ಸಾರಾಂಶ
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳು ಬಯಲಾಟದ ತವರೂರು. ಇಲ್ಲಿ ಬಯಲಾಟದ ಹಲವಾರು ಕಲಾವಿದರು, ಕವಿಗಳು ಆಗಿ ಹೋಗಿದ್ದಾರೆ.
ಎರಡು ದಿನಗಳ ವಿಚಾರ ಸಂಕಿರಣ, ಬಯಲಾಟ ಪ್ರದರ್ಶನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹೊಸಪೇಟೆಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳು ಬಯಲಾಟದ ತವರೂರು. ಇಲ್ಲಿ ಬಯಲಾಟದ ಹಲವಾರು ಕಲಾವಿದರು, ಕವಿಗಳು ಆಗಿ ಹೋಗಿದ್ದಾರೆ. ಹಾಗೆಯೇ ಬಯಲಾಟದ ನಾಂದಿ ಪದಗಳನ್ನು ಮುಖ್ಯವಾಗಿ ಇಲ್ಲಿನ ಕವಿಗಳು ಬರೆಯುತ್ತಿದ್ದರು ಮತ್ತು ಹಾಡುತ್ತಿದ್ದರು ಎಂದು ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಸಂಸ್ಕೃತಿ ಚಿಂತಕ ಡಾ. ರಹಮತ್ ತರೀಕೆರೆ ಹೇಳಿದರು.
ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆ, ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಟಕ ವಿಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವವಿದ್ಯಾಲಯದ ಭುವನ ವಿಜಯ ಕಟ್ಟಡದಲ್ಲಿ ಸೋಮವಾರ ನಡೆದ ಕರ್ನಾಟಕ ಬಯಲಾಟಗಳ ಸಂಶೋಧನೆ ಹೊಸ ಸಾಧ್ಯತೆಗಳು ಎಂಬುದರ ಕುರಿತ ಎರಡು ದಿನಗಳ ವಿಚಾರ ಸಂಕಿರಣ ಮತ್ತು ಬಯಲಾಟ ಪ್ರದರ್ಶನ ಕಾರ್ಯಕ್ರಮದಲ್ಲಿ ಆಶಯನುಡಿಗಳನ್ನಾಡಿದ ಅವರು, ಬಯಲಾಟ ಎನ್ನುವುದು ಹವ್ಯಾಸಿ ರಂಗಭೂಮಿ ಮತ್ತು ಹಳ್ಳಿಯ ಸಾಂಸ್ಕೃತಿಕ ಕಲೆ ಆಗಿದೆ. ಈ ಕಲೆಯನ್ನು ಈಗಲೂ ಉಳಿಸಿ ಬೆಳೆಸಿಕೊಂಡು ಹೋಗಲಾಗುತ್ತಿದೆ. ಈಗಲೂ ಈ ಕಲೆಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರೇಕ್ಷಕರು ಇದ್ದಾರೆ. ಜೊತೆಗೆ ಕಲಾವಿದರೂ ಇದ್ದಾರೆ ಎಂದರು.ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ. ಕೆ.ಆರ್. ದುರ್ಗಾದಾಸ ಮಾತನಾಡಿ, ಬಯಲಾಟ ಪ್ರದರ್ಶನಗಳಲ್ಲಿ ಯಾವುದೇ ರೀತಿಯ ಬಡವ-ಶ್ರೀಮಂತ, ಮೇಲು-ಕೀಳು ಎಂದು ಭಾವಿಸದೆ ಕಲಾವಿದರ ಪ್ರತಿಭೆಯನ್ನು ಗುರುತಿಸುವುದು ಮತ್ತು ಎಲ್ಲರೂ ಒಂದೇ ಎನ್ನುವುದೇ ಮುಖ್ಯ ತತ್ವವಾಗಿದೆ ಎಂದರು.
ಬಯಲಾಟ ಎನ್ನುವುದು ಇಡೀ ಊರನ್ನೇ ಆವರಿಸಿಕೊಂಡು ಬಿಟ್ಟಿರುತ್ತದೆ. ಇಲ್ಲಿ ಮುಖ್ಯವಾಗಿ ರೈತಾಪಿ ಜನ ಮತ್ತು ಬಡವರು ಹೆಚ್ಚಾಗಿ ಭಾಗವಹಿಸುತ್ತಾರೆ. ವ್ಯಕ್ತಿಯಲ್ಲಿ ಬೇರೊಂದು ರೀತಿಯ ಸಂಚಲನ ಮೂಡಿಸುವ ಶಕ್ತಿಯನ್ನು ಹೊಂದಿರುತ್ತದೆ. ಆತನ ದೈನಂದಿನ ಮಾತುಗಳಿಗಿಂತ ಪ್ರದರ್ಶನದಲ್ಲಿ ಮಾತಿನ ಶಕ್ತಿ ಹೆಚ್ಚಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಬಡವರು ಶ್ರಮಿಕರು ತಮ್ಮ ಜ್ಞಾನವನ್ನು ಪ್ರದರ್ಶಿಸುವ ಒಂದು ವೇದಿಕೆಯಾಗಿದೆ. ಬಯಲಾಟಗಳು ಕಲಾವಿದರಿಗೆ ಆತ್ಮಸ್ಥೈರ್ಯ ತುಂಬುತ್ತವೆ. ಬಯಲಾಟ ಪ್ರದರ್ಶನದಲ್ಲಿ ಜನರು ತಮ್ಮ ತಮ್ಮಲ್ಲಿ ಸಂಭಾಷಣೆ ಮಾಡುವ ಕ್ರಿಯೆಯನ್ನು ಉಂಟುಮಾಡುತ್ತದೆ. ಹಳ್ಳಿಯ ಕಡೆಗಳಲ್ಲಿ ಹಿಂದುಳಿದ ಜಾತಿಯ ಜನರು ಬಯಲಾಟದ ಮೇಷ್ಟ್ರು ಆಗಿರುತ್ತಾರೆ. ಹೀಗಾಗಿ ಬಯಲಾಟ ಎಂಬುದು ಯಾವುದೇ ರೀತಿಯ ರಾಜಕೀಯಕ್ಕೆ ಮತ್ತು ಯಾವುದೇ ಒಂದು ಸಮುದಾಯಕ್ಕೆ ಒಳಪಟ್ಟಿರುವುದಿಲ್ಲ ಎಂದರು.ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖಸ್ಥರು, ಪ್ರಾಧ್ಯಾಪಕರು, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಬಯಲಾಟದ ಕಲಾವಿದರು ಇದ್ದರು. ಸುಮಾ ಕಮ್ಮಾರ, ಅರುಣ್ ಜೋಳದ ಕೂಡ್ಲಿಗಿ, ಸತೀಶಗೌಡ ಬಿ., ನಿರ್ವಹಿಸಿದರು.