ಸಾರಾಂಶ
ಕನ್ನಡಪ್ರಭ ವಾರ್ತೆ ಬಸವಾಪಟ್ಟಣ
ಇಲ್ಲಿಗೆ ಸಮೀಪದ ಬೆಳವಾಡಿ ಗ್ರಾಮದ ಕೃಷಿಪತ್ತಿನ ಸಹಕಾರಿ ಸಂಘವು ೨೦೨೪ನೇ-೨೫ನೇ ಸಾಲಿನಲ್ಲಿ ಒಟ್ಟು ಸುಮಾರು ೨ ಲಕ್ಷದ ೧೪ ಸಾವಿರ ರು.ಗಳ ನಿವ್ವಳ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ನಿಂಗೇಗೌಡ ತಿಳಿಸಿದರು.ಬೆಳವಾಡಿ ಕೃಷಿಪತ್ತಿನ ಸಹಕಾರಿ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಸರ್ವಸದಸ್ಯರನ್ನು ಉದ್ದೇಶಿಸಿ ಕೃಷಿಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಮಾತನಾಡಿ, ಸಂಘದಲ್ಲಿ ಒಟ್ಟು ೭೯೦ ಸದಸ್ಯರನ್ನು ಹೊಂದಿದ್ದು ಹಾಸನ ಜಿಲ್ಲಾ ಸಹಕಾರಿ ಬ್ಯಾಂಕ್‌ನಲ್ಲಿ ೩೯ ಲಕ್ಷದ ೯೩ ಸಾವಿರದ ರು. ಗಳ ಷೇರು ಬಂಡವಾಳವನ್ನು ಹೊಂದಿದೆ. ಈ ಸಹಕಾರಿ ಸಂಘ ಸುಮಾರು ೧೦ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದೆ. ೩೬ ಸ್ವಸಹಾಯ ಸಂಘಗಳಿದ್ದು ೨೪-೨೫ನೇ ಸಾಲಿನಲ್ಲಿ ೧೪ ಸ್ವಸಹಾಯ ಸಂಘಗಳಿಗೆ ೭೮ ಲಕ್ಷದ ೫೦ ಸಾವಿರ ಸಾಲ ನೀಡಲಾಗಿದೆ. ೪೯೫ ಜನ ಸದಸ್ಯರಿಗೆ ಕೃಷಿಗಾಗಿ ಸದಸ್ಯರಿಗೆ ೩ ಕೋಟಿ ೨ ಲಕ್ಷ ರು. ಗಳನ್ನು ಕೃಷಿ ಸಾಲವಾಗಿ ನೀಡಲಾಗಿದೆ. ಸಂಘದಲ್ಲಿ ಸ್ಥಾಪನೆಯಾಗಿರುವ ರೈತ ಕ್ಷೇಮನಿಧಿಯನ್ನು ಸ್ಥಾಪಿಸಿ ೨೦೧೫-೧೬ರಿಂದ ೨೦೨೫ರವರೆಗೆ ಸುಮಾರು ೮೫ ಮರಣ ಹೊಂದಿದ ಸದಸ್ಯ ರೈತರ ಕುಟುಂಬಸ್ಥರಿಗೆ ಆರ್ಥಿಕ ಸಹಾಯ ನೀಡಲಾಗಿದೆ.
೨೦೨೪-೨೫ರಲ್ಲಿ ಒಟ್ಟು ೧೫ ಮೃತಪಟ್ಟ ಸಂಘದ ರೈತರ ಕುಟುಂಬಗಳಿಗೆ ತಲಾ ೫ ಸಾವಿರ ರು. ಗಳಂತೆ ೭೫ ಸಾವಿರ ನೀಡಲಾಗಿದೆ. ಅಲ್ಲದೆ ೨೦೨೫-೨೬ನೇ ಸಾಲಿನಲ್ಲಿ ಇದಕ್ಕಾಗಿ ೧ ಲಕ್ಷಕ್ಕೂ ಅಧಿಕ ಹಣವನ್ನು ಮೀಸಲಿಡಲಾಗಿದೆ. ೨೦೨೫ನೇ ಮಾರ್ಚಿ ೩೧ಕ್ಕೆ ನಮ್ಮ ಸಂಘ ೨ ಲಕ್ಷದ ೧೪ ಸಾವಿರ ರು. ಗಳ ನಿವ್ವಳ ಲಾಭದಲ್ಲಿದೆ. ಎಲ್ಲರೂ ಇದೇ ರೀತಿ ಸಹಕಾರ ಮತ್ತು ಸಲಹೆಗಳನ್ನು ನೀಡಿ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಿ ರೈತ ಸದಸ್ಯರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಎಲ್ಲರೂ ಸಹಕರಿಸಲು ತಿಳಿಸಿದರು.ಇದೇ ವೇಳೆ ಅರಕಲಗೂಡು ರೈತ ಸಂಘದ ಅಧ್ಯಕ್ಷ ಬೆಳವಾಡಿ ಕೃಷಿಪತ್ತಿನ ಸಂಘದ ಸದಸ್ಯರು ಆದ ಸೀಬಳ್ಳಿ ಯೋಗಣ್ಣ ಮಾತನಾಡಿ, ರೈತರ ಸೇವೆಗಾಗಿ ಪದವಿ ಮುಖ್ಯವಲ್ಲ ರೈತ ಹಿತ ಚಿಂತನೆ ಮುಖ್ಯ ಎಲ್ಲರೂ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳಲು ಮುಂದಾಗುವಂತೆ ತಿಳಿಸಿದರು.
ಉಪಾಧ್ಯಕ್ಷರಾದ ಶ್ರೀಚನ್ನಯ್ಯ ಉಪಸ್ಥಿತರಿದ್ದರು. ಸಂಘದ ಕಾರ್ಯನಿರ್ವಹಣಾಧಿಕಾರಿ ದಯಾಪರಂಮೂರ್ತಿ ವರದಿ ಮಂಡನೆ ಮಾಡಿದರು. ಅಶೋಕ ಸ್ವಾಗತಿಸಿದರು ಸಂಘದ ನಿರ್ದೆಶಕರು, ಸಂಘದ ಸದಸ್ಯರು ಹಾಜರಿದ್ದರು. ಬ್ಯಾಂಕ್‌ಗಳಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಬ್ಯಾಂಕ್ ಸಹಾಯಕಿ ಮಂಜುಳಾ ರೈತರಿಗೆ ತಿಳಿಸಿದರು.