ಅಡಿಕೆ ಕ್ಯಾನ್ಸರ್‌ಕಾರಕವಲ್ಲ, ಕೇಂದ್ರಕ್ಕೆ ಮತ್ತೆ ಪತ್ರ ಬರೀತೇವೆ : ಸಚಿವ ಎಸ್ಸೆಸ್‌

| Published : Dec 17 2024, 11:10 AM IST

Arecanut

ಸಾರಾಂಶ

ವಿಶ್ವ ಆರೋಗ್ಯ ಸಂಸ್ಥೆಯು ಅಡಿಕೆಯನ್ನು ಕ್ಯಾನ್ಸರ್‌ಕಾರಕ ಎಂದು ಹೇಳಿಲ್ಲ. ಬದಲಿಗೆ ಅಡಿಕೆಯನ್ನು ಗುಟ್ಕಾಗಾಗಿ ಬಳಕೆ ಮಾಡಿದಾಗ ಮಾತ್ರ ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ ಎಂದು ಹೇಳಿದೆ.

ವಿಧಾನಸಭೆ : ವಿಶ್ವ ಆರೋಗ್ಯ ಸಂಸ್ಥೆಯು ಅಡಿಕೆಯನ್ನು ಕ್ಯಾನ್ಸರ್‌ಕಾರಕ ಎಂದು ಹೇಳಿಲ್ಲ. ಬದಲಿಗೆ ಅಡಿಕೆಯನ್ನು ಗುಟ್ಕಾಗಾಗಿ ಬಳಕೆ ಮಾಡಿದಾಗ ಮಾತ್ರ ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ ಎಂದು ಹೇಳಿದೆ. ಹೀಗಾಗಿ ಅಡಿಕೆ ಬೆಳೆಗಾರರಿಗೆ ಸಮಸ್ಯೆ ಮಾಡದಂತೆ ಕೇಂದ್ರಕ್ಕೆ ಮತ್ತೊಮ್ಮೆ ಪತ್ರ ಬರೆಯಲಾಗುವುದು ಎಂದು ತೋಟಗಾರಿಕೆ ಸಚಿವ ಎಸ್.ಎಸ್‌. ಮಲ್ಲಿಕಾರ್ಜುನ್‌ ಹೇಳಿದ್ದಾರೆ.

ಆರಗ ಜ್ಞಾನೇಂದ್ರ ಅವರ ಗಮನ ಸೆಳೆಯುವ ಸೂಚನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಏಳು ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆ ಬೆಳೆಯಲಾಗುತ್ತಿದೆ. ಮಲೆನಾಡಿಗೆ ಸೀಮಿತವಾಗಿದ್ದ ಅಡಿಕೆ ಬೆಳೆ ಇದೀಗ ಬೆಂಗಳೂರಿನವರೆಗೆ ಹಬ್ಬಿದೆ. ಗುಟ್ಕಾದಿಂದ ಕ್ಯಾನ್ಸರ್‌ ಉಂಟಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ ಇದನ್ನೇ ಕೇಂದ್ರ ಸರ್ಕಾರವೂ ಹೇಳಿದೆ.

ಹೀಗಾಗಿ ಅಡಿಕೆ ಆರೋಗ್ಯಕ್ಕೆ ಮಾರಕವಲ್ಲ ಎಂಬುದನ್ನು ಸಾಬೀತುಪಡಿಸಲು 38.8 ಲಕ್ಷ ರು. ನೀಡಿ ಎಂಎಸ್‌ ರಾಮಯ್ಯ ಕ್ಯಾನ್ಸರ್‌ ಸಂಶೋಧನಾ ಕೇಂದ್ರದಿಂದ ಸಂಶೋಧನೆ ನಡೆಸಲಾಗುತ್ತಿದೆ. ಜತೆಗೆ ಸುಪ್ರೀಂ ಕೋರ್ಟ್‌ನಲ್ಲಿ ಅಡಿಕೆ ಬೆಳೆಗಾರರಿಗೆ ವ್ಯತಿರಿಕ್ತ ತೀರ್ಪು ಬಾರದಂತೆ ಕೇಂದ್ರಕ್ಕೆ ಅಗತ್ಯ ಮಾಹಿತಿಯೊಂದಿಗೆ ಪತ್ರ ಬರೆದಿದ್ದೇವೆ. ಈಗ ಮತ್ತೊಮ್ಮೆ ಪತ್ರ ಬರೆಯುತ್ತೇವೆ. ಜತೆಗೆ ನೀವೂ ಸಹ ಕೇಂದ್ರದ ಮೇಲೆ ಒತ್ತಡ ಹೇರಿ ಎಂದು ಬಿಜೆಪಿ ಸದಸ್ಯರಿಗೆ ಮನವಿ ಮಾಡಿದರು.