ಬೆಳ್ತಂಗಡಿ ಮೆಸ್ಕಾಂ ಜನಸಂಪರ್ಕ ಸಭೆ: ಸಮಸ್ಯೆಗಳ ಚರ್ಚೆ

| Published : Feb 24 2025, 12:30 AM IST

ಸಾರಾಂಶ

ಬೆಳ್ತಂಗಡಿ ತಾಲೂಕಿನ ವಿದ್ಯುತ್ ಬಳಕೆದಾರರ ಜನಸಂಪರ್ಕ ಸಭೆ ಉಜಿರೆಯ ಮೆಸ್ಕಾಂ ಉಪ ವಿಭಾಗದ ಕಚೇರಿಯಲ್ಲಿ ಗುರುವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ತಾಲೂಕಿನ ವಿದ್ಯುತ್ ಬಳಕೆದಾರರ ಜನಸಂಪರ್ಕ ಸಭೆ ಉಜಿರೆಯ ಮೆಸ್ಕಾಂ ಉಪ ವಿಭಾಗದ ಕಚೇರಿಯಲ್ಲಿ ಗುರುವಾರ ನಡೆಯಿತು.

ನೂತನ ಸಬ್ ಸ್ಟೇಷನ್ ಫೀಡರ್‌ಗಳನ್ನು ನಿರ್ಮಿಸಲು ಸರ್ಕಾರಿ ಜಾಗ ಇಲ್ಲದಿರುವ ಕಡೆ ಖಾಸಗಿ ಜಾಗಗಳನ್ನು ಖರೀದಿಸಬೇಕು ಎಂಬ ವಿಚಾರವನ್ನು ಕಡಿರುದ್ಯಾವರ ಗ್ರಾಮದ ಸುದರ್ಶನ್ ರಾವ್ ಪ್ರಸ್ತಾಪಿಸಿದರು.

ಈ ವೇಳೆ ಮಾತನಾಡಿದ ಬಂಟ್ವಾಳ ವಿಭಾಗದ ಇಇ ವೆಂಕಟೇಶ್, ಜಿಲ್ಲಾಧಿಕಾರಿಗಳು ನಿಗದಿಪಡಿಸಿದ ದರದಲ್ಲಿ ಸ್ಥಳ ಕೊಡುವವರು ಇದ್ದಲ್ಲಿ ಇಲಾಖೆ ಸಿದ್ಧವಿದೆ ಎಂದರು.

ಬೆಳಾಲಿನಲ್ಲಿ 110 ಕೆವಿ ಸಬ್ ಸ್ಟೇಷನ್ ನಿರ್ಮಾಣಕ್ಕೆ ಅರಣ್ಯ ಇಲಾಖೆಯ ಹಸ್ತಕ್ಷೇಪ ಇರುವ ಕುರಿತು ಸಭೆಗೆ ತಿಳಿಸಲಾಯಿತು. ಬೆಳಾಲು ಫೀಡರ್‌ನಲ್ಲಿ ಹೆಚ್ಚಿನ ವಿದ್ಯುತ್ ಸಮಸ್ಯೆ ಇರುವ ಕುರಿತು ಪದ್ಮಗೌಡ ಗಮನ ಸೆಳೆದರು.

ಬೆಳಾಲು ಫೀಡರ್‌ಗೆ ಕಕ್ಕಿಂಜೆ ಸಬ್ ಸ್ಟೇಷನ್‌ನಿಂದ ವಿದ್ಯುತ್ ಪೂರೈಕೆ ವ್ಯವಸ್ಥೆ ಮಾಡಲಾಗಿದೆ ಇದರಿಂದ ಸಮಸ್ಯೆ ಪರಿಹಾರವಾಗಲಿದೆ ಎಂದು ಅಧಿಕಾರಿ ಉತ್ತರಿಸಿದರು.

ದಾಮೋದರ ಸುರುಳಿ ಮಾತನಾಡಿ, ರೋಸ್ಟರ್, ಪವರ್ ಕಟ್‌ನ ವೇಳಾಪಟ್ಟಿಯನ್ನು ಗ್ರಾಹಕರಿಗೆ ನೀಡುವಂತೆ ಆಗ್ರಹಿಸಿದರು. ಮುಂಡಾಜೆಯ ಅರಳಿ ಕಟ್ಟೆ ಪರಿವರ್ತಕದ ಲೈನ್‌ನ ಸುಮಾರು 100 ಮೀ.ನಷ್ಟು ದೂರಕ್ಕೆ ವಿದ್ಯುತ್ ಕಂಬಗಳಿಲ್ಲದೆ ಅಪಾಯಕಾರಿ ಸ್ಥಿತಿ ಇದೆ ಎಂಬ ವಿಚಾರವನ್ನು ಪುಷ್ಪರಾಜ ಶೆಟ್ಟಿ ಗಮನಕ್ಕೆ ತಂದರು. ಪವರ್ ಮ್ಯಾನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಉಜಿರೆ ಗ್ರಾ.ಪಂ. ಸದಸ್ಯ ನಾಗೇಶ್ ರಾವ್ ಸಭೆಗೆ ತಿಳಿಸಿದರು.

ಜನಸಂಪರ್ಕ ಸಭೆಯಲ್ಲಿ ಬಂದಿರುವ ದೂರುಗಳನ್ನು ಪರಿಶೀಲಿಸಿ ಶೀಘ್ರ ಕ್ರಮ ಕೈಗೊಳ್ಳುವ ಕುರಿತು ಅಧಿಕಾರಿಗಳು ಭರವಸೆ ನೀಡಿದರು.

ಮಂಗಳೂರು ಮೆಸ್ಕಾಂ ವೃತ್ತದ ಎಸ್‌ಇ ಕೃಷ್ಣರಾಜ ಉಪಸ್ಥಿತರಿದ್ದರು. ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗದ ಎಇಇ ಕ್ಲೆಮೆಂಟ್ ಬೆಂಜಮಿನ್ ಬ್ರ್ಯಾಗ್ಸ್ ಸ್ವಾಗತಿಸಿದರು. ಉಜಿರೆ ಉಪ ವಿಭಾಗದ ಎಇಇ ಈ ಪ್ರವೀಣ್ ವಂದಿಸಿದರು.

------------

ಇಕ್ಕಟ್ಟಿನ ಜಾಗದಲ್ಲಿ ಸಭೆ: ಆಕ್ರೋಶ

ಮೆಸ್ಕಾಂ ಕಚೇರಿಯ ತೀವ್ರ ಇಕ್ಕಟ್ಟಿನ ಜಾಗದಲ್ಲಿ ಸಭೆ ನಡೆಸಿರುವುದು ವಿದ್ಯುತ್ ಬಳಕೆದಾರರು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಯಿತು. ಮುಂದಿನ ಸಭೆಯನ್ನು ವಿಶಾಲವಾದ ಜಾಗದಲ್ಲಿ ಆಯೋಜಿಸುವಂತೆ ವಿದ್ಯುತ್ ಬಳಕೆದಾರರು ಆಗ್ರಹಿಸಿದರು.