ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಬೆಳ್ಳೂರು ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಅ.23ರಂದು ಚುನಾವಣೆ ನಡೆಯಲಿದೆ. ಸ್ಪಷ್ಪ ಬಹುಮತ ಹೊಂದಿರುವ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತವಾಗಿದೆ.13 ಮಂದಿ ಸದಸ್ಯ ಬಲ ಹೊಂದಿರುವ ಬೆಳ್ಳೂರು ಪಟ್ಟಣ ಪಂಚಾಯ್ತಿಯಲ್ಲಿ ಕಾಂಗ್ರೆಸ್ ಬೆಂಬಲಿತ 7 ಮಂದಿ, ಜೆಡಿಎಸ್‌ನ 4 ಮಂದಿ ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಆಪ್ತರಾಗಿರುವ ಮಂಜೇಗೌಡ ಉ.ಲ್ಯಾಬ್ ಮಂಜು ಪಕ್ಷೇತರ ಸದಸ್ಯರಾಗಿ ಆಯ್ಕೆಯಾಗಿದ್ದರೂ ಕೂಡ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ.
ಮತ್ತೋರ್ವ ಪಕ್ಷೇತರ ಸದಸ್ಯ ರಾಮಲಿಂಗಯ್ಯ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ.ಈ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕರ ಒಂದು ಮತ ಹಾಗೂ ಪಕ್ಷೇತರ ಸದಸ್ಯರ ಒಂದು ಮತ ಸೇರಿ ಕಾಂಗ್ರೆಸ್‌ಗೆ 9 ಹಾಗೂ ಸಂಸದರ ಒಂದು ಮತ ಹಾಗೂ ಪಕ್ಷೇತರ ಸದಸ್ಯನ ಒಂದು ಮತ ಸೇರಿದರೆ ಜೆಡಿಎಸ್ ಸಂಖ್ಯಾಬಲ 6 ಕ್ಕೇರಲಿದೆ. ಹೀಗಾಗಿ ಕಾಂಗ್ರೆಸ್ ಬಹಳ ಸುಲಭವಾಗಿ ಅಧಿಕಾರ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಎರಡೂ ಸ್ಥಾನ ಅವಿರೋಧ ಆಯ್ಕೆ!:ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಬೆಳ್ಳೂರಿನ 7ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ಲಕ್ಷ್ಮಮ್ಮ ಮಹೇಶ್ ಹೊರತುಪಡಿಸಿ ಬೇರ್‍ಯಾರು ಅಭ್ಯರ್ಥಿಗಳೇ ಇಲ್ಲ. ಬಿಸಿಎಂ ‘ಎ’ ವರ್ಗಕ್ಕೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ 6ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯ ಮಹಮ್ಮದ್ ಯಾಸೀನ್ ಹೆಸರನ್ನು ಅಂತಿಮಗೊಳಿಸಲಾಗಿದೆ. ಹಾಗಾಗಿ ಎರಡೂ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.
ಜೆಡಿಎಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಪರಿಶಿಷ್ಟ ಜಾತಿಗೆ ಸೇರಿದ ಮಹಿಳಾ ಸದಸ್ಯೆ ಇಲ್ಲ. ಸಂಖ್ಯಾಬಲ ಕಡಿಮೆ ಇದ್ದರೂ ಕೂಡ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಿಂದ ಬಿಸಿಎಂ ‘ಎ’ ವರ್ಗಕ್ಕೆ ಸೇರಿದ ಸದಸ್ಯರೊಬ್ಬರು ನಾಮಪತ್ರ ಸಲ್ಲಿಸುವರೆಂದು ಹೇಳಲಾಗುತ್ತಿದೆ.ಸ್ಪಷ್ಪಬಹುಮತದೊಂದಿಗೆ ಬೆಳ್ಳೂರು ಪಟ್ಟಣ ಪಂಚಾಯ್ತಿಯ ಅಧಿಕಾರ ಕೈ ಪಾಲಾಗುವ ಮುನ್ಸೂಚನೆಯಿಂದ ಮತದಾನದ ಹಕ್ಕು ಹೊಂದಿರುವ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಸಂಸದ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬುಧವಾರ ನಡೆಯುವ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎನ್ನಲಾಗುತ್ತಿದೆ.