೃದ್ಧಿ ಪ್ರಾಧಿಕಾರಗಳು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಿಗಳ ಕಾಯಿದೆ-1987ರ ಅಡಿ ಕೆಲಸ ಮಾಡುತ್ತಿವೆ. ಇದೀಗ ಮುಡಾ ವಿಧೇಯಕ 2024 ಅನುಮೋದನೆ ನಂತರ ಬಿಡಿಎ ರೀತಿಯಲ್ಲಿ ಮುಡಾ ಪ್ರತ್ಯೇಕ ಕಾಯ್ದೆ ಅಡಿ ಕಾರ್ಯನಿರ್ವಹಿಸಲಿದೆ. ಮುಡಾ ವಿಧೇಯಕ ಮಾದರಿಯಲ್ಲಿಯೇ ರಾಜ್ಯದ ಎಲ್ಲ ನಗರಾಭಿವೃದ್ಧಿ ಪ್ರಾಧಿಕಾರಗಳಿಗೂ ಪ್ರತ್ಯೇಕ ವಿಧೇಯಕ ರೂಪಿಸುವ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಸದ್ಯ ಮುಡಾ ವಿಧೇಯಕಕ್ಕೆ ಮಾತ್ರ ಸೀಮಿತ ಮಾಡಲಾಗಿದೆ.