ಸಾರಾಂಶ
ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಗ್ರಂಥಾಲಯದ ಅಟೆಂಡರ್ ಬಾಲಚಂದ್ರ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕು.
ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಗ್ರಂಥಾಲಯದ ಅಟೆಂಡರ್ ಬಾಲಚಂದ್ರ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ವಿಶ್ವವಿದ್ಯಾಲಯದ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದ ಗ್ರಂಥಾಲಯದ ಅಟೆಂಡರ್ ಬಾಲಚಂದ್ರ ಡೆತ್‌ನೋಟ್ ಬರೆದು ಕಲಬುರಗಿಯ ಸಮೀಪದಲ್ಲಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಹಿನ್ನೆಲೆಯಲ್ಲಿ ಬಾಲಚಂದ್ರ ಅವರ ಪತ್ನಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮೋಹನ್‌ದಾಸ್ ಬಳಿ ಬಾಲಚಂದ್ರ ಮೂರು ವರ್ಷಗಳ ಹಿಂದೆ ₹1 ಲಕ್ಷ ಸಾಲ ಮಾಡಿದ್ದರು. ಈ ಮೊತ್ತಕ್ಕೆ ಬಡ್ಡಿ ಸೇರಿ ₹3 ಲಕ್ಷ ಆಗಿದೆ. ಮೇರಿ ಎಂಬುವವರ ಬಳಿ ಚೀಟಿಯು ಸಹ ಹಾಕಿಸಿದ್ದು, ಚೀಟಿಯ ಹಣವನ್ನು ಮೋಹನ್‌ದಾಸ್ ವಸೂಲಿ ಮಾಡಿಕೊಂಡಿದ್ದಾರೆ. ಅಲ್ಲದೆ, ಉಳಿದ ಸಾಲದ ಮೊತ್ತವನ್ನು ತೀರಿಸುವಂತೆ ಕಿರುಕುಳ ನೀಡಿದ್ದಾರೆ. ಇದರಿಂದ ಮಾನಸಿಕವಾಗಿ ನೊಂದ ಬಾಲಚಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಟೆಂಡರ್ ಬಾಲಚಂದ್ರ ಅವರಿಗೆ ಮಾನಸಿಕ ಹಿಂಸೆ ನೀಡಿ ಅವರ ಸಾವಿಗೆ ಮೂಲ ಕಾರಣರಾದ ಮೋಹನ್‌ದಾಸ್ ಅವರನ್ನು ಕೂಡಲೇ ಅಮಾನತ್ತು ಮಾಡಬೇಕು ಎಂದು ವಿದ್ಯಾರ್ಥಿ ಮುಖಂಡರು ಆಗ್ರಹಿಸಿದರು.ಎಬಿವಿಪಿಯ ರಾಜ್ಯ ಸಹ ಕಾರ್ಯದರ್ಶಿ ಮಾತನಾಡಿ, ಮೋಹನ್‌ದಾಸ್ ಎಂಬಾತ ಪವಿತ್ರವಾದ ವಿಶ್ವವಿದ್ಯಾಲಯದಲ್ಲಿ ಬಡ್ಡಿ ವ್ಯವಹಾರ ಮಾಡಿಕೊಂಡು, ಒಬ್ಬ ಅಮಾಯಕನ ಸಾವಿಗೆ ಕಾರಣರಾಗಿದ್ದಾರೆ. ಈತನನ್ನು ಕೂಡಲೇ ಅಮಾನತು ಮಾಡಬೇಕು. ಇಲ್ಲದೇ ಹೋದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಅರವಿಂದ್, ಕಾರ್ಯಕರ್ತರಾದ ದಿಲೀಪ್, ದರ್ಶನ್, ಆದರ್ಶ, ಮಾರುತಿ, ಬಸವ, ನಗರ ಸಂಘಟನಾ ಕಾರ್ಯದರ್ಶಿ ಟಿ.ಭರತ್, ಗಂಗಾಧರ ಸೇರಿದಂತೆ ಸಂಘಟನೆಯ ಜಿಲ್ಲಾ ಪ್ರಮುಖರು ಉಪಸ್ಥಿತರಿದ್ದರು. ವಿಶ್ವವಿದ್ಯಾಲಯದ ಕುಲಸಚಿವ ರುದ್ರೇಶ್ ವಿದ್ಯಾರ್ಥಿ ಮುಖಂಡರಿಂದ ಮನವಿ ಸ್ವೀಕರಿಸಿದರು.