ವಾಲ್ಮೀಕಿ ಬ್ಯಾನರ್‌ ಕಟ್ಟುವ ವಿಚಾರವನ್ನು ನೆಪವಾಗಿಸಿಕೊಂಡು ಬಳ್ಳಾರಿಯಲ್ಲಿ ನಡೆದ ಗಲಭೆ ಪ್ರಕರಣ ಕಾಂಗ್ರೆಸ್ ಸರ್ಕಾರದ ಉದ್ದೇಶಿತ ಹಾಗೂ ಪೂರ್ವನಿಯೋಜಿತ ಪಿತೂರಿಯಾಗಿದೆ. ಈ ಗಲಭೆಯ ಹಿಂದಿರುವ ನಿಜವಾದ ಕಾರಣಗಳನ್ನು ಬಯಲಿಗೆ ತರುವ ಸಲುವಾಗಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರು ಯಾರೇ ಆಗಿರಲಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲೇಬೇಕು ಎಂದು ಎಂದು ಶಾಸಕ ಸಿಮೆಂಟ್ ಮಂಜುನಾಥ್ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ವಾಲ್ಮೀಕಿ ಬ್ಯಾನರ್‌ ಕಟ್ಟುವ ವಿಚಾರವನ್ನು ನೆಪವಾಗಿಸಿಕೊಂಡು ಬಳ್ಳಾರಿಯಲ್ಲಿ ನಡೆದ ಗಲಭೆ ಪ್ರಕರಣ ಕಾಂಗ್ರೆಸ್ ಸರ್ಕಾರದ ಉದ್ದೇಶಿತ ಹಾಗೂ ಪೂರ್ವನಿಯೋಜಿತ ಪಿತೂರಿಯಾಗಿದೆ. ಈ ಗಲಭೆಯ ಹಿಂದಿರುವ ನಿಜವಾದ ಕಾರಣಗಳನ್ನು ಬಯಲಿಗೆ ತರುವ ಸಲುವಾಗಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರು ಯಾರೇ ಆಗಿರಲಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲೇಬೇಕು ಎಂದು ಎಂದು ಶಾಸಕ ಸಿಮೆಂಟ್ ಮಂಜುನಾಥ್ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಗಲಭೆ ನಡೆದ ಘಟನೆಯಿಂದ ಕೇವಲ ಒಂದು ದಿನದ ಹಿಂದಷ್ಟೇ ಅಧಿಕಾರ ಸ್ವೀಕರಿಸಿದ್ದ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮಾನತು ಮಾಡಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಯಾರೋ ಮಾಡಿದ ತಪ್ಪಿಗೆ ಅಮಾಯಕ ಅಧಿಕಾರಿಯನ್ನು ಬಲಿಯಾಗಿಸುವುದು ಅತ್ಯಂತ ಅನ್ಯಾಯಕರ ಹಾಗೂ ನಿರಾಶಾಜನಕ ಸಂಗತಿ ಎಂದು ಅವರು ಹೇಳಿದರು. ಗಲಭೆಯ ಸಂಪೂರ್ಣ ಹೊಣೆಗಾರಿಕೆಯನ್ನು ಒಬ್ಬ ಅಧಿಕಾರಿಯ ಮೇಲೆ ಹೊರಿಸುವುದು ಸರಿಯಲ್ಲ ಎಂದರು.ಈ ಘಟನೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಗುರಿಯಾಗಿಸಿಕೊಂಡು ಸೃಷ್ಠಿಸಲಾದ ರಾಜಕೀಯ ದ್ವೇಷದ ಫಲಿತಾಂಶ ಎಂದು ಶಾಸಕ ಮಂಜುನಾಥ್ ಆರೋಪಿಸಿದರು. ಅವರ ವಿರುದ್ಧ ಇರುವ ವೈಯಕ್ತಿಕ ದ್ವೇಷವೇ ಗಲಭೆಗೆ ಕಾರಣವಾಗಿದೆ. ಅಲ್ಲದೆ, ಗಲಭೆಯ ನಂತರವೂ ಕೆಲವರು ಪ್ರಚೋದನಾತ್ಮಕ ಭಾಷಣಗಳ ಮೂಲಕ ಸಮಾಜದಲ್ಲಿ ಉದ್ವಿಗ್ನತೆ ಹೆಚ್ಚಿಸುವ ಕೆಲಸ ಮಾಡಿದ್ದಾರೆ ಎಂದು ದೂರಿದರು.ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನವನ್ನು ಉಲ್ಲೇಖಿಸಿದ ಅವರು, ವಿಪಕ್ಷಗಳಿಗೆ ಸಮರ್ಪಕವಾಗಿ ಚರ್ಚೆ ನಡೆಸಲು ಅವಕಾಶ ನೀಡದೇ ದ್ವೇಷ ಭಾಷಣ ತಡೆ ಕಾಯ್ದೆಯನ್ನು ಮಂಡಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ ಎಂದು ಟೀಕಿಸಿದರು. ದ್ವೇಷ ಭಾಷಣದ ವಿರುದ್ಧ ಕ್ರಮ ಕೈಗೊಳ್ಳುವುದಾದರೆ, ಮೊದಲು ಅಧಿವೇಶನದಲ್ಲೇ ದ್ವೇಷ ಭಾಷಣ ಮಾಡಿ ಕಾಯ್ದೆಯನ್ನು ಉಲ್ಲಂಘಿಸಿದ ಸಚಿವ ಪ್ರಿಯಾಂಕ ಖರ್ಗೆ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಜೊತೆಗೆ ಜನಾರ್ದನ ರೆಡ್ಡಿ ಅವರ ಮನೆ ಮುಂದೆ ಗಲಭೆ ಸೃಷ್ಟಿಸಿದ ಶಾಸಕ ಭರತ್ ರೆಡ್ಡಿ ಅವರ ಮೇಲೂ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಒತ್ತಾಯಿಸಿದರು.

ಸರ್ಕಾರ ಅಧಿಕಾರದಲ್ಲಿದೆ ಎಂಬ ಕಾರಣಕ್ಕೆ ವಿರೋಧ ಪಕ್ಷದ ನಾಯಕರ ಮೇಲೆ ದೌರ್ಜನ್ಯ ನಡೆಸುವುದು ಸರಿಯಲ್ಲ. ಇಂತಹ ದಬ್ಬಾಳಿಕೆ ರಾಜಕಾರಣಕ್ಕೆ ಭಾರತೀಯ ಜನತಾ ಪಾರ್ಟಿಯ ಯಾವುದೇ ಶಾಸಕರು ಜಗ್ಗುವುದಿಲ್ಲ ಎಂದು ಎಸ್. ಮಂಜುನಾಥ್ ಸ್ಪಷ್ಟಪಡಿಸಿದರು. ಕಾನೂನು ಎಲ್ಲರಿಗೂ ಸಮಾನವಾಗಿರಬೇಕು. ರಾಜಕೀಯ ಪ್ರಭಾವ ಬಳಸಿ ತಪ್ಪಿತಸ್ಥರನ್ನು ರಕ್ಷಿಸುವ ಪ್ರಯತ್ನ ನಡೆಯಬಾರದು ಎಂದು ಎಚ್ಚರಿಸಿದರು. ಜನಾರ್ದನ ರೆಡ್ಡಿ ಅವರ ವಿರುದ್ಧದ ದ್ವೇಷದಿಂದ ಗಲಭೆ ಸೃಷ್ಟಿಸಿ, ನಂತರವೂ ಸಮಾಜದಲ್ಲಿ ಕಿಚ್ಚು ಹಚ್ಚುವಂತಹ ಭಾಷಣ ಮಾಡಿದ ಎಲ್ಲರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಇದರಿಂದ ಮಾತ್ರ ರಾಜ್ಯದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯ ಎಂದು ಶಾಸಕ ಮಂಜುನಾಥ್ ಅಭಿಪ್ರಾಯಪಟ್ಟರು.

ಇದೇ ವೇಳೆ ಬಿಜೆಪಿ ಮುಖಂಡ ಚನ್ನಂಗಿಹಳ್ಳಿ ಶ್ರೀಕಾಂತ್ ಇತರರು ಉಪಸ್ಥಿತರಿದ್ದರು.