ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯವಿದ್ಯುತ್ ತಂತಿಗಳ ಮೇಲೆ ಹಾದುಹೋಗಿರುವ ಮರದ ರೆಂಬೆ- ಕೊಂಬೆಗಳನ್ನು ಅವೈಜ್ಞಾನಿಕವಾಗಿ ತೆರವುಗೊಳಿಸುವುದು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ಮರದ ರೆಂಬೆ- ಕೊಂಬೆಗಳನ್ನು ಕಡಿಯುವುದೆಂದರೆ ಇಡೀ ಮರವನ್ನೇ ಬೋಳಾಗಿ ನಿಲ್ಲಿಸುವುದು ಎಂದರ್ಥವೇ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ನಗರದ ನೂರಡಿ ರಸ್ತೆಯಲ್ಲಿ ಹತ್ತಾರು ವರ್ಷಗಳಿಂದ ಬೆಳೆದು ನಿಂತಿರುವ ಮರಗಳ ರೆಂಬೆ- ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಬೀಳುತ್ತವೆಂಬ ಕಾರಣವನ್ನು ಮುಂದಿಟ್ಟುಕೊಂಡು ಮರದ ಎಲ್ಲಾ ರೆಂಬೆ- ಕೊಂಬೆಗಳನ್ನು ಕಡಿದುಹಾಕಲಾಗಿದೆ. ಒಂದು ಎಲೆಯೂ ಇಲ್ಲದಂತೆ ಬೋಳಾಗಿಸಿದ್ದಾರೆ. ಇದು ರೆಂಬೆ- ಕೊಂಬೆಗಳನ್ನು ತೆರವುಗೊಳಿಸುವ ವಿಧಾನವೇ? ಪರಿಸರ ಹಾಳು ಮಾಡುವ ಇಂತಹ ಅವೈಜ್ಞಾನಿಕ ಕ್ರಮದ ವಿರುದ್ಧ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ವೈಜ್ಞಾನಿಕ ತೆರವಿನ ಆಲೋಚನೆಗಳಿಲ್ಲ:
ಮಳೆಗಾಲದಲ್ಲಿ ಗಾಳಿ- ಮಳೆಗೆ ಮರದ ರೆಂಬೆ- ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ಅನಾಹುತ ಸೃಷ್ಟಿಸುತ್ತವೆಂಬ ಕಾರಣಕ್ಕೆ ಮುಂಜಾಗ್ರತೆಯಾಗಿ ಅವುಗಳನ್ನು ಕ್ರಮಬದ್ಧ ರೀತಿಯಲ್ಲಿ ತೆರವುಗೊಳಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮರಗಳನ್ನು ಬೆಳೆಸುವ ಮನೋಭಾವ ಇಲ್ಲದೇ ಹೋದರೂ ಇರುವ ಮರಗಳನ್ನು ಉಳಿಸಿಕೊಳ್ಳಬೇಕೆಂಬ ಆಲೋಚನೆಗಳೂ ಇಲ್ಲದಿರುವಂತೆ ಕಂಡುಬರುತ್ತಿದೆ.ಟೆಂಡರ್‌ದಾರನಿಂದ ಮನಸೋಇಚ್ಛೆ ತೆರವು:
ರೆಂಬೆ- ಕೊಂಬೆಗಳನ್ನು ತೆರವುಗೊಳಿಸುವ ಟೆಂಡರ್ ಪಡೆದ ಗುತ್ತಿಗೆದಾರ ತನಗಿಷ್ಟ ಬಂದಂತೆ ರೆಂಬೆ- ಕೊಂಬೆಗಳನ್ನು ತೆರವುಗೊಳಿಸುತ್ತಿದ್ದರೂ ಅದನ್ನು ಯಾರೂ ಪ್ರಶ್ನಿಸುತ್ತಲೇ ಇಲ್ಲ. ಕೆಲವು ಅಂಗಡಿಗಳ ಮಾಲೀಕರು ತಮ್ಮ ನಾಮಫಲಕಗಳಿಗೆ ಅಡ್ಡಲಾಗಿ ಬೆಳೆದಿರುವ ಮರದ ಕೊಂಬೆಗಳನ್ನು ಕಡಿಯುವಂತೆ ಸೂಚಿಸುತ್ತಿರುವುದರಿಂದ ಅವರಿಂದ ಸ್ವಲ್ಪ ಹಣ ಪಡೆದು ವಿನಾಕಾರಣ ಅಪಾಯಕಾರಿಯಲ್ಲದ ರೆಂಬೆ- ಕೊಂಬೆಗಳನ್ನು ಕತ್ತರಿಸಿ ಬಿಸಾಡುತ್ತಿದ್ದಾರೆ. ನೂರಡಿ ರಸ್ತೆಯ ಬಹುತೇಕ ಮರಗಳು ಬೋಳಾಗಿ ನಿಂತಿರುವುದರಿಂದ ನೆರಳಿಲ್ಲದೆ ಬಿಸಿಲ ಕಾವು ಹೆಚ್ಚಿದೆ.ಮಳೆಯೂ ಇಲ್ಲ, ಗಾಳಿಯೂ ಇಲ್ಲ..!:
ಪ್ರಸ್ತುತ ಸನ್ನಿವೇಶದಲ್ಲಿ ಮಳೆಯೂ ಇಲ್ಲ, ಗಾಳಿಯಂತೂ ಮೊದಲೇ ಇಲ್ಲ. ಮಳೆಗಾಲ ಮುಗಿಯುತ್ತಾ ಬರುತ್ತಿದೆ. ಸಾಮಾನ್ಯವಾಗಿ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಮಳೆ- ಗಾಳಿಯ ಅಬ್ಬರ ಹೆಚ್ಚಾಗಿರುತ್ತದೆ. ಮಾರ್ಚ್ ತಿಂಗಳಲ್ಲಿ ಮುಂಜಾಗ್ರತೆಯಾಗಿ ರಸ್ತೆಗೆ ಅಡ್ಡಲಾಗಿ, ದಪ್ಪವಾಗಿ ಬೆಳೆದುನಿಂತಿರುವ, ವಿದ್ಯುತ್ ತಂತಿಗಳ ಮೇಲೆ ಹಾದುಹೋಗಿರುವ ರೆಂಬೆ- ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗುವುದು ಸಾಮಾನ್ಯ ಬೆಳವಣಿಗೆಯಾಗಿದೆ. ಆದರೆ, ಮಳೆಗಾಲ ಮುಗಿಯುವ ಕಾಲದಲ್ಲಿ, ಬಿರುಸಾದ ಗಾಳಿ ಇಲ್ಲದ ಈ ಸಮಯದಲ್ಲಿ ಮರಗಳನ್ನು ಕಡಿಯುವ ಅಗತ್ಯವೇನಿತ್ತು. ಇದರ ಹಿಂದೆ ಅರಣ್ಯ ಇಲಾಖೆ ಅಧಿಕಾರಿಗಳ ಲಾಬಿ ಇದೆಯೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.ನೂರಾರು ಪಕ್ಷಿಗಳು ನಿರಾಶ್ರಿತ:
ನೂರಡಿ ರಸ್ತೆಯ ಎರಡೂ ಬದಿಯಲ್ಲಿ ಬೆಳೆದು ನಿಂತಿರುವ ಮರಗಳು ನೂರಾರು ಪಕ್ಷಿಗಳಿಗೆ ಆಶ್ರಯ ತಾಣವಾಗಿದ್ದವು. ಬೇಸಿಗೆಯಲ್ಲಿ ಜನರಿಗೆ ನೆರಳನ್ನು ನೀಡುತ್ತಿದ್ದವು. ಅಂತಹ ಮರಗಳನ್ನು ಮನಸೋಇಚ್ಛೆ ಕಡಿದುಹಾಕಿರುವುದರಿಂದ ನೂರಾರು ಪಕ್ಷಿಗಳು ನಿರಾಶ್ರಿತವಾಗುವಂತಾಗಿವೆ. ಆಶ್ರಯಕ್ಕಾಗಿ ಅವು ಬೇರೆಡೆ ವಲಸೆ ಹೋಗುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.ಒಂದು ಮರವನ್ನು ನೆಟ್ಟು ಬೆಳೆಸಬೇಕೆಂದರೆ ಕನಿಷ್ಠ ಎರಡು- ಮೂರು ವರ್ಷವಾದರೂ ಬೇಕು. ಪ್ರಕೃತಿದತ್ತವಾಗಿ ಬೆಳೆದುನಿಂತಿರುವ ಮರಗಳನ್ನು ಮರ ಕತ್ತರಿಸುವ ಯಂತ್ರದಿಂದ ನಿಮಿಷಗಳಲ್ಲಿ ಕಡಿದುರುಳಿಸಿದ್ದಾರೆ. ಇನ್ನು ಆ ಮರಗಳು ಚೇತರಿಕೆ ಕಂಡು ನೆರಳು ನೀಡಬೇಕಾದರೆ ವರ್ಷಗಳೇ ಬೇಕಾಗುತ್ತದೆ. ಅಲ್ಲಿಯವರೆಗೆ ಮರಗಳಲ್ಲಿ ಆಶ್ರಯ ಪಡೆದಿದ್ದ ಪಕ್ಷಿಗಳು ಹಾಗೂ ನೆರಳನ್ನು ಆಶ್ರಯಿಸಿದ್ದ ಜನರ ಗತಿ ಏನು ಎಂಬ ಯೋಚನೆ ಅರಣ್ಯಾಧಿಕಾರಿಗಳಿಗೆ ಇಲ್ಲದಂತಾಗಿದೆ.
ಪರಿಸರ ಉಳಿವಿನ ಗಂಧ- ಗಾಳಿಯೂ ಗೊತ್ತಿಲ್ಲದ ಅಧಿಕಾರಿಗಳು:ಮರಗಳನ್ನು ಕಡಿಯುವುದಕ್ಕೆ ಟೆಂಡರ್ ಕರೆದು ಗುತ್ತಿಗೆ ನೀಡಿದರೆ ತಮ್ಮ ಕೆಲಸ ಮುಗಿಯಿತು ಎಂದೇ ಅಧಿಕಾರಿಗಳು ಪರಿಭಾವಿಸಿದ್ದಾರೆ. ಗುತ್ತಿಗೆ ಪಡೆದ ಟೆಂಡರ್‌ದಾರ ಯಾವ ರೀತಿ ಮರಗಳನ್ನು ಕಡಿಯುತ್ತಿದ್ದಾನೆ. ರೆಂಬೆ- ಕೊಂಬೆಗಳನ್ನು ತೆರವುಗೊಳಿಸುವ ವೇಳೆ ಅನುಸರಿಸಬೇಕಾದ ಕ್ರಮಗಳೇನು, ಪಕ್ಷಿಗಳಿಗೆ ಮತ್ತು ನೆರಳನ್ನು ನೀಡುವ ಮರಗಳನ್ನು ಇದ್ದ ಸ್ಥಿತಿಯಲ್ಲೇ ಉಳಿಸಿಕೊಂಡು ಅಪಾಯಕ್ಕೆ ಕಾರಣವಾಗುವ ರೆಂಬೆ- ಕೊಂಬೆಗಳನ್ನು ಗುರುತು ಮಾಡಿ ಅವುಗಳನ್ನಷ್ಟೇ ಕಡಿಯುವಂತೆ ನಿರ್ದೇಶನ ಮಾಡಬೇಕಾದ ಅರಣ್ಯ ಇಲಾಖೆ ಅಧಿಕಾರಿಗಳು, ಹವಾನಿಯಂತ್ರಿತ ಕೊಠಡಿಯಲ್ಲಿ ತಣ್ಣಗೆ ಕುಳಿತಿದ್ದಾರೆ. ಈ ಅಧಿಕಾರಿಗಳಿಗೆ ಪರಿಸರ ಪ್ರಜ್ಞೆ, ಪರಿಸರ ಉಳಿವಿನ ಗಂಧ- ಗಾಳಿಯೇ ಗೊತ್ತಿಲ್ಲದಿರುವುದು ದುರ್ದೈವದ ಸಂಗತಿ.
ಅಧಿಕಾರಿಗಳಿಗೂ ತರಬೇತಿ ಅವಶ್ಯ:ಅಪಾಯಕಾರಿಯಾಗಿರುವ ಮರದ ರೆಂಬೆ- ಕೊಂಬೆಗಳನ್ನು ತೆರವುಗೊಳಿಸುವ ಕುರಿತಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೂ ತರಬೇತಿ ನೀಡುವ ಅಗತ್ಯವಿದೆ. ಮಳೆಗಾಲ ಮುಗಿಯುತ್ತಿದೆ, ಚಳಿಗಾಲ ಫೆಬ್ರವರಿಯವರೆಗೆ ಇರುತ್ತದೆ. ಇಂದು ಮಾಡಿರುವ ಮರಗಳ ಹನನದಿಂದ ತೀವ್ರತೆ ಮಾರ್ಚ್‌ನಿಂದ ಕಾಣುತ್ತದೆ. ರಣಬಿಸಿಲ ಹೊಡೆತದಿಂದ ತತ್ತರಿಸುವಾಗ ಈ ಮರಗಳ ಮೌಲ್ಯ, ಮಹತ್ವ ಅರ್ಥವಾಗುತ್ತದೆ. ಮರಗಳನ್ನು ಮನಸೋಇಚ್ಛೆ ಹನನ ಮಾಡುವಂತಹ ಇಂತಹ ಕ್ರೌರ್ಯಕ್ಕೆ ಕೊನೆ ಎಂದು ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ.ಎಫ್‌ಐಆರ್ ದಾಖಲು
‘ನೂರಡಿ ರಸ್ತೆಯಲ್ಲಿರುವ ಮರಗಳನ್ನು ಮನಸೋಇಚ್ಛೆ ಕಡಿದುಹಾಕಿರುವ ಟೆಂಡರ್‌ದಾರನ ವಿರುದ್ಧ ಎಫ್‌ಐಆರ್ ದಾಖಲಿಸುತ್ತೇವೆ. ನಮ್ಮ ಇಲಾಖೆ ಸಿಬ್ಬಂದಿ ೯ ಗಂಟೆಗೆ ಬರುವುದಾಗಿ ಹೇಳಿದ್ದೆವು. ಟೆಂಡರ್‌ದಾರ ಕೆಲಸದ ಆಳುಗಳೊಂದಿಗೆ ೭ ಗಂಟೆಗೇ ಬಂದು ಮರಗಳನ್ನು ಕಡಿದುಹಾಕಿದ್ದಾನೆ. ನಾವು ಗುರುತು ಮಾಡುವ ಮುನ್ನವೇ ಮರದ ರೆಂಬೆ- ಕೊಂಬೆಗಳನ್ನೆಲ್ಲಾ ಕಡಿದಿರುವುದರಿಂದ ಆತನ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ.’- ಶೈಲಜಾ, ಆರ್‌ಎಫ್‌ಒ, ಮಂಡ್ಯ
ಪರಿಸರ ಪ್ರಜ್ಞೆಯೇ ಇಲ್ಲ‘ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪರಿಸರ ಪ್ರಜ್ಞೆಯೇ ಇಲ್ಲ. ಮರದ ರೆಂಬೆಗಳನ್ನು ಕಡಿಯುವುದಕ್ಕೆ ಟೆಂಡರ್ ಕೊಟ್ಟು ಎಸಿ ರೂಮ್‌ನಲ್ಲಿ ಕುಳಿತಿರುತ್ತಾರೆ. ಪಕ್ಷಿಗಳಿಗೆ, ಜನರಿಗೆ ಏನಾದರೆ ಅವರಿಗೇನು? ಮರಗಳನ್ನು ಬೆಳೆಸಿ ಅರಣ್ಯಾಭಿವೃದ್ಧಿ ಮಾಡುವ ಮನೋಭಾವವಂತೂ ಇಲ್ಲ. ಬೆಳೆದು ನಿಂತಿರುವ ಮರಗಳನ್ನು ಉಳಿಸಿಕೊಳ್ಳುವ ಕಾಳಜಿಯೂ ಇಲ್ಲವೆಂದರೆ ದುರಂತದ ಸಂಗತಿ. ಬೇಸಿಗೆ ಎದುರಾದಾಗಷ್ಟೇ ಮರಗಳ ಮಹತ್ವ ಅರಿವಾಗಲು ಸಾಧ್ಯ.’
- ಸಾತನೂರು ವೇಣುಗೋಪಾಲ್, ಅಧ್ಯಕ್ಷರು, ಕಬ್ಬು ಬೆಳೆಗಾರರ ಒಕ್ಕೂಟ