ಬೆಳ್ತಂಗಡಿ: ಗಾಳಿ ಮಳೆ: ಮೆಸ್ಕಾಂಗೆ 5 ಲಕ್ಷ ರು. ನಷ್ಟ

| Published : May 17 2024, 12:38 AM IST

ಸಾರಾಂಶ

ಬೆಳ್ತಂಗಡಿ ಸಂತೆಕಟ್ಟೆಯ ಕುತ್ಯಾರು ರಸ್ತೆಯಲ್ಲಿ ಬುಧವಾರ ರಾತ್ರಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್ ಮರ ಬೀಳುವ ವೇಳೆ ಜನ, ವಾಹನ ಸಂಚಾರ ಇಲ್ಲದ ಕಾರಣ ಯಾವುದೇ ಅಪಾಯ ಉಂಟಾಗಿಲ್ಲ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ ಬೆಳ್ತಂಗಡಿ, ಅಳದಂಗಡಿ, ನಾರಾವಿ, ಕುದ್ಯಾಡಿ, ಮರೋಡಿ ಮೊದಲಾದ ಕಡೆಗಳಲ್ಲಿ ಬುಧವಾರ ಸಂಜೆ ಮಳೆಯೊಂದಿಗೆ ಗಾಳಿಯು ಬೀಸಿದ ಪರಿಣಾಮ ವಿದ್ಯುತ್ ಕಂಬಗಳು ಹಾಗೂ ಪರಿವರ್ತಕ ನೆಲಕ್ಕುರುಳಿ ಮೆಸ್ಕಾಂಗೆ 5 ಲಕ್ಷ ರು. ನಷ್ಟ ಉಂಟಾಗಿದೆ.ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗದ ನಾರಾವಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ 4 ಎಚ್‌ಟಿ, 7 ಎಲ್ ಟಿ ಕಂಬಗಳು ಮುರಿದುಬಿದ್ದು ಪರಿಸರದಲ್ಲಿ ವಿದ್ಯುತ್ ಪೂರೈಕೆ ಅಸ್ತವ್ಯಸ್ತವಾಯಿತು. ನಾರಾವಿಯ ಮರೋಡಿ ರಸ್ತೆಯಲ್ಲಿ 25 ಕೆವಿ ಸಾಮರ್ಥ್ಯದ ಪರಿವರ್ತಕ ಧರಾಶಾಯಿಯಾಯಿತು. ಪರಿವರ್ತಕ ಅಳವಡಿಸಿದ್ದ ಕಂಬಗಳು ಮುರಿದುಬಿದ್ದವು. ವಿದ್ಯುತ್ ವ್ಯತ್ಯಯ ಉಂಟಾದ ಕಡೆಗಳಲ್ಲಿ ಮೆಸ್ಕಾಂ ಮರು ಸಂಪರ್ಕ ನಿರ್ಮಿಸಿಕೊಡುವ ಕಾಮಗಾರಿ ನಡೆಸಿದೆ.ರಸ್ತೆಗೆ ಬಿದ್ದ ಮರ: ಬೆಳ್ತಂಗಡಿ ಸಂತೆಕಟ್ಟೆಯ ಕುತ್ಯಾರು ರಸ್ತೆಯಲ್ಲಿ ಬುಧವಾರ ರಾತ್ರಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್ ಮರ ಬೀಳುವ ವೇಳೆ ಜನ, ವಾಹನ ಸಂಚಾರ ಇಲ್ಲದ ಕಾರಣ ಯಾವುದೇ ಅಪಾಯ ಉಂಟಾಗಿಲ್ಲ. ಮೆಸ್ಕಾಂ ಸಿಬ್ಬಂದಿ ಮರ ತೆರೆವುಗೊಳಿಸಿ ವಿದ್ಯುತ್ ಪೂರೈಕೆಗೆ ಸಹಕರಿಸಿದರು.

ಬುಧವಾರದ ಸಂಜೆಯ ಗಾಳಿ ಮಳೆಗೆ ಬೆಳ್ತಂಗಡಿ ನಗರದ ಕುತ್ಯಾರು ರಸ್ತೆಯಲ್ಲಿ ಕೃಷ್ಣಪ್ಪ ಭಂಡಾರಿ ಅವರ ದನದ ಕೊಟ್ಟಿಗೆಗೆ ಅಡಕೆ ಮರ ಬಿದ್ದು, ಅಪಾರ ಹಾನಿ ಸಂಭವಿಸಿದೆ.