ಬೆಳ್ತಂಗಡಿ: ತಾಲೂಕಿನ ಪ್ರಮುಖ ಪೇಟೆಯಾದ ಉಜಿರೆಯಲ್ಲಿನ ಸರ್ಕಲ್ ನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಾಗಿ ತೆರವುಗೊಳಿಸಲಾಗಿದೆ.
ಚಾರ್ಮಾಡಿ, ಧರ್ಮಸ್ಥಳ, ಬೆಳ್ತಂಗಡಿ ಕಡೆಯಿಂದ ಹೋಗುವ ಮತ್ತು ಬರುವ ವಾಹನಗಳು ಸುಲಭವಾಗಿ ಸಂಚರಿಸಲು ಇಲ್ಲಿ ಅನೇಕ ವರ್ಷಗಳ ಹಿಂದಿನಿಂದ ವೃತ್ತಾಕಾರದ ಸರ್ಕಲ್ ಇತ್ತು. ಸುಮಾರು 15 ವರ್ಷಗಳ ಹಿಂದೆ ಈ ವೃತ್ತಾಕಾರದ ಸರ್ಕಲ್ ನ್ನು ತೆರವುಗೊಳಿಸಿ ಬೇರೆ ಬೇರೆ ಭಾಗಗಳಿಂದ ಆಗಮಿಸುವ ವಾಹನಗಳಿಗೆ ಸರ್ಕಲ್ ಪ್ರದೇಶದಲ್ಲಿ ಪ್ರತ್ಯೇಕ ರಸ್ತೆ ನಿರ್ಮಿಸಲಾಯಿತು. ಆದರೆ ಇದು ತೀರಾ ಅವೈಜ್ಞಾನಿಕವಾಗಿ ನಿರ್ಮಾಣವಾದ ಕಾರಣ ವಾಹನ ಸವಾರರು ಪರದಾಡುವ ಜತೆ ಸಾಕಷ್ಟು ಅಪಘಾತಗಳು ಸಂಭವಿಸಿದವು. ಬಳಿಕ ಕಳೆದ ಹತ್ತು ವರ್ಷಗಳ ಹಿಂದೆ ಆ ರಸ್ತೆಗಳನ್ನು ತೆರೆವುಗೊಳಿಸಿ ಅದೇ ಸ್ಥಳದಲ್ಲಿ ಮತ್ತೆ ಸರ್ಕಲ್ ನಿರ್ಮಿಸಲಾಯಿತು. ಇದೀಗ ಆ ಸರ್ಕಲ್ ನ್ನು ತೆರೆವುಗೊಳಿಸಲಾಗಿದೆ.ಉಜಿರೆಯಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಇಲ್ಲದ ಕಾರಣ ಬೇರೆ ಬೇರೆ ಸ್ಥಳಗಳಿಗೆ ಪ್ರಯಾಣಿಸುವ ಬಸ್ ಗಳನ್ನು ಅಲ್ಲಲ್ಲಿ ನಿಲ್ಲಿಸಲಾಗುತ್ತದೆ. ಇಲ್ಲಿ ಬಸ್ ನಿಲ್ದಾಣವಿದ್ದರೂ ಎಲ್ಲಾ ಕಡೆಗೆ ಹೋಗುವ ವಾಹನಗಳು ಬಸ್ ನಿಲ್ದಾಣವನ್ನು ಪ್ರವೇಶಿಸುವುದಿಲ್ಲ.ಹಲವು ಬಸ್ ಗಳು ಸರ್ಕಲ್ ಇದ್ದ ಪ್ರದೇಶದಲ್ಲಿ ನಿಲ್ಲುವುದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿತ್ತು. ಹಲವು ವಾಹನ ಸವಾರರು ಸರ್ಕಲ್ ನಿಯಮ ಪಾಲಿಸದೆ ಬೇಕಾಬಿಟ್ಟಿ ಸಂಚಾರ ನಡೆಸುವುದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತಿದ್ದವು.ಬೇಕಿದೆ ವ್ಯವಸ್ಥಿತ ಸರ್ಕಲ್:ಉಜಿರೆಯಲ್ಲಿ ವ್ಯವಸ್ಥಿತವಾದ ಸರ್ಕಲ್ ನಿರ್ಮಿಸುವುದು ಅತ್ಯಗತ್ಯವಾಗಿದೆ. ಉಜಿರೆ ಮೂಲಕ ದಿನಂಪ್ರತಿ ಹಲವು ಸಾವಿರ ವಾಹನಗಳ ಓಡಾಟ ಇದೆ. ಆದರೆ ಇಲ್ಲಿ ಸರಿಯಾದ ಸಂಚಾರ ವ್ಯವಸ್ಥೆ, ಬಸ್ ನಿಲ್ದಾಣ ಇಲ್ಲದ ಕಾರಣ ಸ್ಥಳೀಯರು ಹಾಗೂ ಪ್ರವಾಸಿಗರು ವಾಹನ ಸವಾರರು ಸಾಕಷ್ಟು ಬವಣೆ ಪಡುವಂತಾಗಿದೆ. ಈ ಕಾರಣದಿಂದ ಉಜಿರೆಗೆ ವ್ಯವಸ್ಥಿತ ಸರ್ಕಲ್ ಹಾಗೂ ಬಸ್ ನಿಲ್ದಾಣದ ಅಗತ್ಯ ಇದೆ. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ವಾರ್ಷಿಕ ಜಾತ್ರೆ ಸಮಯ ಸರ್ಕಲ್ ನಲ್ಲಿ ದೇವರಿಗೆ ಪ್ರತಿ ವರ್ಷ ಪೇಟೆ ಸವಾರಿಯ ಬಳಿಕ ಕಟ್ಟೆ ಪೂಜೆಯು ನಡೆಯುತ್ತದೆ.ಕಾಲೇಜು ರಸ್ತೆ ಬಸ್ ನಿಲ್ದಾಣದ ದುರವಸ್ಥೆಉಜಿರೆಯ ಕಾಲೇಜು ರಸ್ತೆಯಲ್ಲಿ ಪ್ರತಿಷ್ಠಿತ ಸಂಸ್ಥೆಯೊಂದು ಹಲವು ವರ್ಷಗಳ ಹಿಂದೆ ಬಸ್ ನಿಲ್ದಾಣವೊಂದನ್ನು ನಿರ್ಮಿಸಿ ಕೊಟ್ಟಿದೆ. ಧರ್ಮಸ್ಥಳ ಕಡೆ ಹೋಗುವ ಎಲ್ಲಾ ಬಸ್ ಹಾಗೂ ರಾತ್ರಿ ಬೆಂಗಳೂರಿಗೆ ತೆರಳುವ ಖಾಸಗಿ ಕೆಎಸ್ಸಾರ್ಟಿಸಿ ಬಸ್ ಗಳಿಗೆ ಇಲ್ಲಿ ನಿಲುಗಡೆ ನೀಡಲಾಗುತ್ತದೆ. ಪ್ರಸ್ತುತ ಈ ಬಸ್ ನಿಲ್ದಾಣ ಕುಡುಕರ ಕೇಂದ್ರವಾಗಿ ಮಾರ್ಪಟ್ಟಿದೆ. ರಾತ್ರಿ ಹೊತ್ತು ಕುಡುಕರಿಂದ ತುಂಬಿರುವ ಈ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪ್ರವೇಶಿಸಲು ಹಿಂಜರಿಯುತ್ತಾರೆ. ಮಕ್ಕಳು ಒಂಟಿ ಮಹಿಳೆಯರು ಇಲ್ಲಿ ಬಸ್ ಕಾಯಲು ಸಾಧ್ಯವಾಗದ ಪರಿಸ್ಥಿತಿ ಇದೆ. ಇದಲ್ಲದೆ ಈ ಬಸ್ ನಿಲ್ದಾಣದಲ್ಲಿ ದೀಪಗಳ ವ್ಯವಸ್ಥೆಯು ಇಲ್ಲದಿರುವುದು ವಿಪರ್ಯಾಸವಾಗಿದೆ.ಹಗಲು ಹೊತ್ತು ಈ ಬಸ್ ನಿಲ್ದಾಣದ ಪ್ರದೇಶದಲ್ಲಿ ಸಾಕಷ್ಟು ಬಾಡಿಗೆ ಹಾಗೂ ಖಾಸಗಿ ವಾಹನಗಳು ನಿಲ್ಲುವುದರಿಂದ ಬಸ್ ಗಳು ರಸ್ತೆ ಮಧ್ಯೆ ನಿಂತು ಪ್ರಯಾಣಿಕರನ್ನು ಹತ್ತಿಸಿ ಇಳಿಸಬೇಕಿದೆ. ಇದು ಟ್ರಾಫಿಕ್ ಜಾಮ್ ಸಮಸ್ಯೆಗೂ ಕಾರಣವಾಗುತ್ತಿದೆ. ಕಾಮಗಾರಿಗಾಗಿ ಸರ್ಕಲ್ ನ್ನು ತೆರವುಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇಲ್ಲಿ ಸುವ್ಯವಸ್ಥಿತ ಸರ್ಕಲ್ ನಿರ್ಮಾಣವಾಗಲಿದೆ.
ಕೆ.ಟಿ. ಚಂದ್ರಶೇಖರ್, ಇಇ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ದಕ