ತನಿಖೆಗೆ ಸಂಬಂಧಿಸಿದಂತೆ ಸುಮಾರು ನಾಲ್ಕು ತಾಸಿಗೂ ಹೆಚ್ಚು ಹೊತ್ತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.
ಬಳ್ಳಾರಿ: ನಗರದ ಸಿರುಗುಪ್ಪ ರಸ್ತೆಯಲ್ಲಿನ ಶಾಸಕ ಜನಾರ್ದನ ರೆಡ್ಡಿ ನಿವಾಸದ ಎದುರು ಜ.1ರಂದು ಜರುಗಿದ ಬ್ಯಾನರ್ ಗಲಭೆಗೆ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಎಡಿಜಿಪಿ ಬಿ.ಕೆ. ಸಿಂಗ್ ಘಟನಾ ಸ್ಥಳಕ್ಕೆ ಮಂಗಳವಾರ ತೆರಳಿ ಪರಿಶೀಲನೆ ನಡೆಸಿದ್ದಾರೆ.
ತನಿಖೆಗೆ ಸಂಬಂಧಿಸಿದಂತೆ ಸುಮಾರು ನಾಲ್ಕು ತಾಸಿಗೂ ಹೆಚ್ಚು ಹೊತ್ತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಘಟನಾ ಸ್ಥಳಕ್ಕೆ ತೆರಳಿ ಇಡೀ ಘಟನೆಯ ಮಾಹಿತಿಯನ್ನು ಜಿಲ್ಲಾ ಪೊಲೀಸ್ ಇಲಾಖೆಯ ತನಿಖಾಧಿಕಾರಿಗಳಿಂದ ಪಡೆದುಕೊಂಡರು.
ಘಟನೆ ನಡೆದ ದಿನ ಬೆಳಿಗ್ಗೆಯಿಂದ ಇಡೀ ರಾತ್ರಿವರೆಗೆ ನಡೆದ ಬೆಳವಣಿಗೆ ಕುರಿತು ಇಂಚಿಂಚೂ ಮಾಹಿತಿ ಸಂಗ್ರಹಿಸಿದ ಎಡಿಜಿಪಿ ಬಿ.ಕೆ.ಸಿಂಗ್, ಘಟನೆಯಲ್ಲಿ ಮೃತಪಟ್ಟ ಯುವಕನ ಹಿನ್ನೆಲೆ, ಗಲಭೆ ವೇಳೆ ಆತ ಸ್ಥಳಕ್ಕೆ ಬಂದದ್ದು ಯಾಕೆ? ಘಟನೆ ವೇಳೆ ಎಷ್ಟು ಜನರು ಭಾಗವಹಿಸಿದ್ದರು. ಯಾವ ಪ್ರದೇಶದಿಂದ ಬಂದಿದ್ದರು? ಎಂಬಿತ್ಯಾದಿ ಮಾಹಿತಿಯನ್ನು ಕಲೆ ಹಾಕಿದರು.ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ 10ಕ್ಕೂ ಅಧಿಕ ಅಧಿಕಾರಿಗಳು ನಗರಕ್ಕೆ ಆಗಮಿಸಿದ್ದು, ತೀವ್ರ ವಿಚಾರಣೆ ನಡೆಸುವಲ್ಲಿ ನಿರತರಾಗಿದ್ದಾರೆ. ಸಿಐಡಿ ಎಸ್ಪಿ ಹರ್ಷ ಪ್ರಿಯಂವದಾ ನೇತೃತ್ವದಲ್ಲಿ ಸಾಕಷ್ಟು ದಾಖಲೆಗಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ಘಟನಾ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿ, ಮೊಬೈಲ್, ಮಾಧ್ಯಮದಲ್ಲಿ ಸೆರೆಯಾಗಿರುವ ವಿಡಿಯೋ ತುಣುಕುಗಳು ಸೇರಿ ಸುಮಾರು 200ಕ್ಕೂ ಅಧಿಕ ವೀಡಿಯೋಗಳನ್ನು ಸಂಗ್ರಹಿಸಿದ್ದಾರೆ. ಸ್ಥಳೀಯ ತನಿಖಾಧಿಕಾರಿಗಳಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಕಡತವನ್ನು ಸುಪರ್ದಿಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಎರಡು ದಿನಗಳಿಂದ ಬ್ಯಾನರ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು, ಎರಡು ಗುಂಪಿನವರಿಗೆ ನೋಟಿಸ್ ನೀಡಿ, ವಿಚಾರಣೆಗಾಗಿ ಬೆಂಗಳೂರಿಗೆ ಕರೆಸಿಕೊಳ್ಳುವ ಸಾಧ್ಯತೆಯಿದೆ. ನಾಲ್ಕು ಪ್ರಕರಣಗಳ ತನಿಖೆ ಕೈಗೆತ್ತಿಕೊಂಡಿರುವ ಅಧಿಕಾರಿಗಳು ಉಭಯ ಪಕ್ಷಗಳ ಶಾಸಕರು, ಮುಖಂಡರು, ಕಾರ್ಯಕರ್ತರರಿಗೆ ಹಂತ ಹಂತವಾಗಿ ನೋಟಿಸ್ ಜಾರಿಗೊಳಿಸಿ ವಿಚಾರಣೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಬ್ಯಾನರ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಬೀಡು ಬಿಟ್ಟಿರುವ ಸಿಐಡಿ ಅಧಿಕಾರಿಗಳ ತಂಡ ಎಲ್ಲ ಆಯಾಮಗಳಲ್ಲಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಗಲಭೆ ಸ್ಥಳಕ್ಕೆ ಸಿಐಡಿ ಎಡಿಜಿಪಿ ಬಿ.ಕೆ. ಸಿಂಗ್, ಎಸ್ಪಿ ಹರ್ಷ ಪ್ರಿಯಂವದಾ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಗೆ ಸಂಬಂಧಿಸಿದಂತೆ ಮಂಗಳವಾರ ಸಂಜೆವರೆಗೆ ಅಧಿಕಾರಿಗಳು ತೊಡಗಿಸಿಕೊಂಡಿದ್ದರು.
ಐಜಿಪಿ ಕಚೇರಿಯಲ್ಲಿ ನಾಲ್ಕು ಪ್ರಕರಣಗಳ ಈ ವರೆಗೆ ಸ್ಥಳೀಯ ಐಒಗಳಿಂದ ನಡೆದ ತನಿಖೆ, ಸಂಗ್ರಹಿಸಿದ ಸಾಕ್ಷ್ಯಗಳ ಕುರಿತು ತನಿಖಾಧಿಕಾರಿಗಳೊಂದಿಗೆ ಸುಮಾರು 2 ಗಂಟೆಗಳಿಗೂ ಅಧಿಕ ಕಾಲ ಸಿಐಡಿ ಅಧಿಕಾರಿಗಳು ಪ್ರತ್ಯೇಕ ಸಭೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಆರು ಪ್ರಕರಣಗಳ ಪೈಕಿ ಸಿಐಡಿಗೆ ನಾಲ್ಕು ಪ್ರಕರಣಗಳನ್ನು ತನಿಖೆ ನಡೆಸುತ್ತಿದೆ.ಬ್ಯಾನರ್ ಗಲಾಟೆ: ಬಿಜೆಪಿ ಪ್ರತಿಭಟನೆಗೆ ಸಜ್ಜು; ಪೂರ್ವಭಾವಿ ಸಭೆ
ಬ್ಯಾನರ್ ಗಲಭೆ ಪ್ರಕರಣ ಖಂಡಿಸಿ ಬಿಜೆಪಿ ನಗರದಲ್ಲಿ ಜ.17ರಂದು ಹಮ್ಮಿಕೊಂಡಿರುವ ಪ್ರತಿಭಟನೆ ಹಾಗೂ ಸಮಾವೇಶಕ್ಕೆ ಸಂಬಂಧಿಸಿದಂತೆ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಮುಖಂಡರು ಹಾಗೂ ಬೂತ್ ಮಟ್ಟದ ಕಾರ್ಯಕರ್ತರ ಸಭೆ ಜರುಗಿತು.ಪ್ರತಿಭಟನೆಗೆ ಬಳ್ಳಾರಿ, ಚಿತ್ರದುರ್ಗ, ರಾಯಚೂರು ಜಿಲ್ಲೆಗಳ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸಮಾವೇಶಕ್ಕೆ 50 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ. ನಗರದ ಮುನ್ಸಿಪಲ್ ಕಾಲೇಜು ಮೈದಾನ, ರಾಯಲ್ ಸರ್ಕಲ್ ಹಾಗೂ ಮೋತಿ ವೃತ್ತದಲ್ಲಿ ಪ್ರತಿಭಟನಾ ಸಮಾವೇಶಕ್ಕೆ ಅನುಮತಿ ಕೇಳಲಾಗಿದೆ. ಬಳ್ಳಾರಿ ನಗರ, ಕೌಲ್ ಬಜಾರ್ ಹಾಗೂ ಗ್ರಾಮಾಂತರದಲ್ಲಿ ಒಟ್ಟು 500 ಬೂತ್ ಗಳಿದ್ದು ಒಂದು ಬೂತ್ ನಿಂದ 100 ಜನರು ಭಾಗವಹಿಸಬೇಕು. ಸಮಾವೇಶದ ಮತಹ್ವ ಕುರಿತು ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ತಿಳಿಸಿಕೊಡಬೇಕು. ಸಮಾವೇಶಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದಗೌಡ, ಆರ್.ಅಶೋಕ್, ಸಿ.ಟಿ.ರವಿ, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಭಾಗವಹಿಸಲಿದ್ದು ಯಶಸ್ವಿಗೊಳಿಸಬೇಕು ಎಂದು ಸಭೆಯಲ್ಲಿದ್ದ ಮುಖಂಡರು ತಿಳಿಸಿದರು. ವಿಧಾನಪರಿಷತ್ ಸದಸ್ಯರಾದ ರವಿಕುಮಾರ್, ವೈ.ಎಂ.ಸತೀಶ್, ಶಾಸಕ ಜನಾರ್ದನ ರೆಡ್ಡಿ, ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್, ಜಿಲ್ಲಾ ಪ್ರಮುಖರಾದ ಗುರುಲಿಂಗನಗೌಡ, ಕೆ.ಎ.ರಾಮಲಿಂಗಪ್ಪ, ಎಚ್.ಹನುಮಂತಪ್ಪ, ಮುರಹರಗೌಡ ಗೋನಾಳ್ ಮತ್ತಿತರರಿದ್ದರು.