ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನ ವಿರೋಧಿಸಿ ನಗರದಲ್ಲಿ ಸೋಮವಾರ ಮಹಾಮೇಳಾವ್ ಸಂಘಟಿಸಲು ಮುಂದಾದ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಪುಂಡರ ಯತ್ನಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನ ವಿರೋಧಿಸಿ ನಗರದಲ್ಲಿ ಸೋಮವಾರ ಮಹಾಮೇಳಾವ್ ಸಂಘಟಿಸಲು ಮುಂದಾದ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಪುಂಡರ ಯತ್ನಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ.ಅಧಿವೇಶನದ ಮೊದಲ ದಿನವೇ ಮಹಾಮೇಳಾವ್ ಸಂಘಟನೆಗೆ ಅನುಮತಿ ಕೋರಿ ಎಂಇಎಸ್ ಮುಖಂಡರು ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಪೊಲೀಸ್ ಇಲಾಖೆ ತಿರಸ್ಕರಿಸಿತ್ತು. ಮನೆ ಬಿಟ್ಟು ಹೊರಗೆ ಬರದಂತೆ ಎಂಇಎಸ್ ನಾಯಕರಿಗೆ ಪೊಲೀಸರು ಎಚ್ಚರಿಕೆಯನ್ನೂ ನೀಡಿದ್ದರು. ಆದರೆ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಆದೇಶವನ್ನು ಧಿಕ್ಕರಿಸಿ ಟಿಳಕವಾಡಿಯ ವ್ಯಾಕ್ಸಿನ್ ಡಿಪೋದ ಮೈದಾನದಲ್ಲಿ ಮಹಾಮೇಳಾವ್ ಸಂಘಟಿಸಲು ಎಂಇಎಸ್ ಮುಖಂಡರು ಮುಂದಾದಾಗ ಪೊಲೀಸರು ಅವರನ್ನು ತಡೆದರು. ಈ ವೇಳೆ, ಮುಖಂಡರು ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಿ, ಬೆಳಗಾವಿ, ನಿಪ್ಪಾಣಿ, ಬಾಲ್ಕಿ, ಖಾನಾಪುರ ಸೇರಿದಂತೆ ಗಡಿಭಾಗದಲ್ಲಿರುವ ಮರಾಠಿ ಬಹುಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಬೇಕು ಎಂದು ಘೋಷಣೆ ಕೂಗಿದರು. ತಮ್ಮನ್ನು ತಡೆಯಲು ಮುಂದಾದ ಪೊಲೀಸರ ಜೊತೆ ವಾಗ್ವಾದ ನಡೆಸಿದರು. ಈ ವೇಳೆ, ಮಾಜಿ ಶಾಸಕರಾದ ಮನೋಹರ ಕಿಣೇಕರ, ಮಾಲೋಜಿರಾವ್ ಅಷ್ಟೇಕರ, ಶುಭಂ ಶೆಳ್ಕೆ, ರಮಾಕಾಂತ ಕೊಂಡುಸ್ಕರ್, ರೇಣು ಕಿಲ್ಲೇಕರ ಸೇರಿದಂತೆ ಹಲವು ಎಂಇಎಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು, ಕರೆದೊಯ್ದರು.
ಇದೇ ವೇಳೆ, ಮಹಾಮೇಳಾವ್‌ಗೆ ಅನುಮತಿ ನೀಡದ್ದನ್ನು ಖಂಡಿಸಿ ಮಹಾರಾಷ್ಟ್ರದ ಕೊಲ್ಲಾಪುರ ಸೆಂಟ್ರಲ್ ಬಸ್ ನಿಲ್ದಾಣದಲ್ಲಿ ಶಿವಸೇನೆಯ (ಉದ್ಧವ್ ಠಾಕ್ರೆ ಬಣ) ಕಾರ್ಯಕರ್ತರು ಪುಣೆಯಿಂದ ಹಳಿಯಾಳಕ್ಕೆ ಬರುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ತಡೆದು, ಅದರ ಮೇಲೆ ಜೈ ಮಹಾರಾಷ್ಟ್ರ ಸ್ಟಿಕ್ಕರ್ ಅಂಟಿಸಿ, ಜೈ ಮಹಾರಾಷ್ಟ್ರ ಘೋಷಣೆ ಕೂಗಿ ಉದ್ದಟತನ ತೋರಿದರು.ಎಂಇಎಸ್ ವಿರುದ್ಧ ಕರವೇ ಪ್ರತಿಭಟನೆ:ಈ ಮಧ್ಯೆ, ಮಹಾಮೇಳಾವ್ ಖಂಡಿಸಿ ಕರವೇ (ನಾರಾಯಣಗೌಡ ಬಣ) ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ರಾಜ್ಯ ಸಂಚಾಲಕ ಸುರೇಶ ಗವನ್ನವರ ಸೇರಿ ಸಂಘಟನೆಯ ಹಲವು ಕಾರ್ಯಕರ್ತರು ವ್ಯಾಕ್ಸಿನ್ ಡಿಪೋದತ್ತ ತೆರಳಿದಾಗ, ಪೊಲೀಸರು ಅವರನ್ನು ತಡೆದು, ವಶಕ್ಕೆ ಪಡೆದರು. ಈ ವೇಳೆ ಪ್ರತಿಭಟನಾಕಾರರು ಎಂಇಎಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ಕೊಲ್ಲಾಪುರದಲ್ಲಿ ಶಿವಸೇನೆಯ ಪುಂಡಾಟಿಕೆ ಖಂಡಿಸಿ ಅಥಣಿಯಲ್ಲಿ ಕರವೇ (ಶಿವರಾಮೇಗೌಡ ಬಣ) ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಹೀಗಾಗಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ನಿಪ್ಪಾಣಿವರೆಗೆ ಮಾತ್ರ ಸಂಚರಿಸಿದವು.