- ರಾಂಪುರ ಹಾಲಸ್ವಾಮಿ ಗವಿಯಲ್ಲಿ ಶಿವಯೋಗಾನುಷ್ಠಾನ ಕಾರ್ಯಕ್ರಮ

- - -

ನ್ಯಾಮತಿ: ಮನುಷ್ಯನಲ್ಲಿ ಶ್ರದ್ಧೆಯೇ ಜೀವನದ ಆಧಾರವಾಗಿದೆ. ಶ್ರದ್ಧೆ ಕೇವಲ ಆಧಾರ, ಆಶ್ರಯವಾಗಿರದೇ ಅದು ಪ್ರೇರಕ ಶಕ್ತಿಯಾಗಿದೆ. ಧಾರ್ಮಿಕ ಶ್ರದ್ಧೆ, ದೇವರ ಮೇಲಿನ ನಂಬಿಕೆ ಮೂಢ್ಯವಲ್ಲ. ದೇವರಲ್ಲಿ ನಂಬಿಕೆ ಇದ್ದ ವ್ಯಕ್ತಿ ಜೀವನದಲ್ಲಿ ಯಶಸ್ಸಿನ ಮೆಟ್ಟಿಲೇರುತ್ತಾನೆ. ಕಾಲ ಬದಲಾದರೂ ಸತ್ಯ ಮತ್ತು ಧರ್ಮದ ಶಕ್ತಿ ಎಂದಿಗೂ ಕುಗ್ಗುವುದಿಲ್ಲ ಎಂದು ಗೋವಿನಕೋವಿ ಹಾಲಸ್ವಾಮಿ ಬೃಹನ್ಮಠದ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ನುಡಿದರು.

ತಾಲೂಕಿನ ರಾಂಪುರ ಕ್ಷೇತ್ರದ ಶ್ರೀ ಸದ್ಗುರು ಶಿವಯೋಗಿ ಹಾಲಸಿದ್ದೇಶ್ವರ ಹಾಲಸ್ವಾಮಿ ಗವಿಯಲ್ಲಿ ಲೋಕಕಲ್ಯಾಣಾರ್ಥ ಐದು ದಿನಗಳಿಂದ ಶಿವಯೋಗಾನುಷ್ಠನ ಕೈಗೊಂಡು ಮುಕ್ತಾಯ ದಿನದ ಶುಕ್ರವಾರ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಜೀವನದಲ್ಲಿ ನಂಬಿಕೆ ಎಂಬುದು ಬಹಳ ಮುಖ್ಯ. ಇದು ಮನುಷ್ಯನಲ್ಲಿ ಮಾನಸಿಕ ಶಕ್ತಿ ಹೆಚ್ಚಿಸಿ, ಆತ್ಮಬಲ ಹೆಚ್ಚಿಸುತ್ತದೆ. ಅಸಾಧ್ಯವನ್ನು ಸಾಧಿಸುವ ಆತ್ಮಶಕ್ತಿ ನೀಡುತ್ತದೆ. ಧರ್ಮದ ಹಾದಿಯಲ್ಲಿ ನಡೆಯುವವನ ಬದುಕು ಸುಖ- ಶಾಂತಿಯಿಂದ ಕೂಡಿರುತ್ತದೆ ಎಂದು ಹೇಳಿದರು.


ಕಳೆದ ಸೋಮವಾರದಿಂದ 5 ಕಾಲ ರಾಂಪುರ ಕ್ಷೇತ್ರದ ಶ್ರೀ ಸದ್ಗುರು ಶಿವಯೋಗಿ ಹಾಲಸಿದ್ಧೇಶ್ವರ ಹಾಲಸ್ವಾಮೀಜಿ ಗವಿಯಲ್ಲಿ ಗೋವಿನಕೋವಿ ಗ್ರಾಮದ ಹಾಲಸ್ವಾಮಿ ಬೃಹನ್ಮಠದ ಸದ್ಗುರು ಶ್ರೀ ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮಿಜಿಯವರು ಲೋಕಕಲ್ಯಾಣಾರ್ಥ ಜಪ, ತಪ, ಶಿವಯೋಗಾನುಷ್ಠಾನ, ಮೌನಾನುಷ್ಠಾನ ಕೈಗೊಂಡಿದ್ದರು.

ಕೊನೆ ದಿನವಾದ ಶುಕ್ರವಾರ ಗಡ್ಡೆರಾಮೇಶ್ವರಸ್ವಾಮಿ ಪರಿವಾರ ದೇವರುಗಳಿಗೆ ಅಭಿಷೇಕ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಭಾಗವಹಿಸಿದ್ದ ಭಕ್ತರಿಗೆ ಕುರುವ ಹಳದಿಬ್ಬದ ಭಕ್ತರು ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಿದ್ದರು. ಶ್ರೀ ಹಾಲಸ್ವಾಮಿ ಸೇವಾ ಸಮಿತಿ ಪದಾಧಿಕಾರಿಗಳು ಮತ್ತಿತರರಿದ್ದರು.

- - -

-ಚಿತ್ರ:

ಗೋವಿನಕೋವಿ ಗ್ರಾಮದ ಹಾಲಸ್ವಾಮಿ ಬೃಹನ್ಮಠದ ಸದ್ಗುರು ಶ್ರೀ ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ರಾಂಪುರ ಕ್ಷೇತ್ರದ ಶ್ರೀ ಸದ್ಗುರು ಶಿವಯೋಗಿ ಹಾಲಸಿದ್ದೇಶ್ವರ ಹಾಲಸ್ವಾಮೀಜಿ ಗವಿಯಲ್ಲಿ ಲೋಕಕಲ್ಯಾಣಾರ್ಥ ಕೈಗೊಂಡಿದ್ದ ಶಿವಯೋಗಾನುಷ್ಠಾನ, ಮೌನಾನುಷ್ಠಾನವನ್ನು ಮುಕ್ತಾಯಗೊಳಿಸಿದರು.