ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್‌ ಪೂಂಜ ಬಂಧನದ ಹೈಡ್ರಾಮಾ!

| Published : May 23 2024, 01:02 AM IST / Updated: May 23 2024, 07:13 AM IST

ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್‌ ಪೂಂಜ ಬಂಧನದ ಹೈಡ್ರಾಮಾ!
Share this Article
  • FB
  • TW
  • Linkdin
  • Email

ಸಾರಾಂಶ

ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್‌ ಪೂಂಜ ಅವರನ್ನು ಬಂಧಿಸಲು ಗರ್ಡಾಡಿ ಗ್ರಾಮದಲ್ಲಿರುವ ಶಾಸಕರ ಮನೆಗೆ ಪೊಲೀಸರು ನೂರಾರು ಸಂಖ್ಯೆಯಲ್ಲಿ ಹೋದಾಗ ಭಾರೀ ಹೈಡ್ರಾಮಾ ನಡೆದ ಪ್ರಸಂಗ ಬುಧವಾರ ನಡೆಯಿತು.

 ಬೆಳ್ತಂಗಡಿ :  ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್‌ ಪೂಂಜ ಅವರನ್ನು ಬಂಧಿಸಲು ಗರ್ಡಾಡಿ ಗ್ರಾಮದಲ್ಲಿರುವ ಶಾಸಕರ ಮನೆಗೆ ಪೊಲೀಸರು ನೂರಾರು ಸಂಖ್ಯೆಯಲ್ಲಿ ಹೋದಾಗ ಭಾರೀ ಹೈಡ್ರಾಮಾ ನಡೆದ ಪ್ರಸಂಗ ಬುಧವಾರ ನಡೆಯಿತು. ಪೊಲೀಸರು ಆಗಮಿಸಿದ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಕಾರ್ಯಕರ್ತರು, ಬಿಜೆಪಿ ಮುಖಂಡರು ಸ್ಥಳದಲ್ಲಿ ಜಮಾಯಿಸಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಪೊಲೀಸರು ಶಾಸಕರಿಗೆ ನೋಟಿಸ್‌ ಕೊಟ್ಟು ಬರಿಗೈಯಲ್ಲಿ ವಾಪಸ್‌ ಹೋಗಬೇಕಾಯಿತು.

ಶಾಸಕರ ಮನೆಯೊಳಗೆ ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ, ಭಾಗೀರಥಿ ಮುರುಳ್ಯ, ಉಮಾನಾಥ ಕೋಟ್ಯಾನ್, ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಸೇರಿ ಹಲವು ಬಿಜೆಪಿ ಮುಖಂಡರು ಹಾಗೂ ಪೊಲೀಸರ ಜತೆಗೆ ಮಾತುಕತೆ, ವಾಗ್ವಾದ ನಡೆದವು. ಕೊನೆಗೆ ಪೊಲೀಸರು ಶಾಸಕರಿಗೆ ನೋಟಿಸ್‌ ನೀಡಿದರು. ನೋಟಿಸ್‌ಗೆ ಐದು ದಿನಗಳಲ್ಲಿ ಉತ್ತರಿಸುವ ಭರವಸೆಯನ್ನು ಶಾಸಕರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಹಿಂತಿರುಗಿದರು.

ಘಟನೆ ಹಿನ್ನೆಲೆ: ರೌಡಿ ಶೀಟರ್ ಶಶಿರಾಜ್ ಶೆಟ್ಟಿ ಬಂಧನ ವಿರೋಧಿಸಿ ಬೆಳ್ತಂಗಡಿ ವಿಕಾಸಸೌಧದ ಎದುರು ಸೋಮವಾರ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಹಾಗೂ ಬೆಳ್ತಂಗಡಿ ಠಾಣಾ ಪೊಲೀಸ್ ನಿರೀಕ್ಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿ ಡಿಜೆ ಹಳ್ಳಿ, ಕೆಜೆ ಹಳ್ಳಿ ಪೊಲೀಸ್ ಠಾಣೆಗೆ ಆದಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆ ಎಂದು ಜೀವಬೆದರಿಕೆ ಒಡ್ಡಿರುವ ಬಗ್ಗೆ ಶಾಸಕ ಹರೀಶ್‌ ಪೂಂಜ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲು ಮನೆಗೆ ಓರ್ವ ಡಿವೈಎಸ್ಪಿ, 3 ಸರ್ಕಲ್‌ ಇನ್ಸ್‌ಪೆಕ್ಟರ್‌ಗಳು, 25 ಎಸ್ಸೈಗಳು, 9 ಬಸ್‌ಗಳಲ್ಲಿ ನೂರಕ್ಕೂ ಹೆಚ್ಚು ಪೊಲೀಸರ ಬೆಟಾಲಿಯನ್ ಬಂದಿದ್ದು, ಸುದ್ದಿ ತಿಳಿದು ಬಿಜೆಪಿ ಕಾರ್ಯಕರ್ತರು ಜಮಾಯಿಸತೊಡಗಿದರು. ಪೊಲೀಸರ ವಿರುದ್ಧ ಗೋಬ್ಯಾಕ್‌ ಎಂದು ಘೋಷಣೆ ಕೂಗಿದರು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಬಿಜೆಪಿ ಮುಖಂಡರು ಮತ್ತು ಸ್ಥಳದಲ್ಲಿದ್ದ ಸರ್ಕಲ್ ಇನ್ಸ್‌ಪೆಕ್ಟರ್‌ ಸುಬ್ಬಪೂರ್ ಮಠ್‌ ಹಾಗೂ ಪಿಎಸ್ಐ ಚಂದ್ರಶೇಖರ್ ಬಂಧನ ಸಾಧ್ಯತೆ ಬಗ್ಗೆ ನಿವಾಸದೊಳಗೆ ಚರ್ಚೆ ನಡೆಸಿದರು. ನೋಟಿಸ್‌ ಕೊಡದೆ ಬಂಧನ ಸರಿಯಲ್ಲ ಎಂದು ಪೊಲೀಸ್‌ ಅಧಿಕಾರಗಳ ಜತೆಗೆ ಬಿಜೆಪಿ ಮುಖಂಡರು ಆಕ್ಷೇಪವೆತ್ತಿದರು.

ವಿಟ್ಲದಿಂದ ನೋಟಿಸ್‌ ಜಾರಿ:

ಅಷ್ಟೊತ್ತಿಗಾಗಲೇ ಶಾಸಕ ಹರೀಶ್ ಪೂಂಜಗೆ ವಿಟ್ಲ ಠಾಣೆ ಇನ್ಸ್‌ಪೆಕ್ಟರ್‌ ನಾಗರಾಜ್ ಮತ್ತು ಸಬ್‌ ಇನ್ಸ್‌ಪೆಕ್ಟರ್‌ ನಂದಕುಮಾರ್‌ ಅವರಿಂದ ನೋಟಿಸ್‌ ಜಾರಿಯಾಯಿತು. ತನಿಖಾಧಿಕಾರಿಗಳ ಜೊತೆ ಠಾಣೆಗೆ ಬರಲು ನೋಟಿಸ್‌ನಲ್ಲಿ ತಿಳಿಸಲಾಗಿತ್ತು. ಆದರೆ ಶಾಸಕರ ಪರ ವಕೀಲರು 3 ದಿನಗಳ ಸಮಯಾವಕಾಶ ಕೋರಿದರು. ಆದರೆ ನೋಟಿಸ್ ಪ್ರಕಾರ ಶಾಸಕರಿಗೆ 1 ಗಂಟೆ ಮಾತ್ರ ಸಮಯಾವಕಾಶ ಎಂದು ಪೋಲಿಸರು ಪಟ್ಟು ಹಿಡಿದರು. ಬಾರದಿದ್ದರೆ ಬಂಧಿಸುವ ಪರೋಕ್ಷ ಸೂಚನೆಯನ್ನು ಪೊಲೀಸರು ನೀಡಿದರು. ಇದನ್ನರಿತ ಕಾರ್ಯಕರ್ತರು ಇನ್ನಷ್ಟು ಪ್ರಕ್ಷುಬ್ಧರಾದರು.

ಜಿಲ್ಲಾ ಬಂದ್‌ ಎಚ್ಚರಿಕೆ:

ಇತ್ತ ಸಂಸದ ನಳಿನ್‌ ಕುಮಾರ್ ಕಟೀಲು ಅವರು ಶಾಸಕರನ್ನು ಬಂಧಿಸಿದರೆ ದ.ಕ. ಜಿಲ್ಲಾ ಬಂದ್ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದರಲ್ಲದೆ , ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇಂಥ ಅದೆಷ್ಟೋ ಕೇಸ್‌ಗಳು ಆಗಿವೆ. ಸ್ವತಃ ನನ್ನ ವಿರುದ್ಧವೂ ಇಂಥ ಕೇಸ್‌ಗಳಿದ್ದರೂ ಬಂಧನ ಆಗಿರಲಿಲ್ಲ. ಕಾನೂನು ಪ್ರಕಾರ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯಲಿ. ಅದು ಬಿಟ್ಟು ಮನೆಗೆ ನುಗ್ಗಿ ನೋಟಿಸ್‌ ಕೊಟ್ಟು ಬಂಧಿಸಲು ಯತ್ನಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಶಕ್ತಿ ಏನೆಂದು ಗೊತ್ತಾಗಿದೆ: ಶಾಸಕ ಪೂಂಜ ಬಿಜೆಪಿಯ ಶಕ್ತಿ ಏನೆಂಬುದು ಇಂದು ಗೊತ್ತಾಗಿದೆ. ಕಾರ್ಯಕರ್ತನಿಗೆ ವಿನಾಕಾರಣ ತೊಂದರೆಯಾದಾಗ ಅದನ್ನು ವಿರೋಧಿಸಲು ಜನ ನನ್ನನ್ನು ಆರಿಸಿದ್ದಾರೆ. ಶಶಿರಾಜ್ ಶೆಟ್ಟಿ ಅವರ ಏಳಿಗೆ ಸಹಿಸದೆ ಪ್ರಕರಣವೊಂದರಲ್ಲಿ ಅವರನ್ನು ಸಿಲುಕಿಸಲಾಗಿದೆ. ಅದನ್ನು ನಾನು ಖಂಡಿಸಿದ್ದೇನೆ. ನಾನು ಅಧಿಕಾರಕ್ಕಾಗಿ ಪೊಲೀಸರಿಗೆ ಬೈದಿಲ್ಲ. ಕಾರ್ಯಕರ್ತರ ಶಕ್ತಿಗಾಗಿ ಬೈದಿದ್ದೇನೆ. ಕಾಂಗ್ರೆಸ್‌ ಸರ್ಕಾರಕ್ಕೆ ನೈತಿಕತೆ ಇಲ್ಲ. ಇಲಾಖೆಯವರ ಮೇಲೆ ಹೆಚ್ಚು ದೌರ್ಜನ್ಯ ಮಾಡಿದವರು, ಅವರ ಮೂಲಕ ಸಮಾಜದ ಮೇಲೆ ದೌರ್ಜನ್ಯ ಮಾಡಿದವರು ಕಾಂಗ್ರೆಸ್‌ನವರು. ಸಿದ್ದರಾಮಯ್ಯನವರು ಪೊಲೀಸ್‌ ಅಧಿಕಾರಿ ಬಿದರಿ ಅವರ ಕಾಲರ್ ಹಿಡಿದಿಲ್ಲವೇ? ಎಂದು ಶಾಸಕ ಹರೀಶ್ ಪೂಂಜ ಪ್ರಶ್ನಿಸಿದರು.

ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ದೂರವಾಣಿ ಮೂಲಕ ಪರಿಸ್ಥಿತಿಯನ್ನು ಆಗಾಗ್ಗೆ ವಿಚಾರಿಸುತ್ತಿದ್ದರು. ಕಾರ್ಯಕರ್ತರ ಶಕ್ತಿಗೆ ಹೆದರು ಪೊಲೀಸರು ಇಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ಶಾಸಕ ಹರೀಶ್‌ ಪೂಂಜ ಹೇಳಿದರು.