ಪರ್ಯಾಯ ಪೀಠಾಧೀಶ, ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ಜ್ಞಾನ ಸತ್ರದ ಅಂಗವಾಗಿ ಸುಧಾಗೀತಾದಿ ಪಾಠಪಂಚಕ ಹಾಗೂ ಮಂಗಲ ಮಹೋತ್ಸವ, ಗುರುವಂದನೆ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಉಡುಪಿ: ಪರ್ಯಾಯ ಪೀಠಾಧೀಶ, ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ಜ್ಞಾನ ಸತ್ರದ ಅಂಗವಾಗಿ ಸುಧಾಗೀತಾದಿ ಪಾಠಪಂಚಕ ಹಾಗೂ ಮಂಗಲ ಮಹೋತ್ಸವ, ಗುರುವಂದನೆ ಕಾರ್ಯಕ್ರಮ ರಾಜಾಂಗಣದಲ್ಲಿ ಶುಕ್ರವಾರ ನಡೆಯಿತು.

ಕಾರ್ಯಕ್ರಮ ಅಂಗವಾಗಿ ಸರ್ವಜ್ಞಪೀಠದಲ್ಲಿ ಶ್ರೀಪಾದರ ಉಪಸ್ಥಿತಿಯಲ್ಲಿ ಶಾಂತಿ ಪಾಠವನ್ನು ಮಾಡಿ ಮೆರವಣಿಗೆಯಲ್ಲಿ ವ್ಯಾಸ ಮೂರ್ತಿಯನ್ನು ತಂದು ರಾಜಾಂಗಣದಲ್ಲಿ ಬೆಳ್ಳಿಯ ಪೀಠದಲ್ಲಿ ಇರಿಸಿ ವಿದ್ಯಾರ್ಥಿಗಳಿಂದ ಅನುವಾದ ಸಮರ್ಪಣೆ ನಡೆಯಿತು. ನಂತರ ವ್ಯಾಸಮೂರ್ತಿಗೆ ಪೂಜೆಯನ್ನು ಮಾಡುವುದರ ಮೂಲಕ ಮಂಗಲೋತ್ಸವವು ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಶಿಷ್ಯರು ಪುತ್ತಿಗೆ ಉಭಯ ಶ್ರೀಗಳಿಗೆ ಗುರುವಂದನೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು, ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥರು, ಹುಣಿಸೆಹೊಳೆ ಕ‍ಣ್ವತೀರ್ಥ ಮಠದ ಶ್ರೀ ವಿದ್ಯಾಕ‍ಣ್ವರಾಜ ತೀರ್ಥರು, ಪುತ್ತಿಗೆ ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥರು ಸಾನಿಧ್ಯ ವಹಿಸಿದ್ದರು. ಶ್ರೀ ಮಠದ ದಿವಾನರಾದ ನಾಗರಾಜ ಆಚಾರ್ಯ ಮತ್ತು ಶ್ರೀಗಳ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯರು ಉಪಸ್ಥಿತರಿದ್ದರು.

ಸಪ್ತೋತ್ಸವಕ್ಕೆ ಚಾಲನೆ: ಶ್ರೀಕೃಷ್ಣಮಠದಲ್ಲಿ ಶುಕ್ರವಾರ ವಾರ್ಷಿಕ ಸಪ್ತೋತ್ಸವವು ಆರಂಭಗೊಂಡಿತು. ಇದರ ಅಂಗವಾಗಿ ಮಧ್ವ ಸರೋವರದಲ್ಲಿ ಆಕರ್ಷಕ ತೆಪ್ಪದಲ್ಲಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ಉತ್ಸವ ಮೂರ್ತಿಯನ್ನಿಟ್ಟು, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ, ಪುತ್ತಿಗೆ ಮಠದ ಕಿರಿಯ ಶ್ರೀಪಾದರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಆರತಿಯನ್ನು ಮಾಡಿದರು.

ನಂತರ ವೈಭವದ ತೆಪ್ಪೋತ್ಸವವು ಜರುಗಿತು. ಆನಂತರ ರಥಬೀದಿಯಲ್ಲಿ ಶ್ರೀ ಕೃಷ್ಣ ಮುಖ್ಯಪ್ರಾಣ ಹಾಗೂ ಶ್ರೀ ಅನಂತೇಶ್ವರ - ಚಂದ್ರಮೌಳೇಶ್ವರ ದೇವರ ಉತ್ಸವ ಮೂರ್ತಿಯನ್ನಿಟ್ಟು ಎರಡು ರಥಗಳ ರಥೋತ್ಸವವು ಅತ್ಯಂತ ವೈಭವದಿಂದ ನಡೆಯಿತು. ಆಕರ್ಷಕ ಸುಡುಮದ್ದು ಪ್ರದರ್ಶನ, ವಾದ್ಯ ಸೇವೆಯೊಂದಿಗೆ ಅತ್ಯಂತ ವೈಭವದಿಂದ ರಥೋತ್ಸವವು ಜರುಗಿತು .