ಬೇಲೆಕೇರಿ ಪ್ರಕರಣ ಸಮಗ್ರ ತನಿಖೆ ನಡೆಸಿ: ನವೀನಕುಮಾರ್‌

| Published : Oct 27 2024, 02:06 AM IST

ಬೇಲೆಕೇರಿ ಪ್ರಕರಣ ಸಮಗ್ರ ತನಿಖೆ ನಡೆಸಿ: ನವೀನಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆಯಲ್ಲಿ ಶನಿವಾರ ಚಿತ್ರದುರ್ಗದ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಅಧ್ಯಕ್ಷ ಎಸ್.ಟಿ. ನವೀನಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪರಿಸರದ ಮೇಲೆ ಯಾರೇ ಅತ್ಯಾಚಾರ ಮಾಡಿದರೂ ಅಂಥವರಿಗೆ ಕಾನೂನು ತಕ್ಕ ಶಿಕ್ಷೆ ನೀಡುತ್ತದೆಂಬುದಕ್ಕೆ ಕಾರವಾರದ ಶಾಸಕ ಸತೀಶ ಶೈಲ್ ಬಂಧನವೇ ಸಾಕ್ಷಿಯಾಗಿದೆ. ಅಕ್ರಮ ಗಣಿಗಾರಿಕೆ, ಕಬ್ಬಿಣದ ಅದಿರು ವಿದೇಶಕ್ಕೆ ರಫ್ತು, ಬೇಲೆಕೇರಿ ಅದಿರು ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಚಿತ್ರದುರ್ಗದ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಅಧ್ಯಕ್ಷ ಎಸ್‌.ಟಿ. ನವೀನಕುಮಾರ ಸರ್ಕಾರಕ್ಕೆ ಒತ್ತಾಯಿಸಿದರು.

ಬೇಲಿಕೇರಿ ಅದಿರು ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಬಳ್ಳಾರಿ, ಚಿತ್ರದುರ್ಗ ಜಿಲ್ಲೆಯ ಅರಣ್ಯ ಪ್ರದೇಶಗಳಿಂದ ಅಕ್ರಮವಾಗಿ ಕಬ್ಬಿಣದ ಅದಿರು ವಿದೇಶಗಳಿಗೆ ರಫ್ತಾಗುತ್ತಿತ್ತು. 2009ರ ಮಾರ್ಚ್‌ 20ರಂದು ಅರಣ್ಯ ಇಲಾಖೆಯ ₹350 ಕೋಟಿ ಮೌಲ್ಯದ 8.5 ಲಕ್ಷ ಮೆಟ್ರಿಕ್‌ ಟನ್‌ ಅದಿರು ಜಪ್ತಿ ಮಾಡಿತ್ತು. 39,700 ಮೆಟ್ರಿಕ್ ಟನ್‌ ಚೀನಾ ದೇಶಕ್ಕೆ ರಫ್ತಾಗಿತ್ತು ಎಂದು ಅವರು ದೂರಿದರು.

ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗಡೆ ತಂಡ ಅಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನ್ಯಾಯಾಲಯದ ಆದೇಶ ನಾವು ಸ್ವಾಗತಿಸುತ್ತೇವೆ. ಬೇಲಿಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಅನೇಕ ಭ್ರಷ್ಟ ರಾಜಕಾರಣಿಗಳೂ ಇದ್ದಾರೆ. ನ್ಯಾಯಾಂಗವು ಅದನ್ನೆಲ್ಲಾ ಪರಿಶೀಲಿಸಬೇಕು. ಅಕ್ರಮ ಗಣಿಗಾರಿಕೆಯು ಅರಣ್ಯ ನಾಶ ಮಾಡುತ್ತಿದೆ. ಇದರಿಂದ ವನ್ಯಜೀವಿಗಳಿಗೆ ಸಂಚಕಾರ ಬಂದಿದೆ. ವನ್ಯಜೀವಿಗಳು ಹಾಗೂ ಮಾನವ ಸಂಘರ್ಷ ನಿತ್ಯ ನಡೆಯುತ್ತಿರುವುದೂ ಪರಿಸರ ನಾಶವೇ ಕಾರಣ ಎಂದು ಅವರು ಆರೋಪಿಸಿದರು.

* ಹಸಿರು ಪಟಾಕಿಗಳ ಮಾರಾಟಕ್ಕೆ ಡಿಸಿ ಆದೇಶಿಸಲಿ

- ಚಿತ್ರದುರ್ಗದ ಪರಿಸರ-ವನ್ಯಜೀವಿ ಸಂರಕ್ಷಣಾ ವೇದಿಕೆ ಮುಖಂಡರ ಆಗ್ರಹ

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾಲಿನ್ಯಕಾರಕ, ಅಪಾಯಕಾರಿ ಪಟಾಕಿಗಳ ಬದಲಿಗೆ ಹಸಿರು ಪಟಾಕಿಗಳ ಮಾರಾಟಕ್ಕೆ ಜಿಲ್ಲಾಧಿಕಾರಿ ಆದೇಶ ಹೊರಡಿಸಬೇಕು ಎಂದು ಎಸ್‌.ಟಿ.ನವೀನಕುಮಾರ ಒತ್ತಾಯಿಸಿದರು.

ಪಟಾಕಿಗಳಿಂದ ಪರಿಸರ ಮಾಲಿನ್ಯವಾಗುತ್ತದೆ ಎಂಬ ಕಾರಣಕ್ಕೆ ಅನೇಕ ರಾಜ್ಯಗಳಲ್ಲಿ ಪಟಾಕಿ ಮೇಲೆ ನಿಷೇಧ ಹೇರಲಾಗಿದೆ. ಜಿಲ್ಲಾದ್ಯಂತ ಪಟಾಕಿ ಮಾರಾಟಗಾರರಿಗೆ ಸೂಕ್ತವಾಗಿ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಜಿಲ್ಲಾಡಳಿತ ಆದೇಶಿಸಬೇಕು. ಹಳೆಯ ಪಟಾಕಿಗಳನ್ನು ದಾಸ್ತಾನು ಮಾಡಿಕೊಂಡು, ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ, ಮಾರಾಟ ಮಾಡಲಾಗುತ್ತಿದೆ. ಹಸಿರು ಪಟಾಕಿ ಹೊರತುಪಡಿಸಿ ಬೇರಾವುದೇ ಪಟಾಕಿಗಳನ್ನು ಮಾರಾಟ ಮಾಡಿದರೆ, ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ನಗರಸಭೆ, ಪಾಲಿಕೆ, ಅಗ್ನಿಶಾಮಕ ದಳ, ಮಾಲಿನ್ಯ ನಿಯಂತ್ರಣ ಮಂಡಳಿ, ಆರೋಗ್ಯ ಇಲಾಖೆಗಳ ಅಧಿಕಾರಿಗಳ ಜೊತೆಗೆ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆಯ ಪದಾಧಿಕಾರಿಗಳ ಸಭೆ ನಡೆಸುವಂತೆ ಅವರು ಮನವಿ ಮಾಡಿದರು.

ವೇದಿಕೆ ಪ್ರಧಾನ ಕಾರ್ಯದರ್ಶಿ ಮಾಲತೇಶ ಅರಸ್ ಮಾತನಾಡಿ, ಸಾಮಾನ್ಯ ಪಟಾಕಿಗಿಂತ ಹಸಿರು ಪಟಾಕಿಗಳು ಭಿನ್ನ. ಹಸಿರು ಪಟಾಕಿಗಳನ್ನು ನ್ಯಾಷನಲ್‌ ಎನ್‌ವಿರಾನ್ಮೆಂಟಲ್ ಎಂಜಿನಿಯರಿಂಗ್‌ ರೀಸರ್ಚ್ ಇನ್‌ಸ್ಟಿಟ್ಯೂಟ್ ಆವಿಷ್ಕರಿಸಿದೆ. ಸಾಮಾನ್ಯ ಪಟಾಕಿಯಂತೆ ಇವು ಶಬ್ಧ ಮಾಡುತ್ತವೆ. ಆದರೆ, ಮಾಲಿನ್ಯ ಕಡಿಮೆ. ಅಲ್ಲದೇ, ಅಲ್ಯುಮಿನಿಯಂ, ಬೇರಿಯಂ, ಪೊಟ್ಯಾಷಿಯಂ ನೈಟ್ರೇಟ್‌, ಕಾರ್ಬನ್‌ಗಳನ್ನು ಹಸಿರು ಪಟಾಕಿಯಲ್ಲಿ ಬಳಸುವುದಿಲ್ಲ. ಹಸಿರು ಪಟಾಕಿಯಿಂದ ಬರುವ ಶಬ್ಧ ಸಹ ಕಡಿಮೆ. ಅಪಾಯಗಳು ನಿಯಂತ್ರಣದಲ್ಲಿರುತ್ತವೆ ಎಂದ ಅವರು, ರಾಜ್ಯಾದ್ಯಂತ ವೇದಿಕೆ ನೇತೃತ್ವದಲ್ಲಿ ಪಟಾಕಿ ಕುರಿತು ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ಹಿನ್ನೆಲೆ ಪರಿಸರಕ್ಕೆ ಹಾನಿಯಾಗದಂತೆ ಎಲ್ಲರೂ ಜಾಗೃತರಾಗಬೇಕು ಎಂದು ಮನವಿ ಮಾಡಿದರು.

ವೇದಿಕೆಯ ಟಿ.ರುದ್ರಮುನಿ, ಎನ್.ತಿಪ್ಪೇಸ್ವಾಮಿ, ಅಜಯಕುಮಾರ, ಎನ್.ಕೆ.ಕೊಟ್ರೇಶ ಇತರರು ಇದ್ದರು.