ಸಾರಾಂಶ
ಧಾರವಾಡ: ಅಧಿಕಾರದ ಹಪಾಹಪಿ ಹಾಗೂ ಸೋಲಿನ ಭಯದಿಂದ ಚಂದ್ರಕಾಂತ ಬೆಲ್ಲದ ಹಾಗೂ ಶಂಕರ ಹಲಗತ್ತಿ ಬಣವು ಪಾಪು ಅಭಿಮಾನಿ ಬಳಗದ ವಿರುದ್ಧ ಸುಳ್ಳು ಹೇಳಿಕೆ ನೀಡುತ್ತಿದ್ದು, ಮತದಾರರು ಎಚ್ಚರದಿಂದ ಮತದಾನ ಮಾಡಬೇಕೆಂದು ಪಾಪು ಅಭಿಮಾನಿ ಬಳಗದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮೋಹನ ಲಿಂಬಿಕಾಯಿ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನದ ಆಕಾಂಕ್ಷಿ ಪ್ರಕಾಶ ಉಡಕೇರಿ ಹೇಳಿದರು.
ಮೇ.25ರಂದು ನಡೆಯಲಿರುವ ಕರ್ನಾಟಕ ವಿದ್ಯಾವರ್ಧಕ ಸಂಘದ ತ್ರೈವಾರ್ಷಿಕ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಚುನಾವಣೆ ವೇಳೆ ಪರಸ್ಪರ ವಿರೋಧಿ ಬಣದಲ್ಲಿದ್ದ ಚಂದ್ರಕಾಂತ ಬೆಲ್ಲದ, ಶಂಕರ ಹಲಗತ್ತಿ ಹಾಗೂ ಇತರರ ಅಭ್ಯರ್ಥಿಗಳು ಈಗ ಸೋಲಿನ ಭಯದಿಂದ ಅಪವಿತ್ರ ಮೈತ್ರಿಯೊಂದಿಗೆ ಚುನಾವಣೆ ಎದುರಿಸುತ್ತಿರುವುದಾಗಿ ಟೀಕಿಸಿದರು.ಸಂಘದ ನಿಯಮಾವಳಿ ಉಲ್ಲಂಘಿಸಿ ಯಾವುದೇ ಟೆಂಡರ್ ಕರೆಯದೇ ಸಂಘದ ಅಭಿವೃದ್ಧಿ ಕಾಮಗಾರಿ ತಮಗೆ ಬೇಕಾದರವರಿಗೆ ನೀಡಲಾಗಿದೆ. ಇದೊಂದೇ ಬಾರಿ ಸ್ಪರ್ಧಿಸಲು ಅವಕಾಶವಿದೆ ಎಂದು ಮತದಾರರಿಗೆ ಅನುಕಂಪದ ಮತಗಳನ್ನು ಕೇಳುತ್ತಿದ್ದಾರೆ. ಈ ಮೂಲಕ ಮತದಾರರ ದಾರಿ ತಪ್ಪಿಸುವವರಿಗೆ ಮತದಾರರು ತಕ್ಕ ಉತ್ತರ ನೀಡಬೇಕು. ಸಂಘಕ್ಕೆ ₹ 60 ಲಕ್ಷ ಅನುದಾನ ಆಡಳಿತ ಮಂಡಳಿ ತಂದಿಲ್ಲ. ಯಾವುದೇ ಆಗ್ರಹ ಮಾಡದೇ ಇದ್ದರೂ ಈ ಹಣ ಸರ್ಕಾರದಿಂದ ವಾರ್ಷಿಕವಾಗಿ ₹ 55 ಲಕ್ಷ ಹಾಗೂ ₹ 5 ಲಕ್ಷ ಗಡಿನಾಡ ಅಭಿವೃದ್ಧಿ ಪ್ರಾಧಿಕಾರದ ಅನುದಾನ ಬರುತ್ತದೆ. ಹಾಲಿ ತಂಡವು ಒಂದು ರುಪಾಯಿ ವಿಶೇಷ ಅನುದಾನ ತಂದಿಲ್ಲ. ಅದಕ್ಕಾಗಿಯೇ ಯಾವುದೇ ಪ್ರಾಮಾಣಿಕ ಪ್ರಯತ್ನ ಸಹ ಮಾಡಿಲ್ಲ ಎಂದು ಆರೋಪಿಸಿದರು.
ಕೋಟಿಗಟ್ಟಲೇ ಅನುದಾನ ತಂದು ಪಾಪು ಭವನ, ಬೃಹತ್ ಮಳಿಗೆ ಕಟ್ಟಿದ ಸ್ವತಃ ಪಾಪು ಅಭಿವೃದ್ಧಿ ಮಾಡಿದ ಬಗ್ಗೆ ಇವರು ಮಾತನಾಡೋದಿಲ್ಲ. ಬೆಲ್ಲದ ಬಣದವರು ಶೌಚಾಲಯ ಕಟ್ಟಿ, ಅಭಿವೃದ್ಧಿ ಮಾಡಿದ್ದಾಗಿ ಹೇಳಿಕೊಳ್ಳುವುದು ನಾಚಿಗೆಗೇಡು. ಮತ್ತೊಮ್ಮೆ ಅವಕಾಶ ನೀಡುವ ಕೋರಿಕೆ ಮತದಾರರ ದಾರಿ ತಪ್ಪಿಸುವ ತಂತ್ರ. ಹಿಂದಿನ ಆಡಳಿತ ಮಂಡಳಿ ಸಂಪೂರ್ಣ ಬದಲಾಗಬೇಕು. ಈ ನಿಟ್ಟಿನಲ್ಲಿ ಸಂಘದ ಮತದಾರರೇ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ವಿವಿಧ ಸ್ಥಾನಗಳ ಆಕಾಂಕ್ಷಿಗಳಾದ ಮಾರ್ತಾಂಡಪ್ಪ ಕತ್ತಿ, ಡಾ. ವಿಶ್ವನಾಥ ಚಿಂತಾಮಣಿ, ಡಾ. ರತ್ನಾ ಐರಸಂಗ, ಡಾ.ಶರಣಪ್ಪ ಕೊಟಗಿ, ಸಂತೋಷ ಪಟ್ಟಣಶೆಟ್ಟಿ, ಪ್ರಭು ಕುಂದರಗಿ, ಎಸ್.ಎಂ. ದಾನಪ್ಪನವರ, ವಿಶ್ವನಾಥ ಅಮರಶೆಟ್ಟಿ, ಮನೋಜ ಪಾಟೀಲ ಇದ್ದರು. ಇದೇ ಸಂದರ್ಭದಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಮಾಹಿತಿ ಪತ್ರವನ್ನು ಬಿಡುಗಡೆ ಮಾಡಲಾಯಿತು.
ಅದೇಷ್ಟೋ ಸಾರ್ವಜನಿಕ ಸಂಸ್ಥೆಗಳಲ್ಲಿ ರಾಜಕೀಯ ಹಸ್ತಕ್ಷೇಪದಿಂದ ಆ ಸಂಸ್ಥೆಗಳು ಹಾಳಾಗಿರುವುದು ನಿಜ. ಆದರೆ, ರಾಜಕಾರಣಿಗಳೇ ಬೇರೆ, ರಾಜಕೀಯವೇ ಬೇರೆ. ರಾಜಕಾರಣಿಗಳು ಕೂಡ ಸಾಹಿತಿಗಳಿದ್ದಾರೆ. ಸಂಘಕ್ಕೆ ರಾಜಕಾರಣಿಗಳು ಬರಬಾರದಂತಿಲ್ಲ. ಆದರೆ, ರಾಜಕಾರಣ ಮಾಡಬಾರದು. ಸ್ವತಃ ಪಾಟೀಲ ಪುಟ್ಟಪ್ಪನವರೇ ಎರಡು ಭಾರಿ ರಾಜ್ಯಸಭೆ ಸದಸ್ಯರಾಗಿದ್ದರು ಎಂದು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಮೋಹನ ಲಿಂಬಿಕಾಯಿ ತಿಳಿಸಿದ್ದಾರೆ.ಸಂಘದ ಶ್ರೇಯೋವೃದ್ಧಿ, ಕಲೆ, ಸಾಹಿತ್ಯ, ಸಂಗೀತದ ಬೆಳವಣಿಗೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ, ಕ್ರೀಡಾ, ರೈತ ಮಂಟಪ ಸ್ಥಾಪನೆ, ಸದಸ್ಯತ್ವ ಅಭಿಯಾನ, ಪಾರದರ್ಶಕ ಆಡಳಿತಕ್ಕೆ ಪಾಪು ಅಭಿಮಾನಿ ಬಳಗ ಬೆಂಬಲಿಸಿ ಎಂದು ಪ್ರಧಾನ ಕಾರ್ಯದರ್ಶಿ ಆಕಾಂಕ್ಷಿ ಪ್ರಕಾಶ ಉಡಿಕೇರಿ ಹೇಳಿದರು.