ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ ಡಿ.4 ರಿಂದ 15ರವರೆಗೆ ನಡೆಯಲಿರುವ ಚಳಿಗಾಲದ ವಿಧಾನಮಂಡಳ ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧ ಕಟ್ಟಡವನ್ನು ಸಜ್ಜುಗೊಳಿಸಲಾಗುತ್ತಿದೆ. ಸುವರ್ಣಸೌಧ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿಯಲಾಗುತ್ತಿದೆ. ಆವರಣದಲ್ಲಿ ಸ್ವಚ್ಛತಾ ಕಾರ್ಯ ಭರದಿಂದ ಸಾಗಿವೆ. ಸುವರ್ಣವಿಧಾಸೌಧದೊಳಗೆ ವಿಧಾನಸಭೆ, ವಿಧಾನ ಪರಿಷತ್ ಸಭಾಂಗಣಗಳು ಸೇರಿದಂತೆ ಕಟ್ಟಡದೊಳಗೆ, ಹೊರಗೆ ಸುಣ್ಣ ಬಣ್ಣ ಬಳಿದು ಸೌಧದ ಅಂದಚೆಂದ ಹೆಚ್ಚಿಸಲಾಗುತ್ತಿದೆ. ಎಲ್ಲಾ ಸಿದ್ಧತೆಗಳು ನಡೆಯುತ್ತಿದ್ದು, ಸ್ವಚ್ಛತಾ ಕಾರ್ಯದಲ್ಲಿ ಸಿಬ್ಬಂದಿ ಮಗ್ನರಾಗಿದ್ದಾರೆ. ಸೌಧದ ನಾಲ್ಕು ದಿಕ್ಕುಗಳಲ್ಲೂಸಿಬ್ಬಂದಿ ನೀರಿನ ಪೈಪ್ ಮೂಲಕ ಸ್ವಚ್ಛಗೊ ಳಿಸುತ್ತಿದ್ದಾರೆ. ಅಲ್ಲದೇ ಪ್ರವೇಶ ದ್ವಾರಗಳ ಕಂಬಗಳು ಮತ್ತು ಒಳ ಛಾವಣಿಗೆ ಬಣ್ಣವನ್ನೂ ಬಳಿಯಾಗುತ್ತಿದೆ. ಸುವರ್ಣ ವಿಧಾನಸೌಧಕ್ಕೆ ತೆರಳುವ ರಸ್ತೆನಡುವೆ ವಿಭಜಕದಲ್ಲಿ ಅಲಂಕಾರಿಕ ಹೂವಿನ ಸಸಿಗಳನ್ನು ಮಹಿಳೆ ಯರು ನೆಡುತ್ತಿರುವುದು ಗಮನ ಸೆಳೆಯುತ್ತಿದೆ. ಜಿನಿಯಾ, ಸಲಿಯಾ, ಪಿಂಟುನಿಯಾ, ಅಪೇಲಿಯಾ ಸೇರಿ ಮತ್ತಿತರ ಹೂವುಗಳು ಸೌಧದ ಮೆರಗು ಹೆಚ್ಚಿಸಲಿವೆ. ಸುವರ್ಣಸೌಧ ಆವರಣದಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್‍ನಿಂದ ಸೌಧಕ್ಕೆ ಹೋಗಲು ಹೊಸದಾಗಿ ರಸ್ತೆಸಂಪರ್ಕ ಕಲ್ಪಿಸಲಾಗುತ್ತಿದೆ. ಅಲ್ಲದೇ ಸೌಧ ಸುತ್ತಲೂ ಬೆಳೆದಿದ್ದ ಹುಲ್ಲು, ಕಸ, ಮುಳ್ಳನ್ನು ತೆರವುಗೊಳಿಸಲಾಗುತ್ತಿದೆ.