ಸಾರಾಂಶ
ತೀರ್ಥಹಳ್ಳಿ: ಸರ್ಕಾರದ ಕೆಲಸಗಳು ಸುಲಲಿತವಾಗಿ ನಡೆಯಬೇಕಿದ್ದರೆ ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರು ಮತ್ತು ರಾಜಸ್ವ ನಿರೀಕ್ಷಕರ ಕಾರ್ಯ ಅತೀ ಅಗತ್ಯ. ಹೀಗಾಗಿ ಮುಷ್ಕರನಿರತ ಕಂದಾಯ ಇಲಾಖೆ ನೌಕರರ ಸಂಘಟನೆಯೊಂದಿಗೆ ಸರ್ಕಾರ ಮಾತುಕತೆಯ ಮೂಲಕ ತುರ್ತಾಗಿ ಸಮಸ್ಯೆ ಬಗೆಹರಿಸಿಕೊಳ್ಳುವ ಅಗತ್ಯವಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ಇಲ್ಲಿನ ತಾಲೂಕು ಕಚೇರಿ ಎದುರು ಧರಣಿ ನಡೆಸುತ್ತಿರುವ ಕಂದಾಯ ಇಲಾಖೆ ನೌಕರರ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಕಳೆದ ಐದು ದಿನಗಳಿಂದ ಕಂದಾಯ ಇಲಾಖೆ ನೌಕರರು ರಾಜ್ಯದಾದ್ಯಂತ ನಡೆಸುತ್ತಿರುವ ಮುಷ್ಕರದಿಂದಾಗಿ ವಿದ್ಯಾರ್ಥಿಗಳು, ರೈತರು ಮತ್ತು ಸಾರ್ವಜನಿಕರ ಕೆಲಸಗಳಿಗೆ ತೀವ್ರ ಹಿನ್ನಡೆಯಾಗಿದೆ. ಮುಷ್ಕರ ನಿರತ ನೌಕರರ ಬೇಡಿಕೆಯಲ್ಲಿ ಕೆಲವನ್ನು ಒಪ್ಪಲಾಗದು. ಆದರೆ ಇಲಾಖೆಯ ಕೆಲಸ ನಿರ್ವಹಣೆಗೆ ಲ್ಯಾಪ್‍ಟಾಪ್ ಸೇರಿದಂತೆ ಕೆಲವೊಂದು ಬೇಡಿಕೆಗಳು ನ್ಯಾಯಯುತವಾಗಿದ್ದು, ಇದನ್ನು ಒದಗಿಸುವಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ ಎಂದರು.ಗ್ರಾಮ ಆಡಳಿತ ಅಧಿಕಾರಿಗಳಿಗೆ ಸಹಕಾರ ನೀಡಲು ನೇಮಕಗೊಂಡಿರುವ ಗ್ರಾಮ ಸಹಾಯಕರಲ್ಲಿ ಬಹಳ ಮಂದಿ ಸರ್ಕಾರದ ಸಂಬಳ ಪಡೆದು ಬ್ರೋಕರ್ ಕೆಲಸ ಮಾಡುತ್ತಿದ್ದಾರೆ. ಅವರಿಂದ ನೀವುಗಳು ಕೆಲಸ ತೆಗೆದುಕೊಳ್ಳುವುದು ಅಗತ್ಯ. ನಿಮ್ಮ ಸಮಸ್ಯೆಗಳ ಬಗ್ಗೆ ಕಂದಾಯ ಸಚಿವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು. ನೌಕರರ ಸಮಸ್ಯೆ ಕುರಿತು ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಸುಧಾಕರ್, ಪ್ರೋಗ್ರೆಸ್ ಕೇಳ್ತಾರೆ ಆದರೆ ನಮಗೆ ಕೂರುವುದಕ್ಕೆ ನಿರ್ದಿಷ್ಟ ಕಚೇರಿ ಮತ್ತು ಮೂಲಭೂತ ಸೌಲಭ್ಯಗಳೇ ಇಲ್ಲಾ. ಕೆಲಸ ಮಾಡಲು ಒಳ್ಳೆಯ ವಾತಾವರಣ ಮತ್ತು ಅಗತ್ಯ ಸಲಕರಣೆಗಳಷ್ಟನ್ನೇ ಕೇಳುತ್ತಿದ್ದೇವೆ. ಫೀಲ್ಡ್ ಕೆಲಸ ಮಾತ್ರವಲ್ಲದೇ ತಾಲೂಕು ಕಚೇರಿಯಲ್ಲೂ ಕೆಲಸ ಮಾಡಬೇಕು. ಪದೋನ್ನತಿ ಕೂಡಾ ಇಲ್ಲಾ. ಈ ಎಲ್ಲಾ ವಿಚಾರಗಳ ಕುರಿತಂತೆ ಸರ್ಕಾರ ನಮಗೆ ನ್ಯಾಯ ದೊರಕಿಸಬೇಕು ಎಂದರು.