ಸಾರಾಂಶ
ಬಳ್ಳಾರಿ: ಇಲ್ಲಿನ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದ ಮಾಜಿ ಬುಡಾ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ, ಕಳೆದ ಎರಡು ವರ್ಷಗಳಲ್ಲಿ ಬುಡಾದಲ್ಲಿರುವ ನಡಾವಳಿಗಳು ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದೂವರೆಯಿಂದ ಎರಡು ವರ್ಷಗಳಲ್ಲಿ ಬುಡಾದಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿದೆ. ನಿಯಮಗಳನ್ನು ಮೀರಿ ಏಕನಿವೇಶನಗಳ ಮಾರಾಟಕ್ಕೆ ಆಸ್ಪದ ನೀಡಲಾಗಿದೆ. ದೊಡ್ಡ ಜಮೀನುಗಳನ್ನು ತುಂಡು ತುಂಡಾಗಿಸಿ ಏಕ ನಿವೇಶನವಾಗಿ ಮಾಡಿ ಮಂಜೂರು ಮಾಡುವ ದಂಧೆ ವ್ಯಾಪಕವಾಗಿ ನಡೆದಿದೆ. ಏಕನಿವೇಶನಗಳ ಮಂಜೂರು ಒಂದೆರಡಲ್ಲ; ಲೆಕ್ಕವಿಲ್ಲದಷ್ಟಾಗಿವೆ ಎಂದು ದೂರಿದರು.ಬುಡಾ ಕಚೇರಿ ಸಂಪೂರ್ಣ ವ್ಯಾಪಾರೀಕರಣಗೊಂಡಿದ್ದು, ಎರಡು ವರ್ಷಗಳಲ್ಲಾದ ನಡವಳಿಗಳ ಬಗ್ಗೆ ತನಿಖೆಯಾಗಬೇಕು. ಆಗ ಎಲ್ಲವೂ ಹೊರ ಬೀಳಲಿದೆ. ಬುಡಾ ಕಚೇರಿ ಎಷ್ಟರ ಮಟ್ಟಿಗೆ ಭ್ರಷ್ಟಾಚಾರದ ತಾಣವಾಗಿದೆ ಎಂಬುದಕ್ಕೆ ಬುಡಾ ಆಯುಕ್ತ ರಮೇಶ್ ವಟಗಲ್, ಇತರ ಅಧಿಕಾರಿಗಳು ಲೋಕಾಯುಕ್ತರ ಬಲೆಗೆ ಬಿದ್ದ ಪ್ರಕರಣವೇ ಸಾಕ್ಷಿ ಎಂದು ಹೇಳಿದರು.
ಬುಡಾದ ಆದಾಯಕ್ಕೆ ಕತ್ತರಿ ಬೀಳಲು ಅಧಿಕಾರಿಗಳೇ ಶಾಮೀಲಾಗಿರುವುದು ಕಂಡು ಬಂದಿದೆ. ಬುಡಾದ ಆದಾಯ ನಷ್ಟವಾಗಲು ಅಧಿಕಾರಿಗಳೇ ನೇರವಾಗಿ ಭಾಗಿಯಾಗಿದ್ದಾರೆ. ಸಿಎ ಸೈಟ್, ಪಾರ್ಕ್, ಅಭಿವೃದ್ಧಿ ಶುಲ್ಕದಿಂದ ಬರುವ ಆದಾಯವನ್ನು ಅಧಿಕಾರಿಗಳೇ ಕತ್ತರಿ ಹಾಕಿದ್ದಾರೆ ಎಂದರು.ಬುಡಾ ಆಯುಕ್ತರಾದವರು ಪಳಗಿರುತ್ತಾರೆ. ಇವರೇ ಅಧ್ಯಕ್ಷರನ್ನು ದಾರಿ ತಪ್ಪಿಸುತ್ತಾರೆ. ಅಧ್ಯಕ್ಷರಾದವರು ಎಲ್ಲವನ್ನೂ ಓದಿ ತಿಳಿದು ಸಹಿ ಮಾಡಬೇಕು. ಆದರೆ, ಬುಡಾ ಹೇಗಾಗಿದೆ ಎಂದರೆ "ತಿಂಗಳಿಗೆ ಒಂದಿಷ್ಟು ಕೊಟ್ಟುಬಿಡಿ; ನೀವೇನಾದ್ರೂ ಮಾಡಿಕೊಳ್ಳಿ " ಎಂದು ಹೇಳುವ ಅಧ್ಯಕ್ಷರೇ ಹೆಚ್ಚಾಗಿರುವುದರಿಂದ ಅಧಿಕಾರಿಗಳು ಅಕ್ರಮವಾಗಿ ಹಣ ಮಾಡಿಕೊಳ್ಳಲು ದೊಡ್ಡ ಅವಕಾಶವಾಗಿದೆ ಎಂದು ದೂರಿದರು.
ಈ ಹಿಂದಿನ ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಲಾಗಿತ್ತು. ಒಂದೂವರೆ ವರ್ಷವಾದರೂ ಅರ್ಜಿ ಕಡೆ ತಿರುಗಿ ನೋಡಿಲ್ಲ. ಲೋಕಾಯುಕ್ತರಿಗೆ ಈ ಹಿಂದಿನ ಬುಡಾ ಆಯುಕ್ತ ರಮೇಶ್ ತಪ್ಪು ಮಾಹಿತಿ ನೀಡಿ, ಫೈಲ್ ಕ್ಲೋಸ್ ಮಾಡಿಸಿದ್ದಾರೆ. ಫೈಲ್ ಕ್ಲೋಸ್ ಮಾಡಿದರೆ ಬಿಡುವುದಿಲ್ಲ. ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ವರೆಗೆ ನಾನು ಹೋರಾಟ ನಡೆಸುತ್ತೇನೆ ಎಂದು ಹೇಳಿದರು.ಕಳೆದ ಎರಡು ವರ್ಷಗಳಲ್ಲಿ ಬುಡಾದಲ್ಲಾದ ಏಕನಿವೇಶನ ಮಂಜೂರು ಸೇರಿ ವಿವಿಧ ಕೇಸುಗಳ ದಾಖಲೆಗಳ ಸಮೇತ ಲೋಕಾಯುಕ್ತಗೆ ದೂರು ನೀಡಲಾಗಿದೆ. ಮುಂದಿನ ವಾರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನು ಭೇಟಿ ಮಾಡಲಾಗುವುದು ಎಂದರು.
ಎನ್ಎಂಡಿಸಿ ಕಾರ್ಖಾನೆ ಸ್ಥಾಪನೆಯಾಗಲಿ: ಜಿಲ್ಲೆಯಲ್ಲಿ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ ಕೈಗಾರಿಕೆ ಸ್ಥಾಪಿಸಬೇಕು. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು. ಈ ಕೈಗಾರಿಕೆ ಸ್ಥಾಪಿಸಿದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಲಿದೆ. ಖಾಸಗಿ ಕಾರ್ಖಾನೆ ಜಿಂದಾಲ್ ಇದ್ದು, ಸರ್ಕಾರಿ ಸ್ವಾಮ್ಯದ ಕಾರ್ಖಾನೆ ಸ್ಥಾಪನೆಯಾಗುವುದರಿಂದ ಈ ಭಾಗದ ಪ್ರಗತಿಗೆ ಅನುಕೂಲವಾಗಲಿದೆ ಎಂದು ನಾರಾ ಪ್ರತಾಪ ರೆಡ್ಡಿ ತಿಳಿಸಿದರು.