ಸಾರಾಂಶ
ಕೇಂದ್ರ ಸರ್ಕಾರದ ಉದ್ದೇಶಿತ ‘ಒಂದು ದೇಶ, ಒಂದು ಚುನಾವಣೆ’ ಜನರ ಗಮನ ಬೇರೆಡೆ ಸೆಳೆಯುವ ತಂತ್ರ. ಯಾವುದೇ ಚರ್ಚೆ ಇಲ್ಲದೆ ಏಕಾಏಕಿ ಈ ವ್ಯವಸ್ಥೆ ಜಾರಿ ಸರಿಯಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ.
ಸುವರ್ಣ ವಿಧಾನಸೌಧ : ಕೇಂದ್ರ ಸರ್ಕಾರದ ಉದ್ದೇಶಿತ ‘ಒಂದು ದೇಶ, ಒಂದು ಚುನಾವಣೆ’ ಜನರ ಗಮನ ಬೇರೆಡೆ ಸೆಳೆಯುವ ತಂತ್ರ. ಈ ಹಿಂದೆ ನೆಹರು ಅವರೇ ಈ ಪದ್ಧತಿ ಸರಿಯಿಲ್ಲ ಎಂದು ಕೈ ಬಿಟ್ಟಿದ್ದರು, ಯಾವುದೇ ಚರ್ಚೆ ಇಲ್ಲದೆ ಏಕಾಏಕಿ ಈ ವ್ಯವಸ್ಥೆ ಜಾರಿ ಸರಿಯಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ.
ಶುಕ್ರವಾರ ಸುದ್ದಿಗಾರರ ಜೊತೆ ಪ್ರತ್ಯೇಕವಾಗಿ ಮಾತನಾಡಿದ ಅವರು, ಪ್ರಧಾನಿ ತಮ್ಮ ವೈಫಲ್ಯ ಮುಚ್ಚಿ ಹಾಕಲು ಈ ವ್ಯವಸ್ಥೆ ಜಾರಿಗೆ ಮುಂದಾಗಿದ್ದಾರೆ ಎಂದರು.
ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಜನರ ಗಮನ ಬೇರೆಡೆ ಸೆಳೆಯಲು ‘ಒಂದು ದೇಶ, ಒಂದು ಚುನಾವಣೆ’ ವಿಚಾರವನ್ನು ಕೇಂದ್ರ ಸರ್ಕಾರ ಎತ್ತಿಕೊಂಡಿದೆ. ಕೇಂದ್ರ ಸರ್ಕಾರಕ್ಕೆ ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಚರ್ಚಿಸುವ ಆಸಕ್ತಿ ಇಲ್ಲ. ಒಂದೇ ಬಾರಿಗೆ ಚುನಾವಣೆ ಯಾವ ರೀತಿ ಮಾಡುತ್ತಾರೆ ಎಂಬ ನೀಲಿ ನಕ್ಷೆ ರೂಪಿಸಿದ್ದಾರಾ? ಪ್ರಾದೇಶಿಕ ಪಕ್ಷಗಳ ಅಭಿಪ್ರಾಯ ತಗೊಂಡಿದ್ದೀರಾ? ಅದಾನಿ ಉಳಿಸಲು ಇದನ್ನು ತಂದಿದ್ದಾರೆ ಎಂದು ಟೀಕಿಸಿದರು.
ನೆಹರು ಕಾಲದಲ್ಲೇ ವಿಫಲ-ಲಾಡ್: ‘ಒಂದು ದೇಶ, ಒಂದು ಚುನಾವಣೆ’ ಪರಿಕಲ್ಪನೆಯನ್ನು ದೇಶದ ಮೊದಲ ಪ್ರಧಾನಿ ನೆಹರು ಪ್ರಯೋಗ ಮಾಡಿ ವಿಫಲರಾಗಿದ್ದರು ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
ಚರ್ಚಿಸದೇ ಜಾರಿ ಸರಿಯಲ್ಲ-ಮಧು: ಬಿಜೆಪಿಯವರು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿರುವುದನ್ನೇ ತರುತ್ತಾರೆ, ಈ ಬಗ್ಗೆ ಚರ್ಚಿಸಿ ನಿರ್ಧರಿಸಬೇಕಾಗಿತ್ತು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದರು.