ಹಿರಿಯೂರು ತಾಲೂಕು ಶಾಲೆಗಳ ಅಭಿವೃದ್ಧಿಗೆ ಅನುದಾನ ನೀಡಿ

| Published : Feb 15 2025, 12:32 AM IST

ಸಾರಾಂಶ

ಸಚಿವ ಡಿ.ಸುಧಾಕರ್ ಹಿರಿಯೂರು ತಾಲೂಕಿನ ಶಿಥಿಲ ಶಾಲಾ ಕೊಠಡಿಗಳನ್ನು ತೆರವು ಮಾಡಿ, ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಅನುದಾನ ನೀಡುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಮಾಡಿದರು.

ಬೆಂಗಳೂರಲ್ಲಿ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿರುವ ಚಿತ್ರದುರ್ಗ ಜಿಲ್ಲಾ ಸಚಿವ ಡಿ.ಸುಧಾಕರ್‌ ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಶಾಲೆಗಳ ಹಳೆಯ ಕಟ್ಟಡಗಳ ತೆರವು ಮತ್ತು ನೂತನ ಕಟ್ಟಡಗಳ ನಿರ್ಮಾಣದತ್ತ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಗಮನಹರಿಸಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಅಗತ್ಯ ಅನುದಾನಕ್ಕಾಗಿ ಮನವಿ ಮಾಡಿದ್ದಾರೆ.

ತಾಲೂಕಿನ ವ್ಯಾಪ್ತಿಯಲ್ಲಿ 150 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು, 156 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, 30 ಸರ್ಕಾರಿ ಪ್ರೌಢಶಾಲೆಗಳಿವೆ. ಬಹಳಷ್ಟು ಶಾಲೆಗಳ ಕೊಠಡಿಗಳು ಹಳೆಯದಾಗಿ, ಶಿಥಿಲಾವಸ್ಥೆ ತಲುಪಿವೆ. ಕೆಲವು ಶಾಲಾ ಕೊಠಡಿಗಳು ಮಳೆಯಿಂದ ತೀವ್ರ ಹಾನಿಗೆ ಒಳಗಾಗಿವೆ. ಕೆಲವು ಶಾಲೆಗಳಲ್ಲಿ ಒಂದೇ ಕೊಠಡಿ ಮಾತ್ರವೇ ಉಪಯೋಗಕ್ಕೆ ಬರುವ ದುಸ್ಥಿತಿ ತಲೆದೋರಿದೆ ಎಂದು ಬೆಂಗಳೂರಲ್ಲಿ ಶಿಕ್ಷಣ ಸಚಿವರನ್ನು ಭೇಟಿಯಾಗಿ, ಮನವಿಯಲ್ಲಿ ವಾಸ್ತವ ತೆರೆದಿಟ್ಟಿದ್ದಾರೆ.

ಇದಲ್ಲದೇ, 28 ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳ ಒಟ್ಟು 47 ಕೊಠಡಿಗಳನ್ನು ಬಳಸಲು ಯೋಗ್ಯವಿಲ್ಲವೆಂದು ಲೋಕೋಪಯೋಗಿ ಇಲಾಖೆ ಅಭಿಯಂತರರು ವರದಿ ನೀಡಿದ್ದಾರೆ. ಆದ್ದರಿಂದ ಸದರಿ ಕೊಠಡಿಗಳನ್ನು ನೆಲಸಮಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಪ್ರಯುಕ್ತ ಅತಿ ತುರ್ತಾಗಿ ಅಗತ್ಯವಿರುವ 93 ಶಾಲೆಗಳ 121 ಕೊಠಡಿಗಳನ್ನು ಅನುಬಂಧ 1ರಲ್ಲಿ ನಿರ್ಮಿಸಬೇಕಾಗಿದೆ. ಹಾಗೆಯೇ, 76 ಶಾಲೆಗಳ 76 ಕೊಠಡಿಗಳನ್ನು ಅನುಬಂಧ -2ರಲ್ಲಿ ನಿರ್ಮಾಣ ಮಾಡಬೇಕಾಗಿದೆ. ಶಾಲೆಗಳ ಪಟ್ಟಿಯನ್ನು ಮನವಿಗೆ ಲಗತ್ತಿಸಿದ್ದು, ಹೊಸ ತರಗತಿ ಕೊಠಡಿಗಳನ್ನು ಮಂಜೂರು ಮಾಡಿ ಅನುದಾನ ಬಿಡುಗಡೆ ಮಾಡಲು ಸಂಬಂಧಿಸಿದವರಿಗೆ ಆದೇಶ ನೀಡಲು ಜಿಲ್ಲಾ ಸಚಿವ ಡಿ.ಸುಧಾಕರ್ ಶಿಕ್ಷಣ ಸಚಿವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಹಿರಿಯೂರು ತಾಲೂಕಿನ ಹುಲುಗಲಕುಂಟೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡವನ್ನು ರಾಷ್ಟ್ರೀಯ ಹೆದ್ದಾರಿ 150(ಎ) ರಸ್ತೆ ಅಗಲೀಕರಣಕ್ಕಾಗಿ ಸಂಪೂರ್ಣ ತೆರವುಗೊಳಿಸಲಾಗಿತ್ತು. ಶಾಲಾ ಮಕ್ಕಳಿಗೆ ತಾತ್ಕಾಲಿಕವಾಗಿ ಶಾಲೆಗೆಂದೇ ನೀಡಿದ ಬೇರೊಂದು ಜಾಗದಲ್ಲಿ ಶೀಟಿನ ಶೆಡ್‌ಗಳನ್ನು ನಿರ್ಮಿಸಿಕೊಡಲಾಗಿತ್ತು. ಇದೀಗ ಆ ಜಾಗದಲ್ಲಿ ಹೊಸದಾಗಿ 8 ಶಾಲಾ ಕೊಠಡಿ ನಿರ್ಮಾಣ, ಶೌಚಾಲಯ ಸೌಲಭ್ಯ ಹಾಗೂ ಶಾಲಾ ಕಾಂಪೌಂಡ್ ನಿರ್ಮಾಣ ಮಾಡಬೇಕಾಗಿದೆ. ಒಟ್ಟು ₹163.30 ಲಕ್ಷಗಳ ಅಂದಾಜು ಪಟ್ಟಿಯನ್ನು ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆಯಿಂದ ತಯಾರಿಸಿ ಅನುಮೋದನೆ ನೀಡುವ ಸಂಬಂಧ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಸಲ್ಲಿಸಲಾಗಿದೆ. ಸದರಿ ಪ್ರಸ್ತಾವನೆ ಮತ್ತು ಅನುದಾನ ಮಂಜೂರು ಮಾಡಲು ಹಾಗೂ ನಿರ್ದೇಶನ ನೀಡಲು ಸಚಿವರು ಶಿಕ್ಷಣ ಇಲಾಖೆ ಸಚಿವರಿಗೆ ಮನವಿ ಮಾಡಿದ್ದಾರೆ.