13 ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜನೆ

| Published : Jul 08 2024, 12:32 AM IST

ಸಾರಾಂಶ

ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಜೊತೆಗೆ ನ್ಯಾಯಾಲಯಕ್ಕೆ ದಾಖಲಾಗುವ ಮುನ್ನ ಅಂದರೆ ವ್ಯಾಜ್ಯಪೂರ್ವ ಪ್ರಕರಣಗಳು (ಬ್ಯಾಂಕ್ ವಸೂಲಾತಿ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ಕಾರ್ಮಿಕ ವಿವಾದ ಪ್ರಕರಣಗಳು) ಇಂತಹ ಪ್ರಕರಣಗಳಿಗೆ ಉಭಯ ಪಕ್ಷಗಾರರಿಗೆ ನೋಟಿಸ್ ನೀಡಿ ಕರೆಸಿ, ಪ್ರಾಧಿಕಾರದ ವತಿಯಿಂದ ಪೂರ್ವಭಾವಿ ಬೈಠೆಕ್ ನಡೆಸಿ ಅದಾಲತ್ ನಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಜುಲೈ 13ರಂದು ರಾಷ್ಟ್ರೀಯ ಲೋಕ ಅದಾಲತ್ ಅನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು, ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶ ಆನಂದ್ ತಿಳಿಸಿದರು.

ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ನ್ಯಾಯಾಧೀಶರು, ಜುಲೈ 13ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಲೋಕ ಅದಾಲತ್ ನಡೆಯಲಿದೆ ಎಂದರು.

ಲೋಕ ಅದಾಲತ್ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಪೂರ್ವಭಾವಿ ಬೈಠಕ್‌ಗಳನ್ನು ನಡೆಸಲಾಗಿದೆ. ಆಸ್ತಿ ವಿವಾದಗಳನ್ನು ಒಳಗೊಂಡಂತೆ ಸಿವಿಲ್ ವ್ಯಾಜ್ಯಗಳು, ಮೋಟಾರು ವಾಹನಗಳ ಪ್ರಕರಣಗಳು, ರಾಜೀ ಆಗಬಹುದಾದಂತಹ ಕ್ರಿಮಿನಲ್ ಪ್ರಕರಣಗಳನ್ನು ಮತ್ತು ಚೆಕ್ ಬೌನ್ಸ್ ಪ್ರಕರಣಗಳನ್ನು ರಾಜೀಗೆ ತೆಗೆದುಕೊಂಡು ಆಯಾ ನ್ಯಾಯಾಲಯಗಳಲ್ಲಿ ಜನತಾ ನ್ಯಾಯಾಲಯಗಳನ್ನು ಮಾಡಿ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಪ್ರಯತ್ನ ಮಾಡಲಾಗಿದೆ ಎಂದರು.

ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಜೊತೆಗೆ ನ್ಯಾಯಾಲಯಕ್ಕೆ ದಾಖಲಾಗುವ ಮುನ್ನ ಅಂದರೆ ವ್ಯಾಜ್ಯಪೂರ್ವ ಪ್ರಕರಣಗಳು (ಬ್ಯಾಂಕ್ ವಸೂಲಾತಿ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ಕಾರ್ಮಿಕ ವಿವಾದ ಪ್ರಕರಣಗಳು) ಇಂತಹ ಪ್ರಕರಣಗಳಿಗೆ ಉಭಯ ಪಕ್ಷಗಾರರಿಗೆ ನೋಟಿಸ್ ನೀಡಿ ಕರೆಸಿ, ಪ್ರಾಧಿಕಾರದ ವತಿಯಿಂದ ಪೂರ್ವಭಾವಿ ಬೈಠೆಕ್ ನಡೆಸಿ ಅದಾಲತ್ ನಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು. ಇಂತಹ ಪ್ರಕರಣಗಳಿಗೆ ನ್ಯಾಯಾಲಯಕ್ಕೆ ಶುಲ್ಕ ಪಾವತಿಸುವ ಅವಶ್ಯಕತೆ ಇಲ್ಲ. ವಕೀಲರ ಮುಖಾಂತರ ಅಥವಾ ಖುದ್ದಾಗಿ ಪ್ರಾಧಿಕಾರಕ್ಕೆ ಭೇಟಿ ನೀಡಿ ಪ್ರಕರಣವನ್ನು ರಾಜೀ ಮಾಡಿಕೊಳ್ಳಬಹುದು ಎಂದು ಹೇಳಿದರು.ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ 2024-25 ನೇ ಸಾಲಿನ ಆಸ್ತಿ ತೆರಿಗೆ ಪಾವತಿಗೆ ಏಪ್ರಿಲ್ ತಿಂಗಳಲ್ಲಿ ನೀಡಲಾಗುತ್ತಿರುವ ಶೇ. 5% ರಷ್ಟು ರಿಯಾಯಿತಿಯನ್ನು ಜುಲೈ 31 ರವರೆಗೆ ವಿಸ್ತರಿಸಲಾಗಿದೆ. ಸಾರ್ವಜನಿಕರು ತಪ್ಪದೇ ತಮ್ಮ ಆಸ್ತಿ ತೆರಿಗೆ ಪಾವತಿಸಿ ಎಂದು ಸಲಹೆ ನೀಡಿದರು.

ಅಂಗನವಾಡಿ ಕೇಂದ್ರಗಳು ಅಭಿವೃದ್ಧಿಯಾಗಲಿ:

ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳು ಅಭಿವೃದ್ಧಿಯಾಗಬೇಕು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೈ ಜೋಡಿಸಬೇಕು. ಖಾಸಗಿ ಪ್ಲೇ ಹೋಂ, ಪೂರ್ವ ಪ್ರಾಥಮಿಕ ಶಾಲೆಗಳಿಗೆ ಹೋಲಿಕೆ ಮಾಡಿದರೆ ಸರ್ಕಾರಿ ಅಂಗನವಾಡಿ ಕೇಂದ್ರಗಳು ಅಭಿವೃದ್ಧಿಯಲ್ಲಿ ಹಿಂದೆ ಉಳಿದಿವೆ ಎಂದರು.

ಜಿಲ್ಲೆಯಲ್ಲಿ ಹೆಚ್ಚಾಗಿ ಕೃಷಿಕರು ಇರುವುದರಿಂದ ಮಕ್ಕಳನ್ನು ಸರ್ಕಾರಿ ಅಂಗನವಾಡಿ ಕೇಂದ್ರಗಳಿಗೆ ಕಳುಹಿಸುತ್ತಾರೆ‌. ಅಂಗನವಾಡಿ ಕೇಂದ್ರಗಳು ಅಭಿವೃದ್ಧಿಯಾಗಬೇಕು, ಮಕ್ಕಳಿಗೆ ಪೌಷ್ಟಿಕ ಆಹಾರ, ಸ್ವಚ್ಛವಾದ ವಾತಾವರಣವನ್ನು ಸೃಷ್ಟಿಸಬೇಕು. ಸರ್ಕಾರಿ ಅಂಗನವಾಡಿ ಕೇಂದ್ರಗಳು ಯಾವುದರಲ್ಲೂ ಕಮ್ಮಿ ಇಲ್ಲ ಎಂಬಂತೆ ಇರಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 2558 ಅಂಗನವಾಡಿಗಳಲ್ಲಿ ಸ್ವಂತ ಕಟ್ಟಡದಲ್ಲಿ 1769, ಪಂಚಾಯತಿ ಕಟ್ಟಡ 31, ಸಮುದಾಯ ಕಟ್ಟಡ 66, ಬಾಡಿಗೆ ಕಟ್ಟಡ 222, ಶಾಲಾ ಕಟ್ಟಡ 311, ಬಾಡಿಗೆ ರಹಿತ ಕಟ್ಟಡಗಳು 157 ಕಾರ್ಯನಿರ್ವಹಿಸುತ್ತಿವೆ. ಜೂನ್ 2024 ರಿಂದ ಜಿಲ್ಲೆಯ ಸುಮಾರು 20 ಅಂಗನವಾಡಿಗಳಿಗೆ ಭೇಟಿ ನೀಡಿದ್ದು, ಅವುಗಳಲ್ಲಿ ಕೆಲವೊಂದು ಸ್ವಂತ ಕಟ್ಟಡ, ಬಾಡಿಗೆ ಕಟ್ಟಡ ಹಾಗೂ ಕೆಲವೊಂದು ಸರ್ಕಾರಿ ಶಾಲಾ ಕಾಂಪೌಂಡ್ ನಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.

ಕೆಲವು ಅಂಗನವಾಡಿಗಳಲ್ಲಿ ಸರ್ಕಾರದಿಂದ ನೀಡುವ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಡಲು ಸುಸಜ್ಜಿತ ವ್ಯವಸ್ಥೆ ಇಲ್ಲ. ಅಡುಗೆ ಮಾಡಲು ಉಪಯೋಗಿಸುವ ಪಾತ್ರೆಗಳು ಹಳೆದಾಗಿದೆ. ಇವುಗಳನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮಕ್ಕಳಿಗೆ ಅನ್ನ, ಬೇಳೆ ಸಾಂಬಾರು, ಮಿಲೆಟ್ ಲಾಡು, ಗೋಧಿ ನುಚ್ಚಿನ ಉಪ್ಪಿಟ್ಟು ಹಾಗೂ ಮೊಟ್ಟೆ ನೀಡುತ್ತಿದ್ದಾರೆ. ಬಾಣಂತಿಯರಿಗೂ ಸಹ ಮೊಟ್ಟೆ ನೀಡಲಾಗುತ್ತಿದೆ. ಅಂಗನವಾಡಿಗಳ ಮೂಲ ಸೌಕರ್ಯಗಳನ್ನು ಹಾಗೂ ಶುಚಿತ್ವವನ್ನು ಕಾಪಾಡಿಕೊಂಡರೆ ಹೆಚ್ಚು ಮಕ್ಕಳನ್ನು ಅಂಗನವಾಡಿಗೆ ಸೇರಿಸಲು ಪೋಷಕರು ಆಸಕ್ತಿ ತೋರುವ ಸಾಧ್ಯತೆ ಇರುತ್ತದೆ. ನಿರ್ಮಾಣ ಹಂತದಲ್ಲಿರುವ ಅಂಗನವಾಡಿಗಳ ಕಾಮಗಾರಿಯನ್ನು ವಿಳಂಬ ಮಾಡದೆ ಪೂರ್ಣಗೊಳಿಸಲು ತಿಳಿಸಲಾಗಿದೆ ಎಂದು ಹೇಳಿದರು