ಕತ್ತೆಕಿರುಬಗಳ ಸಂರಕ್ಷಣೆಗೆ ಬೆಳಗಾವಿ ಪ್ರಥಮ

| Published : Feb 15 2025, 12:32 AM IST

ಸಾರಾಂಶ

ಅಳಿವಿನಂಚಿನಲ್ಲಿರುವ ಕತ್ತೆಕಿರುಬಗಳ ರಕ್ಷಣೆಗೆ ಮುಂದಾಗಿರುವ ಅರಣ್ಯ ಇಲಾಖೆ ಗಡಿ ಜಿಲ್ಲೆ ಬೆಳಗಾವಿಯನ್ನು ರಾಜ್ಯದಲ್ಲೇ ಮೊಟ್ಟ ಮೊದಲ ಕತ್ತೆಕಿರುಬ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಲು ಸಿದ್ಧತೆ ನಡೆದಿದೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ಅಳಿವಿನಂಚಿನಲ್ಲಿರುವ ಕತ್ತೆಕಿರುಬಗಳ ರಕ್ಷಣೆಗೆ ಮುಂದಾಗಿರುವ ಅರಣ್ಯ ಇಲಾಖೆ ಗಡಿ ಜಿಲ್ಲೆ ಬೆಳಗಾವಿಯನ್ನು ರಾಜ್ಯದಲ್ಲೇ ಮೊಟ್ಟ ಮೊದಲ ಕತ್ತೆಕಿರುಬ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಲು ಸಿದ್ಧತೆ ನಡೆದಿದೆ.

ದೇಶದ ಕೆಲ ರಾಜ್ಯಗಳಲ್ಲಿ ಮಾತ್ರ ಕತ್ತೆಕಿರುಬ ಸಂರಕ್ಷಿತ ಅಭಯಾರಣ್ಯಗಳಿವೆ. ಇಲ್ಲಿ ಕತ್ತೆಕಿರುಬುಗಳ ಜೊತೆಗೆ ತೋಳ, ಕೃಷ್ಣಮೃಗಗಳನ್ನು ಸಹ ಸಂರಕ್ಷಿಸಲಾಗುತ್ತಿದೆ. ರಾಜ್ಯದ ಮೊದಲ ಕತ್ತೆಕಿರುಬ ಸಂರಕ್ಷಿತ ಪ್ರದೇಶವೆಂಬ ಹೆಗ್ಗಳಿಕೆಗೆ ಬೆಳಗಾವಿ ಪಾತ್ರವಾಗಲಿದೆ. ಅಂದಹಾಗೆ, ರಾಜ್ಯದಲ್ಲೇ ಅತೀ ಹೆಚ್ಚು ಕತ್ತಿಕುರುಬಗಳು ಇರುವುದು ಬೆಳಗಾವಿ ಜಿಲ್ಲೆಯಲ್ಲೇ. ಬೆಳಗಾವಿ, ಗೋಕಾಕ ತಾಲೂಕಿನ ಗಡಿಯಲ್ಲಿನ ಸುಮಾರು 120 ಚದರ ಕಿ.ಮೀ. ಮೀಸಲು ಅರಣ್ಯವನ್ನು ಕತ್ತೆಕಿರುಬ ಸಂರಕ್ಷಿತ ಪ್ರದೇಶವನ್ನಾಗಿಸುವಂತೆ ಅರಣ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಮೂಲಕ ಅಳಿವಿನಂಚಿನಲ್ಲಿರುವ ಕತ್ತೆಕಿರುಬಗಳನ್ನು ಸಂರಕ್ಷಿಸಲು ಅರಣ್ಯ ಇಲಾಖೆ ಮುಂದಾಗಿದೆ.

ಬೆಳಗಾವಿ, ಗೋಕಾಕ, ಸವದತ್ತಿ, ಹುಕ್ಕೇರಿ ಮತ್ತು ಬೈಲಹೊಂಗಲ ಪ್ರದೇಶದಲ್ಲಿ ಎಲೆ ಉದುರುವ ಅರಣ್ಯ ಪ್ರದೇಶಗಳು ಕತ್ತೆಕಿರುಬಗಳ ಆಶ್ರಯ ತಾಣಗಳಾಗಿವೆ. ಅಪರೂಪಕ್ಕೆ ಎನ್ನುವಂತೆ ಅಲ್ಲಲ್ಲಿ ಕತ್ತೆಕಿರುಬುಗಳು ಕಾಣಿಸುತ್ತಿವೆ. ಇತ್ತೀಚೆಗಷ್ಟೇ ಬೈಲಹೊಂಗಲದ ಹೊರವಲಯದಲ್ಲಿ ಕೃಷಿ ಜಮೀನಿನಲ್ಲಿ ಕಾಣಿಸಿಕೊಂಡಿದ್ದ ಕತ್ತೆಕಿರುಬ ಎರಡು ಮರಿಗಳಿಗೆ ಜನ್ಮನೀಡಿತ್ತು. ಬಳಿಕ ಆ ಮರಿಗಳನ್ನು ಸುರಕ್ಷಿತವಾಗಿ ಸಂರಕ್ಷಣೆ ಮಾಡಿ, ಭೂತರಾಮನಹಟ್ಟಿ ರಾಣಿ ಚನ್ನಮ್ಮ ಪ್ರಾಣಿ ಸಂಗ್ರಹಾಲಯಕ್ಕೆ ರವಾನಿಸಲಾಯಿತು.

ಕತ್ತೆಕಿರುಬಗಳು ಅರಣ್ಯಪ್ರದೇಶ ಮತ್ತು ಹುಲ್ಲುಗಾವಲುಗಳಲ್ಲಿ ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದರೆ, ಇವುಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆದಿಲ್ಲ. ಗದಗ, ಬಾಗಲಕೋಟೆ, ಧಾರವಾಡ, ಬೀದರ,ಕೊಪ್ಪಳ, ಗದಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಕತ್ತೆಕಿರುಬಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕತ್ತೆ ಕಿರುಬಗಳ ಸಂತತಿ ಅಳಿವಿನಂಚಿನಲ್ಲಿದೆ. ಹಾಗಾಗಿ ಇವುಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮುಜುವರ್ತಿವಹಿಸಿ, ಬೆಳಗಾವಿಯನ್ನು ಕತ್ತೆಕಿರುಬಗಳ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡುವ ಸಂಬಂಧ ಪ್ರಸ್ತಾವನೆಯನ್ನು ಸಲ್ಲಿಸಿದೆ.

ಜಿಲ್ಲೆಯಲ್ಲಿನ ಕತ್ತೆಕಿರುಬಗಳ ಸಂಖ್ಯೆಯನ್ನು ಪತ್ತೆ ಹಚ್ಚುವ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಸರ್ವೇ ಕಾರ್ಯವನ್ನು ಮಾಡಿದ್ದು, 20ಕ್ಕಿಂತಲೂ ಹೆಚ್ಚು ಕತ್ತೆಕಿರುಬಗಳು ಇರುವುದು ಪತ್ತೆಯಾಗಿದೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಕತ್ತೆಕಿರುಬಗಳು ಇರುವ ಸಾಧ್ಯತೆಗಳಿವೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

----

ಕೋಟ್‌.....

ಅಳಿವಿನಂಚಿನಲ್ಲಿರವ ಕತ್ತೆಕಿರುಬಗಳನ್ನು ಸಂರಕ್ಷಿಸಲು ಬೆಳಗಾವಿ ಜಿಲ್ಲೆ ಉತ್ತಮವಾಗಿದೆ. ಹಾಗಾಗಿ, ಬೆಳಗಾವಿಯನ್ನು ಕತ್ತೆಕಿರುಬ ಸಂರಕ್ಷಿತ ಪ್ರದೇಶವೆಂದು ಘೋಷಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.

- ಮರಿಯಾ ಕ್ರಿಸ್ತು ರಾಜಾ ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಬೆಳಗಾವಿ