ಸಾರಾಂಶ
ಮೊದಲನೇ ಹಂತದಲ್ಲಿ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯ ₹80 ಕೋಟಿ ಅನುದಾನಕ್ಕೆ ಸಂಬಂಧಿಸಿ ಕಾರ್ಯಕ್ರಮ ಕೈಗೆತ್ತಿಕೊಂಡಿದ್ದು, ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ
ಬಳ್ಳಾರಿ: ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ ಮತ್ತು ಮುಖ್ಯಮಂತ್ರಿಗಳ ವಿಶೇಷ ಅನುದಾನ ಸೇರಿ ಒಟ್ಟು ₹200 ಕೋಟಿ ಅನುದಾನದಲ್ಲಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ನಮಸ್ತೆ ಬಳ್ಳಾರಿ ಅಭಿಯಾನದಡಿ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿದ ಶಾಸಕರು, ಬಳ್ಳಾರಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ತಿಳಿಸಿದರು. ಮೊದಲನೇ ಹಂತದಲ್ಲಿ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯ ₹80 ಕೋಟಿ ಅನುದಾನಕ್ಕೆ ಸಂಬಂಧಿಸಿ ಕಾರ್ಯಕ್ರಮ ಕೈಗೆತ್ತಿಕೊಂಡಿದ್ದು, ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಟೆಂಡರ್ ಕಾರ್ಯ ಪೂರ್ಣಗೊಂಡ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು. ಅದೇ ರೀತಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ನಗರ ವಿಧಾನಸಭಾ ಕ್ಷೇತ್ರದ ಆಯಾ ವಾರ್ಡಗಳ ಅವಶ್ಯಕತೆಗೆ ತಕ್ಕಂತೆ ₹3 ರಿಂದ 5 ಕೋಟಿವರೆಗೆ ಅನುದಾನ ಮೀಸಲಿರಿಸಲಾಗಿದೆ. ಈ ಅನುದಾನವನ್ನು ಶೀಘ್ರ ಬಿಡುಗಡೆಗೊಳಿಸಲಾಗುವುದೆಂದು ಮುಖ್ಯಮಂತ್ರಿ ತಿಳಿಸಿದ್ದಾರೆ ಎಂದರು.ಕಾಂಗ್ರೆಸ್ ಮುಖಂಡ ಭಂಭಂ ದಾದಾ, ಪಾಲಿಕೆಯ ಸದಸ್ಯರಾದ ನೂರ್ ಮೊಹಮ್ಮದ್, ಶಮೀಮ್ ಜೊಹ್ರಾ, ರಜಾಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಸೇನ್ ಪೀರಾಂ, ಸಾದಿಕ್, ನೂರ್, ಅನ್ಸರ್, ಎಂ.ಸುಬ್ಬರಾಯುಡು, ಅಬ್ದುಲ್ ಬಾರಿ ಸೇರಿದಂತೆ ಹಲವು ಮುಖಂಡರಿದ್ದರು.